ಭಾಮಿನಿ

some love stories end, before it’s start…!

Published

on

ಪ್ರತೀ ಮನಸು ತನ್ನ ಯೌವನದ ಮೊದಮೊದಲ ಕ್ಷಣಗಳ ಗೂಡಿಗೆ ಮರಳಲು ಜೀವನವಿಡೀ ಹಾತೊರೆಯುತ್ತದೆ . ಆ ವಯಸ್ಸಿನಲ್ಲಿ ಕಂಡಷ್ಟು ಕನಸುಗಳು, ಸವೆಸಿದಷ್ಟೂ ಹಾದಿ. ಬಯಸಿದಷ್ಟೂ ಬಯಕೆಗಳು , ಮರೆಯದಷ್ಟು ನೆನಪುಗಳು. ಯಾವುದೋ ಒಂದು ಭಾವ ಎಲ್ಲರನ್ನು ಬಿಡದಂತೆ ಬಂಧಿಸಿ ಬಿಟ್ಟಿರುತ್ತದೆ. ಅದೆಂದರೆ ಹಾಗೇ. ಅದೊಂದು ಸುಂದರ ಅನುಭವ. ಎಲ್ಲರಲ್ಲೂ  ಒಂದಲ್ಲಾ ಒಂದು ಹಂತದಲ್ಲಿ , ಒಂದಲ್ಲಾ ಒಂದು  ಬಗೆಯಲ್ಲಿ ಆ ಭಾವದ ಸೆಳೆತಕ್ಕೆ ಒಳಗಾದವರೇ. ಯಾಕೆಂದರೆ ಆ ಭಾವ ಅಷ್ಟು ಆಕರ್ಷಣೀಯವಾದುದು. ಎಂಥಹ ಕಲ್ಲು ಹೃದಯವನ್ನು ಒಂದು ಕ್ಷಣ ಕರಗಿಸಿ ಬಿಡುವ  ಅಹಿಂಸಾ ಭಾವ.

ಅಂದು ಮಳೆ  ಧರೆಗೆ  ಮುತ್ತಿಕ್ಕಿ ಸಾಕಾಗಿ ಮರಳಿತ್ತು. ಸೂರ್ಯನ ಕಿರಣಗಳು ಅಲ್ಲೆಲ್ಲೊ ಅವಿತು  ಕುಳಿತಿದ್ದವು .ಆಕಾಶದಲ್ಲಿ ಮಳೆಬಿಲ್ಲು ಮೂಡಿ  ರಂಗೇರಿಸಿತ್ತು. ಮೆಲ್ಲಗೆ ಆಕೆ  ಹೆಜ್ಜೆ  ಇಡುತ್ತಾ ಬಸ್  ನಿಲ್ಲುವಲ್ಲಿಗೆ ಬಂದಳು.  ಮಳೆ ನೀರ ಅಭಿಷೇಕ ಮಾಡಿಕೊಂಡ , ಗುಂಗುರು  ಕೂದಲಿನ , ಗಂಭೀರ ಮೊಗದ ಚೆಲುವನೊಬ್ಬ  ಪಕ್ಕದಲ್ಲೇ  ನಿಂತಿದ್ದಾನೆ. ಒಂದೇ ಕ್ಷಣ ದಲ್ಲಿ ಒಬ್ಬರನೊಬ್ಬರು  ನೋಡಿಕೊಂಡು ದೃಷ್ಟಿ ಬೇರೆ ಕಡೆಗೆ ತಿರುಗಿಸಿದರು. ಅಷ್ಟೆ. ಆಕೆಯ ಮೊಗದಲ್ಲಿ ಅದೇನೋ ಮಂದಹಾಸ. ಮನದೊಳಗೆ ಅದ್ಯಾವುದೋ ಭಾವ ವಿಜೃಂಭಿಸಿದೆ. ಆತನಲ್ಲೂ ಆ ಭಾವ ಮಿಂಚಿ ಮರೆಯಾಗಿರಬಹುದು. ಅವನು ಮನುಷ್ಯನೇ ಅಲ್ಲವೇ ?? ಒಂದು  ಕ್ಷಣ ಮೌನದಲ್ಲೇ ನಗುವಿದೆ , ಸುಂದರ ಭಾವವಿದೆ . ಅರ್ಥವಾಗದ ಭಾಷೆ ಇದೆ. ಹೇಳಲಾಗದ ಅನುಭವವಿದೆ. ಆದರೆ ತುಂಬಾ ಸುಂದರವಾಗಿದೆ ಅನಿಸಿದೆ. ಆ  ಭಾವ ಅಲ್ಲಿಗೆ ಮುಗಿದಿದೆ ಎಂದುಕೊಳ್ಳುವಷ್ಟರಲ್ಲೇ ಅದು ನೆನಪಾಗಿ ಮತ್ತೆ ಕಾಡಿದೆ. ಮತ್ತೆ ಮತ್ತೆ  ಕಾಡಿದೆ. ನೋಡಬೇಕು ಎಂಬ ಹಂಬಲದಿಂದಲ್ಲ. ಎಂಥ ಸುಂದರ ಅನುಭವ  ಅದು ಎಂಬ ನಗುವಿನಿಂದ.

