ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ; ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ

Published

on

ಸುದ್ದಿದಿನಡೆಸ್ಕ್:2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಒಂದರ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ ಶೇಕಡ 62.34 ರಷ್ಟು ಫಲಿತಾಂಶ ಬಂದಿದೆ.

ಮೊದಲ ಬಾರಿ ಪರೀಕ್ಷೆ ಎದುರಿಸಿದ ಶಾಲಾ ವಿದ್ಯಾರ್ಥಿಗಳಲ್ಲಿ ಶೇಕಡ 66.14 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶದ ಮಾಹಿತಿ ನೀಡಿದರು. ರಾಜ್ಯಾದ್ಯಂತ ಮಾರ್ಚ್ 21 ರಿಂದ ಎಪ್ರೀಲ್ 4 ರವರೆಗೆ ಒಟ್ಟು 2 ಸಾವಿರದ 818 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾದ ಪರೀಕ್ಷೆಗೆ ಒಟ್ಟು 8 ಲಕ್ಷದ 42 ಸಾವಿರದ 173 ಅಭ್ಯರ್ಥಿಗಳು ಹಾಜರಾಗಿದ್ದರು.

ಒಟ್ಟು 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. 65 ವಿದ್ಯಾರ್ಥಿಗಳು 624, 108 ವಿದ್ಯಾರ್ಥಿಗಳು 623 ಅಂಕ ಗಳಿಸಿದ್ದಾರೆ. ಈ ಬಾರಿ ಶೇಕಡಾ 74 ರಷ್ಟು ಬಾಲಕಿಯರು ಉತ್ತೀರ್ಣ ರಾಗುವ ಮೂಲಕ ಮೇಲುಗೈ ಸಾಧಿಸಿದ್ದರೆ ಶೇಕಡಾ 58.07 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಎದುರಿಸಿದ ಒಟ್ಟು 4 ಲಕ್ಷದ 579 ವಿದ್ಯಾರ್ಥಿನಿಯರಲ್ಲಿ 2 ಲಕ್ಷದ 96 ಸಾವಿರದ 438 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, 3 ಲಕ್ಷದ 90 ಸಾವಿರದ 311 ವಿದ್ಯಾರ್ಥಿಗಳಲ್ಲಿ 2 ಲಕ್ಷದ 26 ಸಾವಿರದ 637 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇಕಡಾ 91.12 ರಷ್ಟು ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಶೇಕಡಾ 89.96 ರಷ್ಟು ಫಲಿತಾಂಶದೊAದಿಗೆ ಉಡುಪಿ ಹಾಗೂ ಶೇಕಡಾ 83.19 ರಷ್ಟು ಫಲಿತಾಂಶದೊAದಿಗೆ ಉತ್ತರ ಕನ್ನಡ ಜಿಲ್ಲೆ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದೆ. ಕಲಬುರ್ಗಿ ಜಿಲ್ಲೆ ಶೇಕಡಾ 42.43ರಷ್ಟು ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ.

ವಿಶೇಷವಾಗಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಈ ಬಾರಿ ಒಟ್ಟು 329 ಸರ್ಕಾರಿ ಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿದೆ. 53 ಅನುದಾನಿತ ಹಾಗೂ 539 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 921 ಶಾಲೆಗಳು ಶೇಕಡ 100 ರಷ್ಟು ಫಲಿತಾಂಶ ದಾಖಲಿಸಿವೆ. ಆದರೆ, ರಾಜ್ಯದ ಆರು ಸರ್ಕಾರಿ ಶಾಲೆಗಳು, 30 ಅನುದಾನಿತ ಹಾಗೂ 108 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version