ದಿನದ ಸುದ್ದಿ

ಅಂಗನವಾಡಿ ಟೀಚರ್ ಮಕ್ಕಳ ‌ಯಶೋಗಾಥೆ..!

Published

on


ಅವರು ಡಿವೈಎಸ್ಪಿ , ಪತ್ನಿ ಡಾಕ್ಟರ್. ಇವರಿಬ್ಬರ ತಾಯಂದಿರು ಅಂಗನವಾಡಿ ಟೀಚರ್. ಮಕ್ಕಳ ಸಾಧನೆಗೆ ಈ ಹೆತ್ತಮ್ಮನೇ ಕಾರಣ. ಅಮ್ಮನ ದಿನಾಚರಣೆ ನಿಮಿತ್ತ ಸಣ್ಣ ಲೇಖನ. ತಪ್ಪದೇ ಓದಿ.ಇದರೊಳಗೆ ನೋವು, ನಲಿವು, ಪ್ರೀತಿಯ ಹೂರಣವಿದೆ.


ಸುದ್ದಿದಿನ,ದಾವಣಗೆರೆ : ಅವರೊಬ್ಬ ಉತ್ತಮ, ದಕ್ಷ ಪೊಲೀಸ್ ಅಧಿಕಾರಿ. ಪತ್ನಿ ಮಾವಿನಕಟ್ಟೆಯಲ್ಲಿ ವೈದ್ಯೆ. ಇಬ್ಬರದ್ದು ಸರಳ ಜೀವನ. ಇವರ ಸುಖೀ ಬದುಕಿಗೆ ಕಾರಣ ಆದವರೇ ಹೆತ್ತ ತಾಯಿ !

ಹೌದು, ಚನ್ನಗಿರಿ ಡಿವೈಎಸ್ಪಿ ಡಾ.ಸಂತೋಷ್ ಹಾಗೂ ಪತ್ನಿ ಡಾ.ಪವಿತ್ರಾ ಅವರ ಸಾಧನೆ ಹಿಂದೆ ತಾಯಿ ಇದ್ದಾರೆ. ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಡಿವೈಎಸ್ಪಿ ಸಂತೋಷ್ ತಾಯಿ ಸುವರ್ಣಮ್ಮ, ಪತ್ನಿ ಪವಿತ್ರರ ತಾಯಿ ಹಾಲಮ್ಮ. ಇವರಿಬ್ಬರು ಕೂಡ ಅಂಗನವಾಡಿ ಕಾರ್ಯಕರ್ತೆಯರು ಎಂಬುದು ಒಂದು ವಿಶೇಷ. ಹಾಗೆ ಕಾಕಾತಾಳೀಯ ಕೂಡ.

ಈ ಇಬ್ಬರೂ ತಾಯಂದಿರು ಜೀವನದಲ್ಲಿ ಮಕ್ಕಳನ್ನು ಓದಿಸಿ, ಉನ್ನತ ಸ್ಥಾನಕ್ಕೆ ತಲುಪಿಸುವಲ್ಲಿ ಅಗಾಧ ಶ್ರಮ ಪಟ್ಟಿದ್ದಾರೆ.
ಡಿವೈಎಸ್ಪಿ ತಾಯಿ ಸುವರ್ಣಮ್ಮರ ತವರುಮನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ. ಅಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಡಾ.ಪವಿತ್ರಾ ಅವರ ತಾಯಿ ಹಾಲಮ್ಮ ಕೊಟ್ಟೂರು ಬಳಿಯ ಐನಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಬ್ಬರು ಸ್ನೇಹಿತೆಯರಾಗಿದ್ದರು ಅನ್ನೋದು ಮತ್ತೊಂದು ವಿಶೇಷ. ಇವರಿಬ್ಬರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸದಾ ಚರ್ಚೆ ಮಾಡುತ್ತಿದ್ದರು.

ಅದು 1981ರ ಕಾಲ. ಡಿವೈಎಸ್ಪಿ ಸಂತೋಷ್ ತಾಯಿ ಕಾನಾಹೊಸಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುತ್ತಾರೆ. ಆ ಸಣ್ಣ ಆದಾಯ ದಿಂದಲೇ ಮಕ್ಕಳನ್ನು ಓದಿಸುತ್ತಾರೆ. ಕುಟುಂಬದ ಆರ್ಥಿಕ ಸ್ಥಿತಿ ಹೇಳತೀರದು. ಯಥೇಚ್ಛ ಬಡತನ. ಅಷ್ಟಿದ್ದರೂ ಮಕ್ಕಳ ಶಿಕ್ಷಣಕ್ಕೆ ಕೊರತೆ ಮಾಡಲಿಲ್ಲ.

