ದಿನದ ಸುದ್ದಿ
ಸೆ.26 ರಂದು “ಸರ್ವರಿಗೂ ಸಂವಿಧಾನ” ನಾಟಕ ಪ್ರದರ್ಶನ
ಸುದ್ದಿದಿನ,ಧಾರವಾಡ: ರಂಗಾಯಣವು ಡಾ.ಬಿ.ಆರ್ ಅಂಬೇಡ್ಕರ ಅವರ ಆಲೋಚನೆಗಳು, ಸಾಮಾಜಿಕ ಅಸಮಾನತೆ, ಲಿಂಗ ತಾರತಮ್ಯ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸಂವಿಧಾನದಲ್ಲಿರುವ ಇತರೆ ಪ್ರಮುಖವಾದ ವಿಷಯಗಳ ಮೇಲೆ ಬೆಳಕು ಚೆಲ್ಲುವಂತೆ ಸಂವಿಧಾನದ ಕುರಿತು ನಾಟಕವನ್ನು ಸಿದ್ಧಪಡಿಸಿದೆ. ಈಗಾಗಲೇ ಈ ನಾಟಕವು ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಂವಿಧಾನದ ಕುರಿತು ಗ್ರಾಮೀಣ ಜನರಲ್ಲಿ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಇದೀಗ ಧಾರವಾಡ ನಗರದಲ್ಲಿ ಸೆ. 26 ರಂದು ರವಿವಾರ ಸಂಜೆ 7.00 ಕ್ಕೆ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಡಾ.ಟಿ.ಎಂ ಭಾಸ್ಕರ ರಚಿಸಿ, ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿದ ಸರ್ವರಿಗೂ ಸಂವಿಧಾನ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಧೀಶರಾದ ಉಮೇಶ ಅಡಿಗ ಅವರು ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಎಸ್.ಆರ್ ಮಂಜುಳಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವ್ಹಿ.ಡಿ ಕಾಮರೆಡ್ಡಿ, ಹಿರಿಯ ನ್ಯಾಯವಾದಿ ಡಾ. ಲೋಹಿತ ನಾಯ್ಕರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರಂಗಾಯಣದ ನಿರ್ದೇಶಕರಾದ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕರಾದ ಅಶೋಕ ಚಲವಾದಿ, ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಸದಾಶಿವ ಮರ್ಜಿ, ನ್ಯಾಯವಾದಿ ಕೆ.ಎಚ್ ಪಾಟೀಲ, ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ, ಸಾಹಿತಿ ಮಹಾದೇವ ದೊಡಮನಿ, ನಾಟಕ ರಚನಾಕಾರರಾದ ಡಾ. ಟಿ.ಎಂ ಭಾಸ್ಕರ, ರಂಗಸಮಾಜ ಸದಸ್ಯರಾದ ಶ್ರೀಧರ ಹೆಗಡೆ ಹಾಗೂ ಹಿಪ್ಪರಗಿ ಸಿದ್ಧರಾಮ ಅವರು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243