ರಾಜಕೀಯ
ಅತೃಪ್ತ ಶಾಸಕರಿಗೆ ಬುದ್ಧಿಮಾತು ಹೇಳಿದ ಸಿದ್ದು
ಸುದ್ದಿದಿನ,ಬಾದಾಮಿ : ಕಾಂಗ್ರೆಸ್ ಪಕ್ಷದ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳಬಹುದಾತಂಹ ನಿರ್ಧಾರಗಳಿಗೆ ನಮಗೆಲ್ಲ ಒಮ್ಮತವಿದ್ದು, ಪಕ್ಷದೊಳಗಿನ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಹಾಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಸೂಚಿಸಿರುವುದಿಲ್ಲ. ಈ ಬಗ್ಗೆ ಎಐಸಿಸಿಯು ಯಾವ ರೀತಿ ಹೇಳುತ್ತದೆಯೋ ಹಾಗೆ ನಡೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಮಾತನಾಡಿದ ಅವರು, ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಸ್ಥಾನ ಸೃಷ್ಟಿಸಲು ಯಾವ ಚರ್ಚೆಗಳೂ ನಡೆದಿಲ್ಲ. ಆದರೆ ಇದರ ಬಗ್ಗೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಅತೃಪ್ತ ಶಾಸಕರ ಮನವೊಲಿಸಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾತನಾಡಿದ್ದಾರೆ. ನಾನೂ ಕೆಲ ಶಾಸಕರೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದೇನೆ. ಶಾಸಕ ಎಂ.ಬಿ.ಪಾಟೀಲ್ ಜತೆಗೆ ಸ್ವತಃ ರಾಹುಲ್ ಗಾಂಧಿಯವರೇ ಮಾತನಾಡಿದ್ದು, ಅಸಾಮಾಧಾನ ಹೊಂದಿರುವ ಶಾಸಕರಿಗೆ ಸಮಾಧಾನ ಪಡಿಸಿದ್ದಾರೆಯೇ ವಿನಃ, ಭರವಸೆಯ ಮಾತುಗಳನ್ನಾಡಿರುವುದಿಲ್ಲ.
ಸಂದರ್ಭಕ್ಕೆ ತಕ್ಕಂತೆ ಪಕ್ಷ ಕೈಗೊಂಡಿರುವ ನಿರ್ಧಾರವನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ರಾಜಕೀಯ ಪರಿಸ್ಥಿತಿಯ ಆಳ ಅಗಲ ನೋಡಿಕೊಂಡೇ ಹೈಕಮಾಂಡ್ ನಿರ್ಧಾರ ಮಾಡಿರುತ್ತದೆ. ಅದೆಲ್ಲವನ್ನೂ ನಾವು ಪಕ್ಷದ ನಿಷ್ಠಾವಂತನಾಯಕರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅತೃಪ್ತ ಶಾಸಕರಿಗೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದರು.
ಪ್ರಸ್ತುತ ಸಂದರ್ಭವನ್ನಿರಿತು ಪಕ್ಷದ ನಿರ್ಧಾರವನ್ನು ಎಲ್ಲರೂ ಗೌರವಿಸ ಬೇಕು. ಈಗಿನ ರಾಜಕೀಯ ಸ್ಥಿತಿಗತಿಗಳನ್ನು ಅರಿತುಕೊಂಡೇ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದ್ದು, ನಾವೆಲ್ಲರೂ ಪಕ್ಷದ ಮುಂದಿನ ಬೆಳವಣಿಗೆಯ ಬಗೆಗೆ ಕೆಲಸ ಮಾಡಬೇಕಿದೆ ಎಂದು ಅತೃಪ್ತ ಶಾಸಕರಿಗೆ ಬುದ್ಧಿಮಾತು ಹೇಳಿದರು.
ಬಾದಾಮಿ ಕ್ಷೇತ್ರದ ಜನತೆ ನನ್ನ ಮೇಲೆ ತೋರಿದ ಪ್ರೀತಿ-ವಿಶ್ವಾಸ ಎಂದೆಂದೂ ಮರೆಯಲಾರೆ. ನನ್ನ ರಾಜಕೀಯ ಬದುಕಿನ ನಿರ್ಣಾಯಕ ಚುನಾವಣೆಯಲ್ಲಿ ಕೈ ಹಿಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನನ್ನ ಯಾತ್ರೆ ಯನ್ನು ಇಂದು ಕೂಡಾ ಮುಂದುವರಿಸಿದ್ದೇನೆ. pic.twitter.com/QQvVrU0DCc
— Siddaramaiah (@siddaramaiah) June 10, 2018