ದಿನದ ಸುದ್ದಿ

ಹಸುವಿಗೆ ಯಶಸ್ವಿ ಹರ್ನಿಯೋಪ್ಲಾಸ್ಟಿ  ಶಸ್ತ್ರ ಚಿಕಿತ್ಸೆ

Published

on

ಸುದ್ದಿದಿನ,ಶಿವಮೊಗ್ಗ : ಜಾನುವಾರುಗಳಲ್ಲಿ ಬಲು ಅಪರೂಪದ ಶಸ್ತ್ರ ಚಿಕಿತ್ಸೆಯಾದ ಹರ್ನಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಯನ್ನು ಶಿವಮೊಗ್ಗದ ತಜ್ಞ ಪಶುವೈದ್ಯರ ತಂಡವೊಂದು ಯಶಸ್ವಿಯಾಗಿ ನೆರವೇರಿಸಿದೆ. ಶಸ್ತ್ರ ಚಿಕಿತ್ಸೆಯ ನಲವತ್ತು ದಿನಗಳ ನಂತರ ಹಸುವು ಎಂದಿನಂತೆ  ಹಾಲು ಕೊಡುತ್ತಿದ್ದು ತನ್ನ ಸಾಮಾನ್ಯ ಜೀವನವನ್ನು ಸಾಗಿಸುತ್ತಿದೆ.

ಹೈನುಗಾರಿಕೆಯನ್ನೇ ಆಧರಿಸಿ ಬದುಕುತ್ತಿರುವ ಶಿವಮೊಗ್ಗ ನಗರದ ಶ್ರೀರಾಮಪುರ ವಾಸಿಯಾದ ಶಶಿ ಎಂಬುವವರ ಮನೆಯಲ್ಲಿನ ಜಾನುವಾರುವೊಂದು ಸಾಕಷ್ಟು ದಿನದಿಂದ ಹೊಟ್ಟೆಯ ಕೆಳಭಾಗದಲ್ಲಿ  ಎರಡು ಫುಟ್ಬಾಲ್ ಗಾತ್ರದಷ್ಟು ತೀವ್ರ ಬಾವಾಗಿ ನರಳುತ್ತಿತ್ತು. ತುಂಬು ಗರ್ಭಿಣಿ ಹಸುವಿಗೆ ಆಕಸ್ಮಿಕವಾಗಿ ಈ ರೀತಿ ಆಗಿರುವುದನ್ನು ಕಂಡು ಹೆದರಿದ ಇವರು ತಕ್ಷಣವೇ ಪಶುವೈದ್ಯರ ಬಳಿ ತಪಾಸಣೆ ಮಾಡಿಸಿದ್ದಾರೆ.

ತಪಾಸಣೆ ಮಾಡಿದ ಪಶುವೈದ್ಯರಾದ ಡಾ. ಬಸವೇಶ್ ಹುಗಾರ್ ಹಾಗೂ ಡಾ. ಕಮಲೇಶ್ ಕುಮಾರ್ ಕೆ ಎಸ್, ಜಾನುವಾರುವಿಗೆ ಹರ್ನಿಯ ಆಗಿರುವುದನ್ನು ಖಚಿತಪಡಿಸಿದ್ದಾರೆ. ಹೊಟ್ಟೆಯ ಕೆಳಭಾಗದ ಮಾಂಸಖಂಡವು ಅಪಘಾತಕ್ಕೆ ಸಿಲುಕಿ ತೀವ್ರ ದೊಡ್ಡದಾಗಿ ಹರಿದು ಇಂತಹ ದೊಡ್ಡ ಗಾತ್ರದ ಹರ್ನಿಯ ಆಗಿದೆ ಎಂದು ಖಚಿತ ಪಡಿಸಿ ತಿಳಿಸಿದ್ದಾರೆ. ತುಂಬು ಗರ್ಭ ಧರಿಸಿದ ಹಸುವಿಗೆ ಹರ್ನಿಯೋಪ್ಲಾಸ್ಟಿ  ಶಸ್ತ್ರಚಿಕಿತ್ಸೆ ಮಾಡಲು ಅಸಾಧ್ಯ ಎಂದು ಹಸುವಿನ ಮಾಲೀಕರಿಗೆ ಮನವರಿಕೆ ಮಾಡಿದ ವೈದ್ಯರು ಹಸುವು ಕರು ಹಾಕಿದ ನಾಲ್ಕು ದಿನದ ನಂತರ ಸುಮಾರು 6 ಇಂಚು ಸುತ್ತಾಳತೆಯ ನೈಲಾನ್ ಮೇಶ್ ಬಳಸಿ ಕೃತಕ ಪದರವನ್ನು ಸೃಷ್ಟಿಸಿ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದಾರೆ.

ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಕಮಲೇಶ್ ಕುಮಾರ್ ಕೆ ಎಸ್ ಹಾಗು ಡಾ. ಬಸವೇಶ್ ಹುಗಾರ್ ರವರು ಡಾ. ನಿರಂಜನ್  ಮೂರ್ತಿ ರವರ ಸಹಯೋಗದೊಂದಿಗೆ ಈ ಶಸ್ತ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಜಾನುವರುವಿಗೆ ಮರುಜೀವವನ್ನು ನೀಡಿದ ವೈದ್ಯರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾಲೀಕರು ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version