ಅಂತರಂಗ

ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ ಸಾವಿತ್ರಿಬಾಯಿ ಫುಲೆ..!

Published

on

ಎಲ್ಲರಿಗೂ ಅಕ್ಷರದವ್ವನ ಜನುಮ ದಿನಾಚರಣೆಯ ಶುಭಾಶಯಗಳು

  • ಸುರೇಶ ಎನ್ ಶಿಕಾರಿಪುರ 

ಭಾರತದ ಇತಿಹಾಸದಲ್ಲಿ ಜ್ಯೋತಿಬಾ ಸಾವಿತ್ರಿಬಾಯಿ ಫುಲೆ ದಂಪತಿಗಳದ್ದು ಒಂದು ಅನನ್ಯ ದಾಂಪತ್ಯ. ಅತ್ಯಂತ ಚಿಕ್ಕವಯಸ್ಸಿನ ಹುಡುಗಿ ಸಾವಿತ್ರಿ ಬಾಲ್ಯವಿವಾಹದ ಬಲೆಗೆ ಬಲಿಯಾಗಿ ತನ್ನ ಎಂಟನೇ ವಯಸ್ಸಿನಲ್ಲಿ ಜ್ಯೋತಿಬಾ ಫುಲೆಯವರನ್ನು ಕೈ ಹಿಡಿಯಬೇಕಾಗಿ ಬಂತು. ಬಹುಷಃ ಆಕೆ ಜ್ಯೋತಿಬಾ ಅವರನ್ನಲ್ಲದೇ ಬೇರಾವುದೋ ಪುರುಷನನ್ನು ಮದುವೆಯಾಗಿದ್ದರೆ ಈ ದೇಶದ ಸಂಪ್ರದಾಯವಾದಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಆಕೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಹೋಗುತ್ತಿದ್ದಳು.

ಆಕೆ ಖಂಡಿತವಾಗಿಯೂ ಕೈ ಹಿಡಿದದ್ದು ತನ್ನನ್ನು ಬೆಳಕಿನೆಡೆಗೆ ಕರೆದೊಯ್ಯುವ ತೇಜಸ್ವೀ ಪುರಷನನ್ನು. ಆರ್ಧ್ರ ಹೃದಯಿಯೂ ಮಾನವೀಯನೂ ವಿವೇಕಿಯೂ ಆಗಿದ್ಧ ಜ್ಯೋತಿಬಾ ಫುಲೆ ಎಂಬ ಪ್ರಬುದ್ಧ ಯುವಕ ತಾನು ಸಂಸಾರವೆಂದರೇನು ದಾಂಪತ್ಯವೆಂದರೇನು ಎಂಬ ಬಗ್ಗೆ ಕಲ್ಪನೆಗಳೇ ಇಲ್ಲದ ಆಡಿ ಕುಣಿದು ಬಾಲ್ಯದ ಸುಖಗಳನ್ನು ಅನುಭವಿಸಬೇಕಾಗಿದ್ದ ಎಳೆಯ ಬಾಲೆಯನ್ನು ತಾನು ಮದುವೆಯಾಗಬೇಕಾಗಿ ಬಂದುದಕ್ಕಾಗಿ ಮಮ್ಮಲ ಮರುಗಿದ್ದ ಚಿಂತೆಗೆ ಬಿದ್ದಿದ್ದ ತಾನು ತಪ್ಪಿತಸ್ಥನಲ್ಲದಿದ್ದರೂ ಈ ಪುರುಷಾಧಿಕ್ಯದ ಪಾಪದ ಕೃತ್ಯಕ್ಕೆ ತಾನೂ ಬಲಿಯಾದವನೆಂಬ ಅರಿವು ಆತನಿಗಿದ್ದೇ ಇತ್ತು.