ನಿತ್ಯ ಬೆಳಗ್ಗೆ ಹತ್ತರಿಂದ ಮಧ್ನಾಹ್ನ 1 ಗಂಟೆವರೆಗೂ ಅಂಗನವಾಡಿಯಲ್ಲಿ ಕೆಲಸ. ಬಳಿಕ ಮನೆಯಲ್ಲಿ ಮಕ್ಕಳ ಪಾಲನೆ. ರಜೆ ಇದ್ದ ವೇಳೆ ಹೊಲದಲ್ಲಿ ಕೆಲಸ. ಅಲ್ಲದೇ ಇವರ ತಾಯಿ ಆಗಿನ ಕಾಲದಲ್ಲಿಯೇ ಬಿಎ., ಓದಿದ್ದವರು. ಮೊದಲು ತಾನು ಓದಿಕೊಂಡು, ನಂತರ ಮಗನಿಗೆ ಹೇಳಿಕೊಡುತ್ತಿದ್ದರು. ಸಂತೋಷ್ 1 ರಿಂದ 8 ನೇ ತರಗತಿವರೆಗೂ ತಾಯಿಯೇ ಪಾಠ ಮಾಡುತ್ತಿದ್ದರು.

ಮಳೆಗೆ ಬಿದ್ದ ಮನೆ

ಡಿವೈಎಸ್ಪಿ ಸಂತೋಷ್‌ಗೆ ಓದುವ ಹಂಬಲ. ಎಸ್ಸೆಸ್ಸೆಲ್ಸಿಯಲ್ಲಿ ಕೂಡ್ಲಿಗಿ ತಾಲೂಕಿಗೆ ಟಾಪರ್ ಆಗಿದ್ದರು. ಹೀಗಿರುವಾಗ ಒಂದು ದಿನ ಜೋರಾದ ಮಳೆಗೆ ಮಣ್ಣಿನಿಂದ ಕಟ್ಟಿದ ಮನೆ ಬಿದ್ದಿತ್ತು. ಮೊದಲೇ ಸಂಕಷ್ಟ, ಆ ಕಷ್ಟದಲ್ಲಿ ಈ ಸಮಸ್ಯೆ. ಆದರೂ ಎದೆಗುಂದದ ತಾಯಿ ಸುವರ್ಣಮ್ಮ ಬಿದ್ದ ಮನೆ ಬಾಗಿಲಿಗೆ ಪರದೆಯೊಂದನ್ನು ಕಟ್ಟಿದರು. ಮೂರು ಇಟ್ಟಿಗೆಯಿಟ್ಟು ಒಲೆ ಹೂಡಿ ಅಡುಗೆ ಮಾಡಿ ಇಡೀ ಕುಟುಂಬಕ್ಕೆ ಅನ್ನ ಹಾಕುತ್ತಿದ್ದರು.

ಸಂತೋಷ್ ಈ ಮುರಿದ ಮನೆ ಹೊರಗಡೆ ಕೂತು ಓದಿದರು. ಅಮ್ಮನ ಪ್ರೇರಣೆಯೇ ನಾನೀಗ ಡಿವೈಎಸ್ಪಿ ಹುದ್ದೆಯಲ್ಲಿದ್ದು ಸರಕಾರೀ ಸೇವೆ ಸಲ್ಲಿಸಲು ಒಂದು ಅವಕಾಶ ದೊರೆಯಿತು.
ಪತ್ನಿ ಡಾ.ಪವಿತ್ರಾಮನೆಯಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಕೊಟ್ಟೂರು ಇವರ ಸ್ವಂತ ಊರು. ಕೆ. ಐನಳ್ಳಿಯಲ್ಲಿ ತಾಯಿ ಹಾಲಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿರುತ್ತಾರೆ.

ತಂದೆ ಪ್ರಗತಿ ಕೃಷ್ಣ ಬ್ಯಾಂಕ್‌ನಲ್ಲಿ ಡಿ.ದರ್ಜೆ ನೌಕರರಾಗಿರುತ್ತಾರೆ. ಇವರು ಕೂಡ ಆಗಿನ ಕಾಲಕ್ಕೆ ಪಿಯುಸಿ ಓದಿದ್ದರು., ಮಗಳನ್ನು ವೈದ್ಯೆಯನ್ನಾಗಿ ಮಾಡುವ ಹಂಬಲ ಕನಸು ಹೊತ್ತಿರುತ್ತಾರೆ. ಮಗಳು ಕೂಡ ಅಷ್ಟೇ ಚೆನ್ನಾಗಿ ಓದುತ್ತಿದ್ದ ವೇಳೆ ಸಿಇಟಿಯಲ್ಲಿ 2400 ನೇ ರಾಂಕ್ ಗಳಿಸುತ್ತಾರೆ. ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಆಗ ಕಾಲೇಜಿಗೆ 16,000 ರೂ. ಬೀಸು ಕಟ್ಟಬೇಕಾಗಿರುತ್ತದೆ. ಆದರೆ ಅಷ್ಟೋಂದು ಹಣ ತಾಯಿ ಬಳಿ ಇರಲಿಲ್ಲ.

