ಲೈಫ್ ಸ್ಟೈಲ್

ಭಾರತೀಯರಲ್ಲಿ ‘ಹೃದಯಾಘಾತ’ಗಳಿಗೆ ವಿಶೇಷ ಕಾರಣಗಳು : ಮಿಸ್ ಮಾಡ್ದೆ ಓದಿ

Published

on

ಹೃದಯಬೇನೆ ಮತ್ತು ಹೃದಯಾಘಾತಗಳಿಗೆ ಕಾರಣಗಳಾದ ಧೂಮಪಾನ, ಅಧಿಕ ರಕ್ತದೊತ್ತಡ, ಮಧುಮೇಹ ರೋಗ, ಬೊಜ್ಜುದೇಹ, ರಕ್ತದಲ್ಲಿ ಅಧಿಕ ಮಟ್ಟದ ಕೊಲೆಸ್ಟರಾಲ್‌, ದೈಹಿಕ ವ್ಯಾಯಾಮದ ಕೊರತೆ ಮತ್ತು ತರಾತುರಿ ಜೀವನ ಶೈಲಿಗಳಲ್ಲದೆ ವ್ಯಕ್ತಿಯು ಭಾರತೀಯನಾಗಿರುವುದೇ ಹೃದಯಬೇನೆ ಮತ್ತು ಹೃದಯಾಘಾತಗಳಿಗೆ ಒಂದು ಮುಖ್ಯ ಕಾರಣವಾಗಿರುವುದು” ಎಂಬ ಪ್ರತಿಪಾದನೆಯನ್ನು ಮಂಡಿಸಲಾಗಿದೆ.

ಭಾರತೀಯರ ದೇಹದಲ್ಲಿ ಪರಂಪರೆಯಾಗಿ ಬಂದಿರುವ ‘ಲೋಭಿ ಜೀನ್ಸ್’ಗಳೂ(thrifty genes) ಹೃದಯಾಘಾತಗಳಿಗೆ ಒಂದು ಕಾರಣವೆಂದು ತಿಳಿದು ಬಂತು. ಲೋಭಿ ಜೀನ್ಸ್ ದೇಹದಲ್ಲಿನ ಆಹಾರ ಶೇಖರಣೆಗೆ ಸಂಬಂಧಪಟ್ಟ ಜೀನ್ಸ್.ದೈಹಿಕ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗಿರುವುದಕ್ಕಿಂತಲೂ ಹೆಚ್ಚಿಗೆ ಪ್ರಮಾಣದಲ್ಲಿ ಸೇವಿಸಿದ ಆಹಾರವನ್ನು ದೇಹವು ಕೊಬ್ಬಿನ ರೂಪದಲ್ಲಿ ತನ್ನಲ್ಲಿ ಶೇಖರಿಸಿ ಕೊಳ್ಳುವಂತೆ ಲೋಭಿ ಜೀನ್ಸ್ ಮಾಡುವುವು.

