ದಿನದ ಸುದ್ದಿ
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಇಂದು ರಾಜ್ಯಮಟ್ಟದ ಸಭೆ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಸುದ್ದಿದಿನ, ಬೆಳಗಾವಿ : ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬಾಕಿ ಬಿಲ್ಲು ಪಾವತಿ, ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇನ್ನಿತರ ವಿಚಾರಗಳ ಕುರಿತು ನಾಳಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಕಬ್ಬಿನಿಂದ ಕೇವಲ ಸಕ್ಕರೆ ಮಾತ್ರ ಉತ್ಪಾದಿಸುವುದಿಲ್ಲ. ಎಥನಾಲ್ ಸೇರಿದಂತೆ ಇನ್ನಿತರ ಉತ್ಪನ್ನಗಳ ಉತ್ಪಾದನೆಗೆ ಆದ್ಯತೆ ನೀಡಿದ್ದು ಇದಕ್ಕೆ ಪೂರಕವಾಗಿ ಎಥನಾಲ್ ನೀತಿ ರೂಪಿಸಲಾಗಿದೆ. ಕೇಂದ್ರದ ಕಿಸಾನ ಸಮ್ಮಾನ ಮಾದರಿಯಲ್ಲಿ ರಾಜ್ಯದಲ್ಲಿ ನೇಕಾರ ಸಮ್ಮಾನ ಯೋಜನೆ ಜಾರಿಗೊಳಿಸಲಾಗಿದ್ದು, ಸಂಕಷ್ಟದಲ್ಲಿರುವ ನೇಕಾರರಿಗೆ ನೀಡುತ್ತಿದ್ದ 2 ಸಾವಿರ ರೂಪಾಯಿಯನ್ನು ನೆರವನ್ನು 5 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243