ಭಾವನೆಗಳೆ ಹಾಗೆ. ನಮ್ಮವೇ ಆದರೂ ನಮ್ಮ ಪರ್ಮಿಶನ್ ಇಲ್ಲದೇ ಮನದೊಳಗೆ ನುಗ್ಗಿ ಬಿಡುತ್ತವೆ. ಕೆಲವೊಮ್ಮೆ ನರಳಿಸಿಯೂ ಬಿಡುತ್ತವೆ.  ಪ್ರತಿಯೊಬ್ಬರು ಅಂತಹ ಒಂದು ಸೆಳೆತಕ್ಕೆ ಒಳಗಾದವರೇ. ಕೆಲವರು  ಅದ ನೆನೆದು ನಕ್ಕು ಸುಮ್ಮನಾದರೆ, ಮತ್ತೆ ಕೆಲವರು ಅದನ್ನೇ ಹಿಂಬಾಲಿಸುವರು . ಆ ಭಾವವನ್ನು ಮರಳಿ ಪಡೆಯಬೇಕೆಂಬ ಅತಿಯಾಸೆ  ಹುಟ್ಟಿಸಿ ಬಿಡುತ್ತದೆ. ಕೆಲವೊಮ್ಮೆ ಆ ಅತಿಯಾಸೆಯೇ ಬದುಕಲು ಪ್ರೇರಣೆ ಯಾಗಿಬಿಡುತ್ತೆ. ಸೋತ ಮನಕ್ಕೆ ಸಾಂತ್ವನ ಹೇಳುತ್ತೆ. ನಗುವುದ ಮರೆತ ಮೊಗದಲ್ಲಿ ನಗೆಯ ಬುಗ್ಗೆ ಚಿಮ್ಮಿಸಿ ಬಿಡುತ್ತೆ. ಫೀಲಿಂಗ್ಸ್ ಗಳನ್ನೇ ಹೊಂದಿಲ್ಲದ ಭಾವಾಂಗವಿಕಲನನ್ನೂ ಬಾಚಿ ತಬ್ಬಿ ಬಿಡುತ್ತದೆ. ನೀನೀಕೇ ಹೀಗೇ….. ಇದ್ದರೂ ಇಲ್ಲದ ಹಾಗೇ. ಇರದಿದ್ದರೂ ಇದ್ದ ಹಾಗೆ.. ವಾಸ್ತವದಲ್ಲಿ  ಜೀವಿಸಲು ಬಿಡದೇ ಅದೇಕೆ ಭ್ರಮಾ ಲೋಕಕ್ಕೆ ಪದೇ ಪದೇ ಎಳೆದೊಯ್ಯುವೇ.. ನಿನಗೆ ಗೊತ್ತ.. ಆ ಲೋಕದಿಂದ ಈ ಲೋಕಕ್ಕೆ ಮರಳಲು  ಪಾಪ ನಿನ್ನ ಕೈ ವಶವಾದ ಭಾವ ಜೀವಿಗಳು  ಅದೆಷ್ಟು ಪರಿಪಾಟಲು ಪಡಬೇಕು. ನೀನೂ ನಮ್ಮಂಥೆ ಸಾಮಾನ್ಯ ಮನುಷ್ಯ ನಾಗಿರಬೇಕಿತ್ತು..ಆಗ ತಿಳಿಯುತ್ತಿತ್ತು.

ಮೊದಮೊದಲಲ್ಲಿ ಆ ಭಾವವನ್ನು ನೆನೆದಾಗ

ಭಾವನಾ ಲೋಕದಲ್ಲಿ

ಭಾವಭಾವಗಳ ಬೆಸುಗೆಯಲ್ಲಿ

ಭಾವಾನುರಾಗದ ಬಾಂಧವ್ಯದಲ್ಲಿ

ಬೆಳಕಾಗಿ ಬಂದ ನೀನ್ಯಾರು ?

ಎಂಬ  ಪ್ರಶ್ನೆ ಕಾಡಿದ್ದು ಅಷ್ಟಿಷ್ಟಲ್ಲ. ಅದು ಪ್ರೀತಿಯೇ ?, ಸೆಳೆತವೇ  ಬಹುಶಃ ಮೊದಲ ನೋಟದ  ಪ್ರೀತಿ ಅಂತರಲ್ಲಾ ಅದೇ ಇರಬೇಕು. ಆ ಭಾವನೆ ಎಂದಿಗೂ ಅಸ್ಪಷ್ಟ.. ಆದರೆ  ಪ್ರೀತಿ ಎಂತಾದರೆ ಪ್ರೀತಿಯಷ್ಟೇ ಖುಷಿ ಕೊಡುತ್ತೆ. ಪ್ರೀತಿಯಲ್ಲ ಎಂತಾದರೆ  ಪ್ರೀತಿಗಿಂತಲೂ ಹೆಚ್ಚಿನ  ಖುಷಿ ಕೊಡುತ್ತೆ. ಸದ್ಯಕ್ಕಂತು ಪ್ರೀತಿಯ ಒಂದು ಭಾವ..,.ಒಟ್ಟಿನಲ್ಲಿ ಅದೊಂದು  ಭಾವದೆದೆಯೊಳಗಿನ ಮಿಂಚಿನ  ಸಂಚಲನ. ಅಂದು ಅವಳ ಮುಖದಲ್ಲಿ ಮೂಡಿದ   ಮಂದಹಾಸ  ವರ್ಣಿಲಸಾಧ್ಯ. ಯಾಕೆಂದರೆ   ಆ ಭಾವ ಒಂದು ಬಗೆಯ ಲೋಹಚುಂಬಕ.ಎಲ್ಲರನ್ನೂ ಆಕರ್ಷಿಸಿಬಿಡುತ್ತದೆ. ಅದಕ್ಕಿರುವ ಗುರುತ್ವ ಶಕ್ತಿ ಅಂಥದ್ದು.