ಭಾರತದಲ್ಲಿ ನಮ್ಮ ಪೂರ್ವಿಕರು ಆಹಾರದ ಕೊರತೆಯಿಂದಲೋ(ಬರಗಾಲ, ಕ್ಷಾಮ), ಸಾಂಪ್ರದಾಯಕ ಅಭ್ಯಾಸದಿಂದಲೋ ಉಪವಾಸಗಳಿಗೆ ಹೊಂದಿಕೊಂಡಿದ್ದರು, ಆಹಾರ ಅಭಾವದಿಂದ ಅವರ ದೇಹವು ಬಳಲದಂತೆ ಪ್ರಕೃತಿಯು ಅವರ ದೇಹದಲ್ಲಿ ಲೋಭಿ ಜೀನ್‌ಗಳನ್ನು ಸೃಷ್ಟಿ ಮಾಡಿತು. ಇದೊಂದು ಪ್ರಕೃತಿ ಕೊಟ್ಟಿರುವ ಸಂರಕ್ಷಣೆಯ ವ್ಯವಸ್ಥೆ (defence mechanism), ತನ್ನ ಕ್ರಿಯೆಗೆ ಬೇಕಾಗುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ ಆಹಾರವನ್ನು ದೇಹವು ಕೊಬ್ಬಿನ ರೂಪಕ್ಕೆ ಪರಿವರ್ತಿಸಿ, ತನ್ನಲ್ಲಿ ಶೇಖರಿಸಿ ಕೊಳ್ಳುವುದು. ಹೀಗೆ ಶೇಖರಿಸಿಟ್ಟುಕೊಂಡ ಕೊಬ್ಬನ್ನು ಬರಗಾಲ ಹಾಗೂ ಉಪವಾಸ ಪರಿಸ್ಥಿತಿಗಳಲ್ಲಿ ತನ್ನ (ದೈಹಿಕ) ಚಟುವಟಿಕೆಗಳ ಶಕ್ತಿಗೆ ಉಪಯೋಗಿಸಿಕೊಳ್ಳುವುದು – ಈ ವ್ಯವಸ್ಥೆಯ ಸಾರಾಂಶ.

ಇದೊಂದು ಭಾರತೀಯರಲ್ಲಿ ತಲತಲಾಂತರದಿಂದ ಬಂದಿರುವ ಪ್ರಕೃತಿಯ ವರದಾನ. ಹಿಂದಿನ ಕಾಲದಲ್ಲಿ ಉಪವಾಸ, ಕ್ಷಾಮ ಪರಿಸ್ಥಿತಿಗಳನ್ನು ಎದುರಿಸುವ ಸಲುವಾಗಿ ದೇಹವು ಸೇವಿಸಿದ ಆಹಾರವನ್ನು ನಾಜೂಕಾಗಿಯೂ, ಜೋಪನವಾಗಿಯೂ ಉಪಯೋಗಿಸಬೇಕಾಗಿತ್ತು. ಇಂದಿನ ದಿನಗಳಲ್ಲಿ ಕ್ಷಾಮ, ಬರಗಾಲಗಳು ಮಾಯವಾಗಿವೆ. ಉಪವಾಸದ ದಿನಗಳು ಇಲ್ಲವಾಗಿವೆ. ಅನೇಕ ಭಾರತೀಯರಲ್ಲಿ ಆಹಾರ ಸೇವನೆಯು (ಪ್ರಮಾಣದಲ್ಲಿ) ಹೆಚ್ಚುತ್ತದೆ.

ದೈಹಿಕ ಶ್ರಮವು ಕುಗ್ಗುತ್ತಿದೆ. ಓಡಾಡಲು ವಾಹನಗಳ ಸೌಕರ್ಯ, ಮನೆಯ ಕೆಲಸಗಳಿಗೂ ಬಗೆ ಬಗೆಯ ಯಂತ್ರಗಳ ವ್ಯವಸ್ಥೆ, ಕೂರುವುದು-ಕುಳಿತು ತಿನ್ನುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯಗಳು. ಒಂದೆಡೆ ಅಗತ್ಯಕ್ಕಿಂತಲೂ ಹೆಚ್ಚಿನ ಆಹಾರ ಸೇವನೆ, ಇನ್ನೊಂದು ದೈಹಿಕ ಶ್ರಮವಿಲ್ಲದ ಜೀವನ ಶೈಲಿ, ಆದರೆ ಲೋಭಿ ಜೀನ್‌ಗಳ (thrifty genes) ಪ್ರಭಾವವು ಮುಂದುವರಿಯುತ್ತಲೇ ಇದೆ ದೇಹದಲ್ಲಿ ಮತ್ತಷ್ಟು ಕೊಬ್ಬಿನ ಶೇಕರಣೆ. ಒಟ್ಟಿನಲ್ಲಿ ಇದರ ತಾತ್ಪರ್ಯ ದೈಹಿಕ ಕ್ರಿಯೆಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯು ಬೊಜ್ಜು ದೇಹ ಮತ್ತು ಮಧುಮೇಹ ರೋಗಿಗಳಿಗೆ ದಾರಿ ಮಾಡಿಕೊಟ್ಟಿರುವುವು, ತನ್ಮೂಲಕ ಹೃದಯಬೇನೆ ಹಾಗೂ ಹೃದಯಾಘಾತಗಳಿಗೆ ನಾಂದಿಯಾಗುವುದು.

