ದಿನದ ಸುದ್ದಿ
ಆಲೂಗಡ್ಡೆ ಬೆಳೆ ಉಳಿಸಲು ಜನಾಂದೋಲನ
ಸುದ್ದಿದಿನ, ಹಾಸನ : ಹಾಸನದ ಅಸ್ಮಿತೆಯಾಗಿರುವ ಆಲೂಗಡ್ಡೆ ಬೆಳೆಯನ್ನು ಉಳಿಸಲು ಜನಾಂದೋಲನ ನಡೆಸಲು ಆಲೂಗಡ್ಡೆ ಬೆಳೆಗಾರರ ದುಂಡುಮೇಜಿನ ಸಭೆ ನಿರ್ಣಯಿಸಿದೆ.
ಹಾಸನದ ಮಾನವಬಂಧುತ್ವ ವೇದಿಕೆ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತಸಂಘ, ಆಲೂಗಡ್ಡೆ ಬೆಳೆಗಾರರ ಹೋರಾಟ ಸಮಿತಿಯು ಆಯೋಜಿಸಿದ್ದ ಆಲೂಗಡ್ಡೆ ಬೆಳೆಗಾರರ ದುಂಡುಮೇಜಿನ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದೆ.
ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಹಾಸನ ತಾಲೂಕಿನಲ್ಲಿ ಬೆಳೆಯುವ ಆಲೂಗಡ್ಡೆಯು ತನ್ನ ವಿಶಿಷ್ಟ ರುಚಿಯಿಂದಾಗಿ ಚಿಪ್ಸ್ ಮಾಡಲು ಉತ್ತಮ ಎಂದು ಹೆಸರಾಗಿದೆ. ಕಳೆದ ಮೂವತ್ತು ನಲವತ್ತು ವರ್ಷಗಳಿಂದ ಸಾವಿರಾರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿ ಆಲೂಗಡ್ಡೆಯನ್ನು ಬೆಳೆಯುತ್ತಿದ್ದಾರೆ.
2001-02ರಲ್ಲಿ ಸುಮಾರು 25,925 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದುದು 2010ರ ಹೊತ್ತಿಗೆ 45 ಸಾವಿರ ಹೆಕ್ಟೇರ್ ಸಮೀಪಕ್ಕೆ ಹೋಗಿತ್ತು. ಆದರೆ ಅದೇ ಬೆಳೆಯು ಈ ವರ್ಷಕ್ಕೆ 13 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ. ಅಂದರೆ 31866 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವುದನ್ನು ಕೈಬಿಡಲಾಗಿದೆ. ಇದರಿಂದ ಸರಿಸುಮಾರು 16 ಸಾವಿರ ರೈತ ಕುಟುಂಬಗಳು ಆಲೂಗಡ್ಡೆ ಬೆಳೆಯನ್ನು ಬೆಳೆಯುವುದನ್ನು ಕೈಬಿಟ್ಟಿವೆ. ಇದಕ್ಕೆ ಪ್ರಮುಖವಾಗಿ ಅಂಗಮಾರಿ ರೋಗ. ಅತಿವೃಷ್ಟಿ, ಅನಾವೃಷ್ಟಿ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯ ಇಷ್ಟು ದೊಡ್ಡ ಪ್ರಮಾಣದ ರೈತರು ಪ್ರಮುಖ ವಾಣಿಜ್ಯ ಬೆಳೆಯಿಂದ ವಿಮುಖರಾಗುತ್ತಿರುವಾಗ ಇದನ್ನು ತಡೆಗಟ್ಟಿ ರೈತರನ್ನು ಸಂರಕ್ಷಿಸಲು ಬೇಕಾದ ಪ್ರಾಮಾಣಿಕವಾದ ವಿಶೇಷ ಪ್ಯಾಕೇಜ್ ವ್ಯವಸ್ಥೆಯನ್ನು ಸರ್ಕಾರ ಇರುವರೆಗೂ ಘೋಷಿಸಿಲ್ಲ. ಆದ್ದರಿಂದ ಜಿಲ್ಲಾಡಳಿತವು ಜಿಲ್ಲಾ ಉಸ್ತವಾರಿ ಸಚಿವರು, ಅಧಿಕಾರಿಗಳು, ಆಲೂಗಡ್ಡೆ ಬೆಳೆ ತಜ್ಞರು, ರೈತರು, ರೈತ ಮುಖಂಡರನ್ನೊಳಗೊಂಡ ಸಮಗ್ರ ಸಭೆಯನ್ನು ಕರೆಯಬೇಕು ಎಂದು ದುಂಡುಮೇಜಿನ ಸಭೆಯು ಆಗ್ರಹಿಸುತ್ತದೆ.
