ದಿನದ ಸುದ್ದಿ

ಕಳಸಾ-ಬಂಡೂರಿ ನಾಲೆ ನಿರ್ಮಾಣ | ಕರ್ನಾಟಕಕ್ಕೆ ಮತ್ತೊಮ್ಮೆ ದ್ರೋಹವೆಸಗಿದ ಬಿಜೆಪಿ : ಸಿದ್ದರಾಮಯ್ಯ

Published

on

ಸುದ್ದಿದಿನ,ಬೆಂಗಳೂರು : ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ನೀಡಿರುವ ಅನುಮತಿಯನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅಮಾನತ್ ನಲ್ಲಿ ಇಡುವ ಮೂಲಕ ಕರ್ನಾಟಕಕ್ಕೆ ಮತ್ತೊಮ್ಮೆ ದ್ರೋಹ ಎಸಗಿದೆ. ವಾಜಪೇಯಿ ಕಾಲದಲ್ಲಿ ಪ್ರಾರಂಭವಾದ ಬಿಜೆಪಿಯ ಅನ್ಯಾಯದ ಪರಂಪರೆ ಮುಂದುವರೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕಳಸಾ-ಬಂಡೂರಿ ನಾಲೆಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅಕ್ಟೊಬರ್‌ನಲ್ಲಿ ಹೇಳಿದ್ದರು. ಉಪಚುನಾವಣೆಯಲ್ಲಿ ರಾಜ್ಯದ ಜನರ ದಾರಿ ತಪ್ಪಿಸಲು ಸಚಿವರು ಈ ಸುಳ್ಳು ಹೇಳಿದ್ದರು. ಇದು ಕನ್ನಡಿಗರ ನಂಬಿಕೆಗೆ ಬಗೆದ ದ್ರೋಹ. ಮಹದಾಯಿ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವುದು ಒಂದು ಕುಂಟು ನೆಪ. ಇದು ಕಳೆದ‌ ಅಕ್ಟೋಬರ್ ನಲ್ಲಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಗೊತ್ತಿರಲಿಲ್ಲವೇ? ಸತ್ಯ ಏನೆಂದರೆ ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರದ ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.

ಮಹದಾಯಿ ನೀರು ಹಂಚಿಕೆಯಲ್ಲಿ ನ್ಯಾಯ ಕೋರಿ ಮುಖ್ಯಮಂತ್ರಿಯಾಗಿದ್ದ ನಾನು ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ದಿದ್ದೆ. ಆಗ ಯಡಿಯೂರಪ್ಪ ಸೇರಿದಂತೆ ಯಾವ ಬಿಜೆಪಿ ನಾಯಕರೂ ಪ್ರಧಾನಿ ಮೋದಿ ಎದುರು ತುಟಿಬಿಚ್ಚಿರಲಿಲ್ಲ. ಈಗಲೂ ಇವರು ಬಾಯಿ ಬಿಡಲಾರರು. ರಾಜ್ಯದ ಜಾಗೃತ ಜನತೆಯೇ ಮಾತನಾಡಬೇಕಾಗುತ್ತದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಚುನಾವಣಾ ಕಾಲದಲ್ಲಿ ಜನತೆಯನ್ನು‌‌ ಮರುಳು ಮಾಡಿದ್ದಿರಲ್ಲಾ ಬಿಜೆಪಿ
ನಾಯಕರೇ, ಭಾಗ್ಯದ ವಿಷಯ ಪಕ್ಕಕ್ಕಿಡಿ ಈಗಿನ ದೌರ್ಭಾಗ್ಯದಿಂದ ಕರ್ನಾಟಕವನ್ನು ಪಾರು ಮಾಡಿ ಸಾಕು. ನಮ್ಮ ನೆಲ-ಜಲ-ಭಾಷೆಗೆ ಕೇಂದ್ರದಿಂದ ಅನ್ಯಾಯವಾದಾಗ ಮೊದಲು ದನಿ ಎತ್ತಬೇಕಾದವರು ರಾಜ್ಯದ ಸಂಸದರು ಮತ್ತು ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಚಿವರು. ಇವರೆಲ್ಲರೂ ರಾಜ್ಯಕ್ಕೆ ನಿಷ್ಠರಾಗಿ ಕರ್ತವ್ಯ ಪಾಲನೆ ಮಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version