ದಿನದ ಸುದ್ದಿ

ಸಮೀಪಿಸುತ್ತಿದೆ ಎಸ್.ಎಸ್.ಎಲ್.ಸಿ ಪರೀಕ್ಷೆ ; ಹೆಚ್ಚಾಗುತ್ತಿದೆ ಅಂಕ ಗಳಿಕೆಯ ನಿರೀಕ್ಷೆ..?

Published

on

ಸಾಂದರ್ಭಿಕ ಚಿತ್ರ
  • ಕುಮಾರಸ್ವಾಮಿ.ವಿ.ಕೆ,ಮುಖ್ಯ ಶಿಕ್ಷಕರು,ಸಿದ್ಧಾರ್ಥ ಆಂಗ್ಲ ಪ್ರೌಢಶಾಲೆ,ತೋಟಗೆರೆ, ಬೆಂಗಳೂರು ಉತ್ತರ

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈಗ ದಿನಗಣನೆ ಆರಂಭವಾಗಿದೆ. ನಿರಂತರ ಅಭ್ಯಾಸದಲ್ಲಿರುವ ವಿದ್ಯಾರ್ಥಿಗಳು ಕೆಲವೇ ದಿನಗಳಲ್ಲಿ ಪರೀಕ್ಷೆ ಬರೆದು ನಿರಾಳಗೊಳ್ಳಲಿದ್ದಾರೆ. ವರ್ಷಪೂರ್ತಿ ಅಭ್ಯಾಸ ಮಾಡಿದ ಪಾಠಗಳನ್ನು ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ಬರಯುವುದು ಅತ್ಯಂತ ಸವಾಲಿನ ಕೆಲಸವೂ ಹೌದು. ಹೀಗಾಗಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಇಲ್ಲೊಂದಿಷ್ಟು ಸೂಚನೆಗಳು.

ಪುನರ್ಮನನವಷ್ಟೇ ಬಾಕಿ

ವಿದ್ಯಾರ್ಥಿಗಳು ಈಗಾಗಲೇ ನಿರಂತರ ಅಭ್ಯಾಸದಲ್ಲಿ ತೊಡಗಿದ್ದು, ಪರೀಕ್ಷೆ ಬರೆಯಲು ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಎಲ್ಲವನ್ನೂ ಓದಲು ಸವiಯಾವಕಾಶ ಇಲ್ಲದಿರುವುದರಿಂದ ಈಗಾಗಲೇ ಮಕ್ಕಳು ಕಲಿತಿರುವ ವಿಷಯಗಳನ್ನು ಪುನರರ್ಮನನ ಮಾಡಬೇಕಿದೆ. ತಾವು ತಯಾರಿಸಿಟ್ಟುಕೊಂಡಿರುವ ಮುಖ್ಯಾಂಶಗಳು, ಟಿಪ್ಪಣಿಗಳು ಇತ್ಯಾದಿ ಅಧ್ಯಯನ ಸಾಮಗ್ರಿಗಳನ್ನು ದಿನಕ್ಕೊಮ್ಮೆ ಮೆಲುಕು ಹಾಕುವುದರಿಂದ ಪರೀಕ್ಷೆಗೆ ಸಾಕಷ್ಟು ಅನುಕೂಲವಾಗುತ್ತದೆ.

ಒತ್ತಡ ಬೇಡ

ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಸೇರಿ ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿಯಾಗಿದೆ. ಸದರಿ ಪರೀಕ್ಷೆಗಳಲ್ಲಿ ಮಕ್ಕಳಿಗೆ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ನಿರ್ದೇಶನಗಳು ದೊರೆತಿರುತ್ತವೆ. ಆದ್ದರಿಂದ ಮಕ್ಕಳು ಯಾವುದೇ ಹಂತದಲ್ಲಿ ತಮ್ಮ ಮೇಲೆ ಒತ್ತಡ ಹಾಕಿಕೊಳ್ಳದೆ ನಿರಾತಂಕವಾಗಿದ್ದಾಗ ಮಾತ್ರ ಹೆಚ್ಚು ಅಂಕ ಗಳಿಸಲು ಸಾಧ್ಯ. ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲವಾಗಿದೆ.

