ದಿನದ ಸುದ್ದಿ

ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿರುವಂತಹುದು. ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ ನಾಯಕರು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಪರ ಅಪನಂಬಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಆರ್.ಎಸ್.ಎಸ್ ಮತ್ತು ಬಿಜೆಪಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಪ್ರೇಮದ ಪಾಠ ಮಾಡುವ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ತ್ಯಾಗ, ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರ್.ಎಸ್‌.ಎಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ.

ಹೆಡ್ಗೇವಾರ್, ಗೊಲ್ವಾಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಸ್ವಾಮಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ. ಮಹಾತ್ಮ ಗಾಂಧಿಯವರಂತೆ ನಾನು ರಾಮ ಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ ಪುರುಷ ರಾಮ. ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ ಇಲ್ಲ. ರಾಮಭಕ್ತರೆಂದರೆ ಕಾಯುವವರೋ? ಕೊಲ್ಲುವವರೋ?

ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 3 ಕೆ.ಜಿ ಗೆ ಇಳಿಸಿ ಬಡಜನರ ಊಟ ಕಸಿದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನನಗಿದೆ. ಆಗ ಪ್ರತೀ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದರು.

ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಇಂದು ದೇಶದ ಉತ್ಪಾದನಾ ವಲಯ ನಿಷ್ಕ್ರಿಯಗೊಂಡಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಬೀಡಿ ಉದ್ಯಮವನ್ನು ನಂಬಿಕೊಂಡಿದ್ದ 50,000 ಜನರ ಬದುಕು ಬೀದಿಪಾಲಾಗಿದೆ. ಇದರ ಪುನಶ್ಚೇತನಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version