ದಿನದ ಸುದ್ದಿ
ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆಯು 6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಸ್ಪರ್ಶ ಯೋಜನೆ 2019-20 ರ ಅಡಿಯಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಶಾಲಾ ಮಕ್ಕಳಿಗೆ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸದ ಕುರಿತು ಪ್ರಚಾರ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಯೋಜನೆಯನ್ನು ಭಾರತ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ದೀನ್ ದಯಾಳ್ ಸ್ಪರ್ಶ ಯೋಜನೆ 2019-20 ವಿದ್ಯಾರ್ಥಿವೇತನ ಪಡೆಯಲು 6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2018-19 ನೇ ಸಾಲಿನಲ್ಲಿ ಕನಿಷ್ಟ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಅಂಚೆ ಚೀಟಿ ಸಂಗ್ರಹಣೆ ಖಾತೆ ಹೊಂದಿರಬೇಕು ಅಥವಾ ಶಾಲೆಯಲ್ಲಿ ಫಿಲಾಟಲಿ ಕ್ಲಬ್ ಇದ್ದಲ್ಲಿ ಅದರ ಸದಸ್ಯರಾಗಿರಬೇಕು. ಜೊತೆಗೆ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸದಲ್ಲಿ ಆಸಕ್ತಿ ಹೊಂದಿರಬೇಕು.
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಲು ಮೊದಲ ಹಂತದಲ್ಲಿ ಲಿಖಿತ ರೂಪದಲ್ಲಿ ಫಿಲಾಟಲಿ ಕ್ವಿಜ್ ಪರೀಕ್ಷೆಯನ್ನು ಬರೆಯಬೇಕು. ಇಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಎರಡನೇ ಹಂತದಲ್ಲಿ ಫಿಲಾಟಲಿ ಪ್ರಾಜೆಕ್ಟ್ ನೀಡಲಾಗುವುದು. ಇದರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರಿಗೆ ವಾರ್ಷಿಕ ರೂ.6000 ವನ್ನು ರೂ.500 ರಂತೆ ಪ್ರತಿ ತಿಂಗಳು ವಿದ್ಯಾರ್ಥಿವೇತನವನ್ನು ಅಂಚೆ ಇಲಾಖೆ ವತಿಯಿಂದ ನೀಡಲಾಗುವುದು.
ಅರ್ಜಿಯನ್ನು ಸಲ್ಲಿಸಲು ಸೆ.5 ಕಡೆಯ ದಿನ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮೊದಲ ಹಂತದ ಲಿಖಿತ ಪರೀಕ್ಷೆಗೆ ಅರ್ಜಿಗಳನ್ನು ಅಂಚೆ ಅಧೀಕ್ಷಕರು, ಚಿತ್ರದುರ್ಗ ವಿಭಾಗ, ಚಿತ್ರದುರ್ಗ-577501 ಇಲ್ಲಿಗೆ ನೊಂದಾಯಿತ ಅಂಚೆ/ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಂಚೆ ಇಲಾಖೆಯ ವೆಬ್‍ಸೈಟ್ www.indiapost.gov.in ಮತ್ತು www.karnatakapost.gov.in ಭೇಟಿ ನೀಡಬಹುದೆಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243