ದಿನದ ಸುದ್ದಿ
ಬಲವಂತದ ಸಾಲ ವಸೂಲಿಗೆ ಪರವಾನಿಗೆ | ರಾಜ್ಯ ಸರ್ಕಾರದಿಂದ ರೈತರಿಗೆ ದ್ರೋಹ : ಸಿದ್ದರಾಮಯ್ಯ ಆಕ್ರೋಶ
ಸುದ್ದಿದಿನ, ಬೆಂಗಳೂರು : ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಂದ ಸಹಕಾರಿ ಸಂಸ್ಥೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದೆಂದು ನಮ್ಮಸರ್ಕಾರ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದು ಖಂಡನೀಯ. ಈ ಮೂಲಕ ಬಲವಂತದ ಸಾಲ ವಸೂಲಿಗೆ ಪರವಾನಿಗೆ ನೀಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯದ ಹದಿನೈದು ಜಿಲ್ಲೆಯ 55 ತಾಲ್ಲೂಕುಗಳು ಅತಿವೃಷ್ಟಿಗೆ ತುತ್ತಾಗಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರವನ್ನು ಇನ್ನೂ ನೀಡದಿರುವ ಸರ್ಕಾರ ಈಗ ಬಲತ್ಕಾರದಿಂದ ಬಾಕಿ ಸಾಲ ವಸೂಲಿ ಮಾಡಲು ಹೊರಟಿರುವುದು ಅಮಾನವೀಯ ನಡೆ. ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವು ಅನಿರೀಕ್ಷಿತವಾದುದೇನಲ್ಲ, ರೈತರ ಪರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ರೈತರನ್ನು ಗುಂಡಿಕ್ಕಿ ಸಾಯಿಸಿದ ಪಕ್ಷದ ನಿಜಬಣ್ಣ ನಿಧಾನವಾಗಿ ಈಗ ಬಯಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಅತಿವೃಷ್ಟಿ ಮತ್ತು ಅನಾವೃಷ್ಟಿ ಪೀಡಿತ ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ರೈತರ ಜೊತೆ ನಮ್ಮ ಪಕ್ಷ ಕೂಡಾ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243