ಪ್ರೀತಿಗೂ ವಿವಿಧ ಮಜ್ಜಲುಗಳುಂಟು. ಅದರಲ್ಲಿ ಇದೂ ಒಂದಿರಬಹುದು.ಆಗಾಗ ನೆನಪಾಗಿ ಕಚಗುಳಿ ಇಡುವ ಅದೆಷ್ಟೋ ಭಾವಲಹರಿಗಳ ಪೈಕಿ ಇದೆಂದಿಗೂ ಮೊದಲ ಸ್ಥಾನದಲ್ಲೇ.. ಯಾರೋ ಎಲ್ಲಿಂದ ಬಂದವರೋ , ಅದೇನು ನಂಟೋ … ಬಂದು ಬಿಡುತ್ತಾರೆ. ಭಾವನೆಗಳನ್ನು ಬಂಧಿಸಿ ಬಿಡುತ್ತಾರೆ. ಸಮುದ್ರದ ದಡದಲ್ಲಿ  ನಿಂತಾಗ ಅಲೆಗಳು ಬಂದು ಅಪ್ಪಳಿಸುವಂತೆ  ಮನದೊಳಗೆ ಆಗಾಗ ಸುಳಿದು ಮರೆಯಾಗಿ ಬಿಡುತ್ತಾರೆ.ಒಂದಷ್ಟು ಕಲ್ಪನೆಗಳು, ಒಂದಷ್ಟು ಕನಸುಗಳನ್ನ ಕೊಟ್ಟು ಮತ್ತೆಂದೂ ಸಿಗುವುದಿಲ್ಲ ಎಂದು ಟಾಟಾ ಮಾಡಿ ಹೊರಟು  ಬಿಡುತ್ತಾರೆ , ಮತ್ತೆ ಸಿಗುತ್ತಾರೇನೊ ಎಂಬ ನಿರೀಕ್ಷೆ ಹುಟ್ಟಿಸಿ…..

ಬದುಕೇ ಹಾಗೇ ಇಲ್ಲಿ ಸುಂದರವಾಗಿ ಬದುಕಬೇಕು ಎಂದು ಕೊಂಡರೆ  ಜೊತೆ ಯಲ್ಲೇ  ಇರಬೇಕು ಎಂದೇನಿಲ್ಲ. ಜೊತೆಗಿದ್ದ ನೆನಪುಗಳೇ ಸಾಕು.ಇಂತಹ ಅದೆಷ್ಟೋ ಸೆಳೆತಗಳೇ ಸಾಕು ಭಾವ ಪ್ರಪಂಚವೆಂಬ ಸುಂದರ ಲೋಕದಲ್ಲಿ ಒಂದು  ರೌಂಡ್ ಹಾಕಿ ಬಂದು ಬಿಡಬಹುದು.. ಎಲ್ಲೋ ಯಾರೋ ಒಂದು ಕ್ಷಣ ಬದುಕಿನಲ್ಲಿ ಬಿರುಗಾಳಿಯಂತೆ ಬಂದು ತಂಗಾಳಿಯಂತೆ ಹೋಗಿರಬಹುದು. ಪದೇ ಪದೇ ನೆನಪಾಗಿ ಮನೋಲ್ಲಾಸ ತಂದಿರಬಹುದು. ಮುಳ್ಳಿನ  ದಾರಿ ಇದ್ರೂ ಅವರನ್ನು ಕಂಡಾಗ ಹೂವಿನ ಹಾದಿಯಂತೆ ಭಾಸ ವಾಗಬಹುದು. ಅವ್ರೇ ಜೊತೆ ಯಾದ್ರೆ ಎಷ್ಟು ಚೆಂದ ಎಂದೆನಿಸಬಹುದು.  ಆ ಮಳೆ ಹುಡುಗಿಗೂ ಆ ಮಳೆಬಿಲ್ಲಿನಂಥ ಹುಡುಗನ ನೋಡಿ ಅದೇ ಅನಿಸಿದೆ. ಆದರೆ ಅದು  ಎಂದೂ ಸಾಧ್ಯವಿಲ್ಲ. ಯಾಕಂದ್ರೆ ……. some love stories end, before it’s start..!

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version