ಅಂತರಂಗ
ದೇವನಗರಿ ಸುದ್ದಿದಿನ ವಿಶೇಷಾಂಕ; ಗೋವರ್ಧನರ ಆಸಕ್ತಿ ಹಾಗು ಅಕ್ಷರ ಪ್ರೀತಿಯ ಪ್ರತಿಬಿಂಬ
ಸುದ್ದಿದಿನ ಪತ್ರಿಕೆ ಗೋವರ್ಧನರಿಗೆ ಪ್ರೀತಿಯ ಮಗು. ಅದಕ್ಕೀಗ ಐದು ವರ್ಷ. ಅನ್ನುವ ಭಾವದಲ್ಲಿ ನನಗೆ ಅನ್ನಿಸಿದ್ದನ್ನು ಹೇಳಬೇಕಾದ ಒಂದು ವಾಕ್ಯ; “ಹೆತ್ತಪ್ಪನ ಖುಶಿ, ಪತ್ರಿಕೆಯ ವಿಶೇಷಾಂಕದ ತುಂಬ ಬೆಳಕಿನ ಬೀಜ ಬಿತ್ತಿದೆ.”
ಅಕ್ಷರ ಕೃಷಿ ಕೂಡ ಸುಲಭದ್ದಲ್ಲ. ಅದರಲ್ಲಿಯೂ “ಬೆಳೆಯಬೇಕು” ಮತ್ತು “ಬೆಳೆಸಬೇಕು” ಅನ್ನುವ ಹೃದಯವಂತಿಕೆ ಕಾಣಸಿಗುವುದು ಅಪರೂಪ. ಜಿಲ್ಲಾ ಮಟ್ಟದ ಪತ್ರಿಕೆ ರಾಜ್ಯ ಸ್ತರೀಯ ದೀಪಾವಳಿ ವಿಶೇಷಾಂಕ ಪ್ರಕಟಿಸುವ ಮತ್ತು ಕಥೆ-ಕವಿತೆಗಳಿಗೆ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ನಿರ್ವಹಿಸಿದ್ದು ಕೂಡ ಅಷ್ಟೇ ಅಪರೂಪ.
ಪತ್ರಿಕೋದ್ಯಮವೆಂದರೆ, ಮೈಮೇಲೆ ಚೇಳುಗಳನ್ನು ಬಿಟ್ಟುಕೊಳ್ಳುವ ವ್ಯಸನ! ಆಗಾಗ ಕುಟುಕುವ ನಂಜುಣ್ಣುತ್ತಲೆ ವಿಷಕಂಠನಂತೆ ಸ್ಥಿತಪ್ರಜ್ಞನಾಗಿ ದುಡಿಯುವ ಸಂಪಾದಕನ ಹೊಣೆ ಸಣ್ಣದಲ್ಲ! ಬೆರಳ ತುದಿಯಿಂದ ಜಗವ ತೆರೆಯುವ ಈ ಕಾಲದಲ್ಲಿ ದಿನ ಪತ್ರಿಕೆ ನಡೆಸುವುದು ತುಂಬ ಸಾಹಸದ ಕೆಲಸ. ಅದನ್ನು ತಪವೆಂದುಕೊಂಡರೂ ಪರಿತಾಪ ತಪ್ಪಿದ್ದಲ್ಲ! ಹೀಗಿರುವಾಗ, ಜಿಲ್ಲಾ ಪತ್ರಿಕೆಯೊಂದು ತನ್ನ ಐದನೇ ವರ್ಷದಲ್ಲಿ ಇಂಥದೊಂದು ಜಿಗಿತ ಪ್ರದರ್ಶಿಸುತ್ತಿರುವುದು ಅಸಾಮಾನ್ಯ ಸಂಗತಿ! ಸಂಪಾದಕರ ಎದೆಗಾರಿಕೆಗೆ ಮೆಚ್ಚಲೇ ಬೇಕು!
ಉತ್ತರಕನ್ನಡ ಜಿಲ್ಲೆಯಲ್ಲಿ “ಸುದ್ದಿದಿನ” ಸುದ್ದಿಮಾಡಿದ್ದು ಪ್ರಾಯಶಹ ಈ ಕಥಾ ಸ್ಪರ್ಧೆಯಿಂದಲೇ. ರಾಜ್ಯ ಮಟ್ಟದಲ್ಲಿ ಕೂಡ ಪತ್ರಿಕೆಯ ಹೆಸರು ಪ್ರಚಲಿತವಾಗಿದೆ ಅನ್ನುವುದು ನನ್ನ ಭಾವನೆ. ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದ ನನಗೆ ನಾಲ್ಕನೆಯ ಬಹುಮಾನ ಬಂತು. ಅದು ನನಗೂ ಸಮಾಧಾನಕರವೆನ್ನಿಸಿದ್ದು, ತೀರ್ಪುಗಾರರ ಮೊದಲ ಮೂರು ಕಥೆಗಳನ್ನು ಓದಿದಾಗ! ಬಹುಶಹ ಕವಿತೆಗಳನ್ನು ಕಳುಹಿದವರ ಅನುಭವವೂ ಹೀಗೆಯೇ ಇರಬೇಕು. ಆಯ್ಕೆಯಾದ ಕವಿತೆಗಳಲ್ಲಿ ಹೊಸತನವಿದೆ, ಚಿಂತನೆ ಇದೆ. ಇಲ್ಲಿ ಸ್ಪರ್ಧೆ ಯುದ್ಧವಾಗಿಲ್ಲ ಅನ್ನುವುದು ಸ್ಪಷ್ಟ! ಈ ನೆಲೆಯಲ್ಲಿ ತೀರ್ಪುಗಾರರೂ ಕೂಡ ಅಭಿನಂದನಾರ್ಹರು. ಅನೇಕ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ಅನುಭವವಾಗುವುದಿದೆ. ತತ್ವ ಮತ್ತು ಸತ್ವಾಧಾರಿತ ನಿಲುಮೆಯ ಸಂಪಾದಕರಿದ್ದರೆ ಮಾತ್ರವೇ ಸ್ಪರ್ಧೆಗಳು ನ್ಯಾಯಯುತವಾಗಿರುತ್ತವೆ. ಇಲ್ಲಿ ಅಂತಹ ಸುಹೃದ ಅನುಭವ ನನಗಂತೂ ಆಗಿದೆ.