ಎರಡು ವರ್ಷಗಳ ಅಂತರ

ಹಾಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ತಯಾರಿರುವ ವಿದ್ಯಾರ್ಥಿಗಳು ಶಾಲೆಗಳಲ್ಲಿ ನೇರ ಪರೀಕ್ಷೆ ಬರೆದು ಎರಡು ವರ್ಷಗಳಾಗಿವೆ. ಏಳನೇ ತರಗತಿಯ ಪರೀಕ್ಷೆ ಮುಗಿಸಿದ ನಂತರ ಕೊರೋನಾ ಕಾರಣದಿಂದ ಬಹುತೇಕ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆದಿವೆ. ಹೀಗಾಗಿ ಮಕ್ಕಳಿಗೆ ಸಹಜವಾಗಿಯೇ ಶೈಕ್ಷಣಿಕ ಅಂತರ ಕಾಡುತ್ತಿರುತ್ತದೆ. ಅದೂ ಅಲ್ಲದೇ ಬರವಣಿಗೆ ಶೈಲಿಯೂ ಬದಲಾಗಿರುತ್ತದೆ. ಹೀಗಾಗಿ ಮಕ್ಕಳು ಉಳಿದಿರುವ ಕಾಲಾವಧಿಯಲ್ಲಿ ಹೆಚ್ಚು ಬರವಣಿಗೆಗೆ ಮಹತ್ವ ಕೊಡಬೇಕಿದೆ.

ಪಠ್ಯ ಪುಸ್ತಕವೆಂಬ ಸ್ನೇಹಿತ

ಮಕ್ಕಳಲ್ಲಿ ಹತ್ತಾರು ರೀತಿಯ ಅಧ್ಯಯನ ಸಾಮಗ್ರಿಗಳು ಈಗಾಗಲೇ ಇರಬಹುದು ನಿಜ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಯಾವ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಓದಿಗೆ ಪ್ರಾಮುಖ್ಯತೆ ನೀಡುತ್ತಾರೋ, ಸಹಜವಾಗಿಯೇ ಅವರ ಅಂಕಗಳಿಕೆ ಹೆಚ್ಚಾಗುತ್ತದೆ. ಪರೀಕ್ಷೆಗೆ ಬರುವ ಯಾವುದೇ ಪ್ರಶ್ನೆಗಳು ಪಠ್ಯ ಪುಸ್ತಕವನ್ನು ಆಧರಿಸಿರುತ್ತವೆ. ಆದ್ದರಿಂದ ಮಕ್ಕಳು ಹೆಚ್ಚಾಗಿ ಪಠ್ಯ ಪುಸ್ತಕವನ್ನು ಒಳ್ಳೆಯ ಸ್ನೇಹಿತನಂತೆ ಬಳಸಿಕೊಳ್ಳಬೇಕಿದೆ.

ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು! :

ಬಹುತೇಕ ವಿದ್ಯಾರ್ಥಿಗಳು ಮಾಡುತ್ತಿರುವ ದೊಡ್ಡ ತಪ್ಪೇನೆಂದರೆ ಪ್ರಶ್ನೆ ಪತ್ರಿಕೆಯನ್ನು ಓದಿದಾಗ ತಮಗೆ ಗೊತ್ತಿಲ್ಲದಿರುವ ಯಾವುದೋ ಒಂದೆರಡು ಪ್ರಶ್ನೆಗಳ ಬಗ್ಗೆ ಗಾಬರಿಯಾಗಿ ಅದನ್ನೇ ಚಿಂತಿಸುತ್ತಾ ಕುಳಿತು, ಗೊತ್ತಿರುವ ಪ್ರಶ್ನೆಗಳ ಉತ್ತರವನ್ನೂ ಮರೆಯುತ್ತಿದ್ದಾರೆ. ಇದರಿಂದ ಅವರ ಅಂಕ ಗಳಿಕೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ಖಚಿತ. ಆದ್ದರಿಂದ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ರೂಢಿಸಿಕೊಳ್ಳಬೇಕಿದೆ.

