ರಾಜಕೀಯ

ಯಡಿಯೂರಪ್ಪ ಕುದುರೆ ವ್ಯಾಪಾರಕ್ಕೆ ನಿಂತಿರುವುದು ನಾಚಿಜೆಗೇಡಿನ ಸಂಗತಿ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ, ಬೆಂಗಳೂರು : ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನತೆ ನೀಡಿದ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಆದರೆ ರಾಜ್ಯ ಬಿಜೆಪಿ ನಾಯಕರು ತಮಗೆ ಬಹುಮತವಿಲ್ಲದಿದ್ದರೂ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರದ ಗದ್ದುಗೆ ಏರುವ ಪ್ರಯತ್ನವನ್ನು ಮಾತ್ರ ಇಂದಿಗೂ ಕೈಬಿಟ್ಟಿಲ್ಲ. ಇದು ನಾಡಿನ ಜನಾದೇಶವನ್ನು ತಿರಸ್ಕರಿಸಿದಂತಲ್ಲವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದ ಇಂದಿನವರೆಗೂ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡದೆ ಕೇವಲ ಸರ್ಕಾರ ಬೀಳಿಸುವುದರಲ್ಲೇ ಮಗ್ನವಾಗಿದೆ. ಹಲವು ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಿದ್ದಾರೆ, ಕೆಲವು ಜೆಡಿಎಸ್ ಶಾಸಕರು ಮುಂಬರುವ ದಿನಗಳಲ್ಲಿ ಬಿಜೆಪಿ ಸೇರುತ್ತಾರೆ, ನಾಳೆ ಸರ್ಕಾರ ಬೀಳಲಿದೆ, ತಿಂಗಳ ಅಂತ್ಯಕ್ಕೆ ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ ಎಂದಿದ್ದಾರೆ.

ಇದಷ್ಟೇ ಅಲ್ಲದೆ ಶಾಸಕರಿಗೆ ಹಣದ ಆಮಿಷವೊಡ್ಡಿ, ಬೆದರಿಸಿ ಸರ್ಕಾರ ಸಮರ್ಪಕ ಆಡಳಿತ ನಡೆಸದಂತೆ ಅಸ್ಥಿರಗೊಳಿಸುವ ಪ್ರಯತ್ನವನ್ನು ಅವರು ನಿರಂತರ ಮಾಡುತ್ತಿದ್ದಾರೆ. ಇವೆಲ್ಲ ಸಂವಿಧಾನ ಬಾಹಿರವಾದ ಚಟುವಟಿಕೆಗಳಲ್ಲವೇ? ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಭಾವಿಸಿದ್ದೇನೆ.
ಪ್ರಜಾಪ್ರಭುತ್ವ ವ್ಯವಸ್ಥೆ ಎಂದಮೇಲೆ ಪಕ್ಷದೊಳಗೆ ಸಣ್ಣ ಪುಟ್ಟ ಮನಸ್ತಾಪಗಳಿರುತ್ತದೆ, ಸರ್ಕಾರ ಬೀಳಿಸುವುದೊಂದೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ಈ ಹಿಂದೆಯೇ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲಾಗಿತ್ತು, ಆದರೆ ಬಹುಮತ ಸಾಬೀತು ಮಾಡಲಾಗದೆ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಆ ನಂತರದಲ್ಲಿ ಜನಾದೇಶವನ್ನು ಗೌರವಿಸಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವುದು ಬಿಟ್ಟು ಕುದುರೆ ವ್ಯಾಪಾರಕ್ಕೆ ನಿಂತಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಅನ್ನಭಾಗ್ಯ, ಕೃಷಿಹೊಂಡ, ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಹೀಗೆ ಹಿಂದಿನ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಈಗಲೂ ಮುಂದುವರೆಯುತ್ತಿದೆ. ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಈ ಯೋಜನೆಗಳೇಕೆ ಇನ್ನೂ ಜಾರಿಯಾಗಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿಯವರು ಏನು ಮಾಡುತ್ತಾರೆ ಎಂದು ಈ ಹಿಂದೆಯೂ ನೋಡಿದ್ದೇವೆ, ಮತ್ತೆ ಅಧಿಕಾರ ಸಿಕ್ಕರೆ ಅದನ್ನೇ ಮಾಡುತ್ತಾರಷ್ಟೆ ಎಂದು ವ್ಯಂಗವಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version