ಬಹಿರಂಗ
ಶಿವಮೊಗ್ಗ ಸಹ್ಯಾದ್ರಿ ಉತ್ಸವ | ಮಂಗನ ಖಾಯಿಲೆ ; ಸಾಹಿತಿಗಳಿಂದ ವಿರೋಧ
‘ರೋಮ್ ಹತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದ’ ಎನ್ನುವಂತೆ ಮಂಗನ ಖಾಯಿಲೆಯಿಂದ ಎಂಟತ್ತು ಹೆಣಗಳು ಬಿದ್ದು ಜನರು ಸೂತಕ ಆಚರಿಸುತ್ತಿದ್ದರೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಒಂದರ ಮೇಲೊಂದು ಉತ್ಸವಗಳಲ್ಲಿ ಬ್ಯುಸಿಯಾಗಿದ್ದಾರೆ. ಖಾಯಿಲೆಯಿಂದ ಸತ್ತವರ ಕುಟುಂಬಗಳಿಗೆ ಸಾಂತ್ವನ ಹೇಳುವುದು ಬಿಟ್ಟು ಹೆಲಿ ಟೂರಿಸಂ, ಆ ಸಂಭ್ರಮ, ಈ ಕುಣಿತ ಎಂದು ಹೊಣೆಗೇಡಿತನ ಮೆರೆಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಮ್ಮೂರಿನ ಪ್ರಗತಿಪರ, ಬುದ್ಧಿಜೀವಿಗಳು, ಪತ್ರಕರ್ತರು ಸಾತ್ವಿಕ ಪ್ರತಿರೋಧ ಒಡ್ಡುತ್ತಿರುವುದು ಸಮಾಧಾನದ ಸಂಗತಿ.
ಮೊನ್ನೆ ಜಿಲ್ಲೆಯ ಹಿರಿಯ ಬುದ್ಧಿಜೀವಿಗಳಾದ ರಾಜೇಂದ್ರ ಚೆನ್ನಿ ಹಾಗೂ ಶ್ರೀಕಂಠ ಕೂಡಿಗೆ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಡಳಿತದ ಹೊಣೆಗೇಡಿತನವನ್ನು ಖಂಡಿಸಿ, ಸಹ್ಯಾದ್ರಿ ಉತ್ಸವವನ್ನು ರದ್ದು ಪಡಿಸಿ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಸಮರೋಪಾದಿಯ ಕೆಲಸ ಮಾಡಲು ಒತ್ತಾಯಿಸಿದ್ದರು.
ಈಗ ಈ ಮೊದಲು ತಾವು ಸಹ್ಯಾದ್ರಿ ಉತ್ಸವದ ಗೋಷ್ಠಿಗಳಲ್ಲಿ ಭಾಗವಹಿಸಲು ತಾವು ಒಪ್ಪಿಕೊಂಡಿದ್ದ ಆಹ್ವಾನವನ್ನು ತಿರಸ್ಕರಿಸಿ, ರಾಜೇಂದ್ರ ಚೆನ್ನಿ ಹಾಗೂ ಪತ್ರಕರ್ತ ಮಿತ್ರ ಶಶಿ ಸಂಪಳ್ಳಿ ಈ ಉತ್ಸವವನ್ನು ಬಹಿಷ್ಕರಿಸಿತ್ತಿದ್ದಾರೆ.ಈ ಕುರಿತು ಆಯೋಜಕರಿಗೆ ಪತ್ರ ಬರೆದು ತಮ್ಮ ನಿಲುವು ತಿಳಿಸಿದ್ದಾರೆ.ಅವರ ಈ ಗಟ್ಟಿ ನಿಲುವಿಗಾಗಿ ಅಭಿನಂದನೆಗಳು. ಬುದ್ಧಿಜೀವಿಗಳು, ಸಾಹಿತಿಗಳು ಇರಬೇಕಿರುವುದೇ ಹೀಗೆ.
ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ. ಜನರು ಸೂತಕ ಆಚರಿಸುವಾಗ ಹಬ್ಬ ಆಚರಿಸುವ ಜನಪ್ರತಿನಿಧಿಗಳಿಗೆ ಸ್ವಲ್ಪವಾದರೂ ನಾಚಿಕೆಯಾಗಲಿ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401