ಹೀಗಿರುವಾಗ ಸಂಬಂಧಿಕರೊಬ್ಬರು ಒಡವೆಗಳನ್ನು ಅಡ ಇಟ್ಟು ಹಣ ಕೊಡುತ್ತಾರೆ. ಅಲ್ಲಿಯೂ ಕೂಡ ತಾಯಿ ಪಾತ್ರ ದೊಡ್ಡದು. ಶಿವಮೊಗ್ಗದಲ್ಲಿ ಸೀಟು ಸಿಗುತ್ತದೆ. ಅಲ್ಲಿಂದ ಗುರಿ ಬೆನ್ನತ್ತಿದ್ದ ಪವಿತ್ರಾ ವೈದ್ಯರಾಗಿ ಹೊರ ಹೊಮ್ಮುತ್ತಾರೆ. ಒಟ್ಟಾರೆ ಇವರಿಬ್ಬರ ಸಾಧನೆ ಹಿಂದೆ ಅಂಗನವಾಡಿಯಾಗಿ ಕೆಲಸ ಮಾಡಿದ ತಾಯಿಯರ ಪರಿಶ್ರಮ ಇದೆ. ತ್ಯಾಗ ಇದೆ. ಅದು‌ ಈಗ ಫಲ ಕೊಡುತ್ತಿದೆ..ಹ್ಯಾಟ್ಸ್ ಆಫ್ ಅಮ್ಮ.

ಡಿವೈಎಸ್ಪಿ ಸಂತೋಷ್‌ ಕೂಡ ಸಿಇಟಿಯಲ್ಲಿ ರಾಂಕ್ ಗಳಿಸುತ್ತಾರೆ. ಬಳ್ಳಾರಿಯಲ್ಲಿ ಮೆಡಿಕಲ್ ಸೀಟು ಸಿಕ್ಕಿರುತ್ತದೆ. ಆದರೆ ಅಲ್ಲಿನ ಕೆಲ ಯುವಕರು ಇವರಿಗೆ ರಾಗಿಂಗ್ ಮಾಡಿರುತ್ತಾರೆ. ಮನಸ್ಸಿಗೆ ಘಾಸಿ ಆಗಿ ವಾಪಸ್ ಕಾನಹೊಸಳ್ಳಿಗೆ ಬರುತ್ತಾರೆ. ಊರಿನ ಜನ ಆಡಿಕೊಂಡರೂ, ತಾಯಿ ಮಾತ್ರ ಛಲ ಬಿಡದೇ ಮಗನನ್ನು ಓದಿಸುತ್ತಾರೆ. ನಂತರ ಉತ್ತರ ಪ್ರದೇಶದ ಬರೇಲಿಗೆ ಹೋಗುತ್ತಾರೆ.

ಅಲ್ಲಿ ತನ್ನ ಸ್ನೇಹಿತ ಐಪಿಎಸ್ ಕೋಚಿಂಗ್ ಓದುವುದನ್ನು ನೋಡಿ ಪ್ರೇರಿತರಾಗಿ ಯುಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಪ್ರಿಮಲರಿ, ಮೇನ್ಸ್ ಆ ಪಾಸ್ ಮಾಡುತ್ತಾರೆ. ಅಂತಿಮ ಕ್ಷಣದಲ್ಲಿ ಲಿಸ್ಟ್‌ನಲ್ಲಿ ಹೆಸರು ಇರೋದಿಲ್ಲ. ಮತ್ತೆ ಸಿಇಟಿ ಬರೆಯುತ್ತಾರೆ ವೆಟನರಿಯಲ್ಲಿ ಸೀಟು ಸಿಗುತ್ತದೆ. ಅದನ್ನು ಮುಗಿಸಿ ಕೆಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಮೊದಲ ಲಿಸ್ಟ್‌ನಲ್ಲಿಯೇ ಆಯ್ಕೆ ಆಗಿ ಆಲೂರಿನಲ್ಲಿ ವೈದ್ಯರಾಗಿ ಡ್ಯೂಟಿ ಮಾಡುತ್ತಾರೆ. ಬಳಿಕ ಕೆಎಸ್‌ಪಿಎಸ್‌ ಎಕ್ಸಾಂ ಬರೆದು ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ.


  • ಬಡತನದಲ್ಲಿಯೂ ನನ್ನ ತಾಯಿ ಹಾಗೂ ನನ್ನ ಪತ್ನಿ ತಾಯಿ ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡಿ ನಮ್ಮನ್ನು ಓದಿಸಿದ್ದಾರೆ. ನಮ್ಮ ಈ ಶ್ರಮಕ್ಕೆ ತಾಯಿಯೇ ಕಾರಣ. ಅಂಗನವಾಡಿ ಟೀಚರ್ ಆಗಿ ಮಕ್ಕಳನ್ನು ಓದಿಸೋದಕ್ಕೆ ಆಗೋದಿಲ್ಲ ಎನ್ನುವವರಿಗೆ ನಮ್ಮಿಬ್ಬರ ತಾಯಂದಿರು ಸ್ಫೂರ್ತಿ ಆಗಬಲ್ಲರು.

| ಡಾ.ಸಂತೋಷ್, ಡಿವೈಎಸ್ಪಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version