ದುಂಡುಮೇಜಿನ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್‍ಕುಮಾರ್ ವಹಿಸಿದ್ದರು. ರೈತ ಮುಖಂಡರಾದ ಕೊಟ್ಟೂರು ಶ್ರೀನಿವಾಸ್, ಪತ್ರಕರ್ತರಾದ ಆರ್.ಪಿ.ವೆಂಕಟೇಶ್‍ಮೂರ್ತಿ, ಚಲಂ ಹಾಡ್ಲಹಳ್ಳಿ, ಕಾರ್ಮಿಕ ಮುಖಂಡರಾದ ಧರ್ಮೇಶ್, ಮಾದಿಗ ದಂಡೋರ ಸಮಿತಿಯ ವಿಜಯ್‍ಕುಮಾರ್, ಮಹಾಂತಪ್ಪ, ಕೆಪಿಆರ್‍ಎಸ್ ಮುಖಂಡರಾದ ದೇವರಾಜು, ಪ್ರಕಾಶ್, ಗಿಡ್ಡೇಗೌಡ, ಲಕ್ಷ್ಮಣಗೌಡ, ಪರಮೇಶ್, ಮಂಜು, ನಂಜೇಗೌಡ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಮತ್ತಿತರರು ಭಾಗವಹಿಸಿದ್ದರು. ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್ ಸಭೆ ನಿರ್ವಹಿಸಿದರು.
ಹಕ್ಕೊತ್ತಾಯಗಳು
- ಜಿಲ್ಲೆಗೆ ಅಗತ್ಯವಿರುವಷ್ಟು ದೃಢೀಕರಿಸಿದ ಬಿತ್ತನೆ ಆಲೂಗಡ್ಡೆ ಬೀಜಗಳನ್ನು ಸರ್ಕಾರವೇ ಉಚಿತವಾಗಿ ವಿತರಿಸಬೇಕು.
- ಬೆಳೆಗೆ ತಗುಲುವ ಎಲ್ಲಾ ರೀತಿಯ ರೋಗಗಳನ್ನು ಪತ್ತೆಹಚ್ಚಿ ಅವುಗಳ ನಿವಾರಣೆಗೆ ಸೂಕ್ತ ಸಂಶೋಧನೆ ನಡೆಸಿ ಸರ್ಕಾರ ಉಚಿತವಾಗಿ ಕ್ರಿಮಿನಾಶಕಗಳನ್ನು ವಿತರಿಸಬೇಕು.
- ಬೆಳೆಯ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಯನ್ನು ತಂದುಕೊಡಲು ಪೂರಕವಾಗುವಂತೆ ಬೀಜಗಳ ಸಂಶೋದನೆ ನಡೆಸಬೇಕು ಮತ್ತು ಅದಕ್ಕೆ ಅಗತ್ಯವಿರುವ ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡಬೇಕು.
- ಅತಿವೃಷ್ಟಿ ಅಥವಾ ಅನಾವೃಷ್ಟಿ, ರೋಗ ಇನ್ನಾವುದೇ ಕಾರಣಕ್ಕಾಗಿ ಬೆಳೆ ನಷ್ಟವಾದರೂ ಅದನ್ನು ಸರ್ಕಾರ ಭರಿಸಿಕೊಡಬೇಕು ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ವಿಮಾಕಂಪನಿಗಳಿಂದ ಬೆಳೆವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಪ್ರೀಮಿಯಂ ಹಣವನ್ನು ಸರ್ಕಾರವೇ ಭರಿಸಬೇಕು.
- ಬೆಳೆಯನ್ನು ಮಾರಾಟಮಾಡಲು ಹಾಸನದ ಎಪಿಎಂಸಿಯಲ್ಲಿ ಸರ್ಕಾರವೇ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ತಜ್ಞ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಬೆಲೆ ನಿಗದಿ ಮಾಡಬೇಕು.
- ಆಲೂಗಡ್ಡೆಯನ್ನು ಮೌಲ್ಯವರ್ಧನೆ ಮಾಡುವ ಸಲುವಾಗಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಆಲೂಗಡ್ಡೆ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಬೇಕು.
ಆಲೂಗಡ್ಡೆ ಅಲ್ಪಾವಧಿಯಲ್ಲಿ ಬೆಳೆಯುವ ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, 31 ಸಾವಿರ ಹೆಕ್ಟೇರ್ ಭೂಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಕುಸಿತವಾಗಿರುವುದು ಇದು ಜಿಲ್ಲೆಯ ಆರ್ಥಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ಇದುವರೆಗು ನೀಡುತ್ತಾ ಬಂದಿರುವ ಆಲೂಗಡ್ಡೆ ರೈತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಗಮನಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ರೈತರನ್ನು ಮತ್ತು ಕೃಷಿಯನ್ನು ಉಳಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ, ಆಲೂಗಡ್ಡೆ ಬೆಳೆಗಾರರ ಹೋರಾಟ ಸಮಿತಿಯು ಒತ್ತಾಯಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243