ಹಳೆಯ ಪ್ರಶ್ನೆ ಪತ್ರಿಕೆಗಳ ವಿಮರ್ಶೆ

ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಸಹಾಯ ಮಾಡುವುದೇ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ವರದಾನವೇ ಆಗಿದೆ. ಪ್ರೌಢ ಶಿಕ್ಷಣ ಮಂಡಳಿಯಲ್ಲಿರುವ ಲಭ್ಯವಿರುವ ಹಿಂದಿನ ಮೂರು ನಾಲ್ಕು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳು ಅಭ್ಯಸಿಸಿದಾಗ ಅವರಿಗೆ ಪರೀಕ್ಷೆ ಬರೆಯಲು ಇನ್ನೂ ವಿಶ್ವಾಸ ಹೆಚ್ಚಾಗುತ್ತದೆ. ಅಲ್ಲದೇ ಗೊತ್ತಿಲ್ಲದಿರುವ ಸುಮರು ಪ್ರಶ್ನೆಗಳಿಗೆ ಉತ್ತರವೂ ಸಿಗುತ್ತದೆ.

ಶಿಕ್ಷಕರೊಂದಿಗೆ ಸಂಪರ್ಕ

ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಅಭ್ಯಸಿಸುವ ಮುನ್ನ ಸಂಬAಧಿಸಿದ ವಿಷಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸ್ವಯಂ ಅಭ್ಯಾಸ ಮಾಡಿದಾಗ ಎಲ್ಲವೂ ಗೊಂದಲಮಯವಾಗಿ ಪರೀಕ್ಷೆಗೆ ತೊಡಕಾಗುವುದು ಖಚಿತ. ಆದ್ದರಿಂದ ತಮಗೆ ಏನೇ ಸಂದೇಹಗಳು ಬಂದಲ್ಲಿ ಕೂಡಲೇ ಅದನ್ನು ಶಿಕ್ಷಕರಿಂದ ಬಗೆಹರಿಸಿಕೊಂಡು ಮುಂದೆ ಸಾಗಬೇಕು.

ಬಿಡುವಿಲ್ಲದ ಓದು ಬೇಡ

ಹೆಚ್ಚು ಅಂಕಗಳಿಕೆ ನಿರೀಕ್ಷೆಯಲ್ಲಿರುವ ಮಕ್ಕಳು ಎರಡು – ಮೂರು ಗಂಟೆಗಳ ನಿರಂತರ ಅಭ್ಯಾಸದಲ್ಲಿ ತೊಡಗುವುದರಿಂದ ಅವರ ಸ್ಮರಣ ಶಕ್ತಿ ಕಡಿಮೆಯಾಗುವುದು ಖಚಿತ. ಆದ್ದರಿಂದ ಮಕ್ಕಳು ಕನಿಷ್ಠ ಅರ್ಧ ಗಂಟೆ ಓದಿ ನಂತರ ಹತ್ತರಿಂದ ಹದಿನೈದು ನಿಮಿಷಗಳ ಬ್ರೇಕೆ ಪಡೆದಾಗ ಓದಿದ ವಿಚಾರಗಳು ಮನಸ್ಸಿನಲ್ಲೇ ಉಳಿಯುತ್ತವೆ. ಓದುವಾಗ ಯಾವುದೇ ವಿಧಧ ಗದ್ದಲವಿರದ ಸ್ಥಳದ ಆಯ್ಕೆ ಅತಿ ಅಗತ್ಯ.