ದಕ್ಷಿಣ ಏಷ್ಯಾ ಖಂಡದ ಜನರ ದೇಹದಲ್ಲಿ ಹೋಮೋಸಿಸ್ಟಿನ್ (homocystine) ಎಂಬ ವಸ್ತುವು ಇತರೆ ದೇಶಗಳ ಪ್ರಜೆಗಳಿಗಿಂತ ಹೆಚ್ಚಿರುವುದು. ಹೆಚ್ಚಿನ ಮಟ್ಟದಲ್ಲಿನ ಹೋಮೋಸಿಸ್ಟಿನ್ ಮ್ಯ(hyper homocystinaemia) ರಕ್ತನಾಳಗಳನ್ನು (ಕರೋನರಿ ರಕ್ತನಾಳಗಳಲನ್ನು ಕೂಡಿ) ಗಡಸುಮಾಡುವುದರ ಮೂಲಕ ಹೃದಯಾಘಾತಗಳಿಗೆ ಕಾರಣವಾಗುವುದು.

ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿಯೇ ದೇಹದಲ್ಲಿ ಹೋಮೋಸಿಸ್ಟಿನ್ ಮಟ್ಟವು ಹೆಚ್ಚಿರಬಹುದು. ಆಹಾರದಲ್ಲಿ ಫೋಲಿಕ್ ಆಸಿಡ್ ( folic acid ) ಅಭಾವದಿಂದಲೂ ದೇಹದಲ್ಲಿ ಹೋಮೋಸಿಸ್ಟಿನ್ ಮಟ್ಟವು ಹೆಚ್ಚುವುದು. ಒಟ್ಟಿನಲ್ಲಿ ಭಾರತೀಯರಲ್ಲಿ ಹಲವಾರು ರಿಸ್ಕ್ ಫ್ಯಾಕ್ಟರುಗಳು ಒಂಟಿ ಒಂಟಿಯಾಗಿಯೂ, ಜೊತೆಯಾಗಿಯೂ ಹೃದಯಾಘಾತಗಳಿಗೆ ಕಾರಣಗಳಾಗುವುವು.

ಭಾರತೀಯರಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬರುವ ಹೃದಯಬೇನೆ, ಹೃದಯಾಘಾತಗಳಿಗೆ ಇನ್ನೂ ಕೆಲವು ವಿಶೇಷ ಕಾರಣಗಳನ್ನೂ ಗುರುತಿಸಲಾಗಿದೆ. ಇವು ದೇಹದ ಲೈಪೋಪ್ರೋಟೀನ್-ಎ( lipoprotein-a ) ಮತ್ತು ಹೋಮೋಸಿಸ್ಟಿನ್ ಗಳು ( homocystein) . ಲೈಪೋಪ್ರೋಟೀನ್-ಎ ರಕ್ತನಾಳಗಳ ಗಡುಸಾಗುವಿಕೆಗೆ ಒಂದು ವಿಶೇಷ ಕಾರಣವಾಗಿರುವುದು. ಅನೇಕ ಭಾರತೀಯರ ದೇಹದಲ್ಲಿ ಅನುವಂಶಿಕವಾಗಿ ಲೈಪೋಪ್ರೋಟೀನ್-ಎ ಹೆಚ್ಚಿನ ಮಟ್ಟದಲ್ಲಿ ಕಂಡುಬರುವುದು.

ಡಾ. ವಿ. ಪರಮೇಶ್ವರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version