ತನ್ನ ಮಡದಿಯನ್ನು ಆತ ಸಂಸಾರದ ಕೋಟಲೆಗಳಿಗೆ ದಾಂಪತ್ಯದ ಆಕರ್ಷಣೆಗಳಿ ಬಲಿಹಾಕದೇ ಅವಳ ಉದ್ಧಾರಕ್ಕಾಗಿ ಫಣತೊಟ್ಟ. ತನ್ನ ಮುದ್ದು ಹೆಂಡತಿಗೆ ಸ್ವತಃ ಶಿಕ್ಷಣವನ್ನು ನೀಡತೊಡಗಿದೆ. ಕಲಿಕೆಯಲ್ಲಿ ಗಾಂಭೀರ್ಯ ಕಾರುಣ್ಯ ಪ್ರೇಮ ದೂರದೃಷ್ಟಿ ದಿಟ್ಟ ನಿಲುವು ಎಲ್ಲವೂ ಇದ್ದವು. ಹೆಣ್ಣು ಕಲಿತೇ ಕಲಿತಳು ಕಲಿತು ಕಲಿಸುವವಳಾಗಿ ರೂಪುತಳೆದಳು. ಜ್ಯೋತಿಬಾ ಆಕೆಯನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಿದರು. ಸಾವಿತ್ರಿಬಾಯಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಭೇತಿ ಶಿಕ್ಷಣವನ್ನೂ ಪಡೆದಳು.

ಭಿಡೆ ಎಂಬುವವರ ಮನೆಯಲ್ಲಿ ಆರಂಭವಾದ ಹೆಣ್ಣುಮಕ್ಕಳ ಶಾಲೆಯಲ್ಲಿ ಆಕೆ ಮುಖ್ಯೋಪಾಧ್ಯಾಯಿನಿ ಆದಳು. ಹೆಣ್ಣೊಬ್ಬಳು ಶಿಕ್ಷಕಿಯಾಗುವುದು ಶಿಕ್ಷಣ ನೀಡುವುದು ಹಾಗೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅಂದಿನ ಪುರುಷ ಪ್ರಧಾನ ಜಾತಿ ವ್ಯವಸ್ಥೆಯಲ್ಲಿ ನಿಷಿದ್ಧ ಮತ್ತು ಮಹಾ ಅಪರಾಧ. ಸಂಪ್ರದಾಯವಾದಿಗಳಿಗೆ ಇದು ಆಗಿಬರಲಿಲ್ಲ. ಜ್ಯೋತಿಬಾಳ ನೆಡೆ ಅವರಿಗೆ ತಮ್ಮ ಸನಾತನ ಧರ್ಮಕ್ಕೇ ಇಟ್ಟ ಕೊಡಲಿಯೇಟಿನಂತೆ ಭಾಸವಾಯಿತು.

ಕಲಿಸಲು ಶಾಲೆಗೆ ಹೋಗುವವಳ ಮೇಲೆ ನಿತ್ಯವೂ ಅಡ್ಡಗಟ್ಟಿ ಕೇರಿಗಳ ಇಕ್ಕೆಲದಲ್ಲಿ ನಿತ್ತು ಅವಾಚ್ಯ ಶಬ್ಧಗಳಿಂದ ಬಯ್ಯುವುದು ಕೆಸರು ರಾಡಿ ಸಗಣಿಗಳು ಎರಚುವುದು ಮಣ್ಣು ತೂರುವುದು ಮೊದಲಾದ ವಿಕೃತ ಮಾರ್ಗಗಳ ಮೂಲಕ ಆಕೆಯನ್ನು ಅತೀವವಾಗಿ ಕಾಡುವುದು ಅವಮಾನಿಸುವುದು ಹಲ್ಲೆಗೆ ನೆಡೆಸುವುದು ಇವೆಲ್ಲವನ್ನೂ ಮಾಡಿದರು. ಆಕೆ ಒಮ್ಮೆ ಧೃತಿಗೆಟ್ಟು ತನ್ನಿಂದ ಇದು ಸಾಧ್ಯವಿಲ್ಲವೆಂದು ಪತಿಯ ಬಳಿ ದುಃಖಿಸುತ್ತಾ ಕುಗ್ಗಿ ಕುಸಿದಾಗ ಆತ ಅವಳಲ್ಲಿ ಭರವಸೆ ತುಂಬಿದ ಪ್ರೇರೇಪಿಸಿದ ಹೆಗಲೆಣೆಯಾಗಿ ಅವಳೊಡನೆ ನಿತ್ತ.

