ದಿನದ ಸುದ್ದಿ
ಕರ್ನಾಟಕ ಬಸವಣ್ಣ, ಸರ್ವಜ್ಞ, ಕನಕದಾರಸ ಪುಣ್ಯನೆಲ, ಇಲ್ಲಿ ಕೋಮುವಾದಿಗಳು ಬೇರೂರಲು ಬಿಡಬೇಡಿ : ಸಿದ್ದರಾಮಯ್ಯ ಮನವಿ
ಸುದ್ದಿದಿನ, ಬಾಗಲಕೋಟೆ : ಕೋಮುಗಲಭೆ ಸೃಷ್ಟಿಸುವವರಿಗೆ, ದಲಿತ ವಿರೋಧಿಗಳಿಗೆ, ಬಾಂಬು ಹಾಕಿ ಅಮಾಯಕರನ್ನು ಕೊಲ್ಲುವವರಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಮಾಲೆಗಾಂವ್ ಸ್ಪೋಟದ ಪ್ರಮುಖ ಆರೋಪಿಗೆ ಬಿಜೆಪಿ ಟಿಕೆಟ್ ನೀಡಿರುವುದರ ಹಿಂದಿನ ಉದ್ದೇಶವಾದರೂ ಏನು? ಇದರಿಂದ ಸಮಾಜಕ್ಕೆ ಅವರು ನೀಡುವ ಸಂದೇಶವಾದರೂ ಏನು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಭಾನುವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಹುನಗುಂದದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ವೀಣಾ ಕಾಶಪ್ಪನವರ್ ಅವರಿಗೆ ಮತ ನೀಡುವಂತೆ ಕೋರಿದ ಅವರು, ಕರ್ನಾಟಕ ಬಸವಣ್ಣ, ಸರ್ವಜ್ಞ, ಕನಕದಾಸರಂತಹ ಪುಣ್ಯಪುರುಷರ ನೆಲ. ಸೌಹಾರ್ದತೆಯ ಈ ನಾಡಿನಲ್ಲಿ ಕೋಮುವಾದಿಗಳನ್ನು ಬೇರೂರಲು ಬಿಡಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.
ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರ ‘ಸಬ್ ಕಾ ಸಾಥ್ ಸಬ್ ಕ ವಿಕಾಸ್’ ಬರಿ ಘೋಷಣೆಗಷ್ಟೇ ಸೀಮಿತ. ಅವರಿಗೆ ಸರ್ವರ ಅಭಿವೃದ್ಧಿಯ ನಿಜಕಾಳಜಿ ಇದ್ದಿದ್ದರೆ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುತ್ತಿರಲಿಲ್ಲವೇ? ಕೇವಲ ಘೋಷಣೆಗಳಿಂದ ಈ ಸಮುದಾಯ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಅವರದೇ ಬಿಜೆಪಿ ಸರ್ಕಾರ ಕೊನೆಯ ದಿನಗಳನ್ನು ಎಣಿಸುತ್ತಿದೆ, ಇತ್ತ ರಾಜ್ಯ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಸರ್ಕಾರ ರಚಿಸುವ ಭ್ರಮೆಯಲ್ಲಿದ್ದಾರೆ. ನರೇಂದ್ರ ಮೋದಿಯವರು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಐಟಿ ದಾಳಿ ಮಾಡಿಸುವ ಬದಲು, ಶಾಸಕರ ಖರೀದಿಗೆ ಕಾದು ಕುಳಿತಿರುವ ರಾಜ್ಯ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಮಾಡಿಸಲಿ ಎಂದು ಸವಾಲು ಹಾಕಿದರು.
ರಾಹುಲ್ ಗಾಂಧಿಯವರು ನುಡಿದಂತೆ ನಡೆದು 5 ರಾಜ್ಯಗಳ ರೈತರ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಗರೀಬಿ ಹಠಾವೋ ಘೋಷಣೆ ಭಾಷಣಕ್ಕಷ್ಟೇ ಸೀಮಿತವಲ್ಲ. ನುಡಿದಂತೆ ನಡೆಯುವವರು ನಾವು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಡಕುಟುಂಬಕ್ಕೆ ವಾರ್ಷಿಕ ರೂ.72,000 ನೀಡುತ್ತೇವೆ. ಇದರಿಂದ ದೇಶದ ಬಡತನವೂ ನಿರ್ಮೂಲನೆಯಾಗಲಿದೆ ಎಂದು ವಿಶ್ವಾಸ ನೀಡಿದರು.
ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎನ್ನುವವರು, ಪೊಲೀಸ್ ಬ್ಯಾರಿಕೇಡ್ ಮುರಿಯುವವರು, ಹುತಾತ್ಮ ಪೊಲೀಸರನ್ನು ಅವಮಾನಿಸುವವರನ್ನು ಇಟ್ಟುಕೊಂಡು ಬಿಜೆಪಿ ದೇಶ ಪ್ರೇಮದ ನಾಟಕವಾಡುತ್ತಿದೆ. ಹಾಗಾಗಿ ಜನತೆ ವಿವೇಚನೆಯಿಂದ ಮತ ಚಲಾಯಿಸಬೇಕು. ದುಷ್ಟರ ಕೈಯಲ್ಲಿ ಅಧಿಕಾರ ಕೊಟ್ಟು ಪರಿತಪಿಸುವ ಬದಲು, ರಾಷ್ಟ್ರ ಕಟ್ಟುವ ಕಾಂಗ್ರೆಸ್ ಕೈಯನ್ನು ಬೆಂಬಲಿಸಿ ಎಂದು ಕರೆ ಕೊಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243