ಅಂತರಂಗ
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ
ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ ಪ್ರೊ. ಎಸ್.ಬಿ.ರಂಗನಾಥ್ ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.
ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.
ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243