ಅದು ಹೂವಿನ ಹಾದಿಯಾಗಿರಲಿಲ್ಲ ಪ್ರತಿ ಹೆಜ್ಜೆಗೆ ವಿಷಜಂತುಗಳು ಎದುರು ನಿಲ್ಲುವ ಕಲ್ಲುಮುಳ್ಳಿನ ಕಠಿಣ ಮಾರ್ಗವಾಗಿತ್ತು. ಹೆಣ್ಣಿಗೆ ಕಾನೂನಿನ ರಕ್ಷಣೆಗಳೇ ಇಲ್ಲದ ಕಾಲದಲ್ಲಿ ಜೀವವನ್ನು ಬೀದಿಯ ದೂರ್ತರ ಎದುರು ನಿತ್ಯವೂ ಸವಾಲಿಗೊಡ್ಡುತ್ತಲೇ ಮತ್ತೆ ಮುನ್ನುಗ್ಗಿದಳು. ದಾರಿಯಲ್ಲಿ ನಿತ್ಯವೂ ಕೆಸರು ಸಗಣಿ ಮಣ್ಣು ಮೆತ್ತಿರುತ್ತಿದ್ದ ಸೀರೆಯನ್ನು ಶಾಲೆಗೆ ಬಂದು ಬಲಾಯಿಸುತ್ತಿದ್ದರು.

ಅದಕ್ಕಾಗೇ ಆಕೆ ಮೊದಲೇ ಮತ್ತೊಂದು ಸೀರೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದಿರುತ್ತಿದ್ದಳು. ಸಾವಿತ್ರಿಬಾಯಿ ಫುಲೆಯವರ ಬೆನ್ನಿಗಿದ್ದು ಕಾದವ ಗಂಡ ಜ್ಯೋತಿ ರಾವ್. ಆತನ ನೈತಿಕ ಬಲ ತನ್ನೊಳಗಿನ ದಿವ್ಯತೆ ಎರಡರ ಅಮೃತವಾಹಿನಿಯೇ ಆಕೆಯನ್ನು ಉದ್ಧರಿಸಿತು ಆಕೆಯಿಂದ ಸ್ತ್ರೀಕುಲವೇ ಬಿಡುಗಡೆಯ ಮಾರ್ಗದಲ್ಲಿ ಕ್ರಮಿಸತೊಡಗಿತು. ಆಕೆ ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ.

ಸಂಪ್ರದಾಯವಾದಿಗಳು ದಂಪತಿಗಳನ್ನು ಕೊಂದು ಬರಲು ಕಳುಹಿದ್ದ ಕೊಲೆಗಾರರನ್ನೇ ಮಕ್ಕಳಂತೆ ಕಂಡು ಮನಪರಿವರ್ತಿಸಿ ಕೊಲೆಯ ಮಾರ್ಗದಿಂದ ಮನುಷ್ಯ ಮಾರ್ಗದಲ್ಲಿ ಮುನ್ನೆಡೆಸಿದ ದಾರ್ಶನಿಕ ಜೋಡಿ ಇದು. ಸ್ತ್ರೀ ಮತ್ತು ಪುರುಷರನ್ನು ಪ್ರಕೃತಿ ಜೋಡಿಯಾಗಿಸುವುದು ಯಾತಕ್ಕಾಗಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಲೇ ಬೇಕು. ದಂಪತಿಗಳ ಇಲ್ಲಿಗೆ ನಿಲ್ಲುವುದಿಲ್ಲ ಯುವ ಸಮುದಾಯ ಅವರ ಕಥನವನ್ನು ಓದಿ ತಿಳಿಯಬೇಕು. ತಿಳಿದು ಬದುಕನ್ನು ಬದುಕುವ ರೀತಿಯನ್ನು ಕಂಡುಕೊಳ್ಳಬೇಕು. ಜಢ ಸಂಪ್ರದಾಯಗಳ ಸಂಕೋಲೆಯನ್ನು ಕಿತ್ತೆಸೆದು ಪ್ರಗತಿಗಾಮಿ ಜೀವನ ಮಾರ್ಗದಲ್ಲಿ ಮುನ್ನೆಡೆಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version