ಪರೀಕ್ಷೆಗೆ ಅಗತ್ಯವಾದ ಪ್ರಮುಖ ಸೂಚನೆಗಳು

  1. ಬರವಣಿಗೆ ಸ್ಫುಟವಾಗಿರಲಿ ಸಮಯದ ಹೊಂದಾಣಿಕೆ ಅತ್ಯಗತ್ಯ
  2. ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿ ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದೆ ಬರೆಯಿರಿ
  3. ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ ಮರೆಯದೆ ಪ್ರವೇಶ ಪತ್ರವನ್ನು ಒಯ್ಯಿರಿ
  4. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಪರೀಕ್ಷೆಗೆ ಬೇಕಾದ ಉಪಕರಣಗಳನ್ನು ಮರೆಯದೆ ತೆಗೆದುಕೊಂಡು ಹೋಗಿ
  5. ಪರೀಕ್ಷೆಗೆ ಮುನ್ನ ಅನಗತ್ಯ ಚರ್ಚೆ ಬೇಡ ಪರೀಕ್ಷೆಗೆ ಒಂದು ಗಂಟೆಗಿಂತ ಮುಂಚೆ ಓದುವುದನ್ನು ನಿಲ್ಲಿಸಿ
  6. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿರಿ
  7. ವದಂತಿಗಳಿಗೆ ಕಿವಿ ಕೊಡಬೇಡಿ
  8. ಸಡಿಲವಾದ ಉಡುಪುಗಳನ್ನು ಧರಿಸಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸ್ವೀಕರಿಸಿ
  9. ಪರೀಕ್ಷೆ ಮುಗಿಯವರೆಗೂ ಮೊಬೈಲ್, ಟಿವಿ ವೀಕ್ಷಣೆಯಿಂದ ದೂರವಿರಿ ನಿಯಮಿತ ನಿದ್ದೆ, ಧ್ಯಾನ, ವ್ಯಾಯಾಮಗಳಂತಹ ಕ್ರಿಯೆ ನಿಮ್ಮ ಸ್ಮರಣಯನ್ನು ಹೆಚ್ಚು ಮಾಡುತ್ತದೆ.
  10. ಎಲ್ಲಾ ವಿಷಯದ ಪರೀಕ್ಷೆ ಮುಗಿಯುವವರೆಗೂ ಮಾದರಿ ಉತ್ತರಗಳ ಬಗ್ಗೆ ಚಿಂತಿಸದಿರಿ ಕೇವಲ ಅಂಕಗಳಿಗಾಗಿ ಅಲ್ಲ, ಉತ್ತಮ ಭವಿಷ್ಯಕ್ಕಾಗಿ ಪರೀಕ್ಷೆ ಬರೆಯಿರಿ.
  11. ಮುಖ್ಯಾಂಶಗಳಿಗೆ ಅಡಿಗೆರೆ ಹಾಕಿರಿ ಅಪರಿಚಿತರಿಗೆ ನಿಮ್ಮ ನೋಂದಣಿ ಸಂಖ್ಯೆಯನ್ನು ನೀಡದಿರಿ.
  12. ಕೊರೊನಾ ನಿಯಮಗಳನ್ನು ತಪ್ಪದೇ ಪಾಲಿಸಿ ಉತ್ತರ ಪತ್ರಿಕೆಯನ್ನು ಹಿಂತಿರುಗಿಸುವ ಮುನ್ನ ಗಮನವಿಟ್ಟು ಪರಿಶಿಲೀಸಿ.
  13. ಎಲ್ಲಾ ಪ್ರಶ್ನೆಗಳಿಗೂ ತಪ್ಪದೇ ಉತ್ತರಿಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಕರ ನಿರ್ದೇಶನದಂತೆ ಸಹಿ ಮಾಡಲು ಮರೆಯದಿರಿ
    ಓದುವ ಕೋಣೆ ಗಾಳಿ, ಬೆಳಕಿನಿಂದ ಕೂಡಿರಲಿ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ

(ಕುಮಾರಸ್ವಾಮಿ.ವಿ.ಕೆ
ಮುಖ್ಯ ಶಿಕ್ಷಕರು,
ಸಿದ್ಧಾರ್ಥ ಆಂಗ್ಲ ಪ್ರೌಢಶಾಲೆ,
ತೋಟಗೆರೆ, ಬೆಂಗಳೂರು ಉತ್ತರ
ಮೊ : ೯೧೧೩೯೦೬೧೨೦)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version