ವಿಶೇಷಾಂಕ ಕೈಸೇರಿದ ದಿನದಿಂದ ಮೂರ್ನಾಲ್ಕು ದಿನ ಅದರಲ್ಲಿಯೇ ಮುಳುಗಿದ್ದೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಹಿಡಿದಿಟ್ಟುಕೊಂಡಿತು. ವರ್ತಮಾನದ ಓದುಗ ವಲಯ ಇಷ್ಟಪಡುವಂತಹ ಸಂಗತಿಗಳನ್ನೇ ಪಾಕಗೊಳಿಸಿ ಬಡಿಸಿದ ಮೃಷ್ಟಾನ್ನದಂತೆ ಲೇಖನಗಳು, ಸಂದರ್ಶನಗಳು, ವ್ಯಕ್ತಿ ಪರಿಚಯಗಳು, ವೈಚಾರಿಕ ಪ್ರಬಂಧಗಳು ನಡುನಡುವೆ ಕವಿತೆಗಳು ಎಲ್ಲವೂ ಮುದನೀಡುವಂತಿದ್ದರೆ ಇಡೀ ವಿಶೇಷಾಂಕದ ಮುನ್ನುಡಿಯಂತಿರುವ ಸಂಪಾದಕೀಯ ಒಂದಂಗುಲ ಮೇಲೆನ್ನಿಸಿ ಆಪ್ತವೆನ್ನಿಸಿತು.
ಗೋವರ್ಧನ ಗಿರಿಯವರ ಆಸಕ್ತಿ ಮತ್ತು ಧೋರಣೆಯಲ್ಲಿ ಸ್ಪಷ್ಟತೆಯಿದೆ. ಅವುಗಳ ನಿರ್ವಹಣೆ ಉತ್ತುಂಗವಾಗಿದೆ. ಸಂಪಾದಕರ ಅಂತರಂಗವನ್ನು ಬಹಿರಂಗಗೊಳಿಸಿದ ಭಾವಕ್ಕೆ ತಲೆ ತೂಗಿದೆ. ಅವರ ಕ್ಷಮತೆ, ಹೊತ್ತ ಹೊಣೆಗಾರಿಕೆ, ಸಂಚಿಕೆಯ ಪ್ರತಿ ಪುಟಗಳಲ್ಲಿ ಪ್ರತಿ ಅಕ್ಷರಗಳಲ್ಲಿಯೂ ಕಾಣಿಸಿದೆ. ಪತ್ರಿಕೋದ್ಯಮದೆಡೆ ಅವರಿಗೆ ಗಂಭೀರತೆ ಇದೆ. “ದೇವನಗರಿ ಸುದ್ದಿದಿನ” ಪತ್ರಿಕೆ, ಸಮಾಜದೆದುರಿನ ಕನ್ನಡಿಯಾಗಬೇಕು ಅನ್ನುವ ಅವರ ಹಂಬಲದಲ್ಲಿ ಪ್ರಾಮಾಣಿಕತೆಯಿದೆ. ಆ ನೆಲೆಯಲ್ಲಿಯೇ ವಿಶೇಷಾಂಕದ ಒಂದೊಂದೂ ಪುಟವನ್ನೂ ಅವರು ಅಳೆದು ತೂಗಿ ಕಾಳಜಿಯಿಂದ ಓದುಗರಿಗೊಪ್ಪಿಸಿದ್ದಾರೆ. ಅವರವರ ಆಸಕ್ತಿಗಳಿಗೆ ಒಂದಿಲ್ಲೊಂದು ಓದಿನ ಸಖ್ಯವನ್ನು ಹೊತ್ತಿಗೆ ಒದಗಿಸಿದೆ.
ಇನ್ನು, ಕಿರೀಟದೊಳಗಿನ ಮುತ್ತುಗಳಂತೆ ಪ್ರಕಾಶಿಸುವ ಚಿತ್ರಗಳು ಸಂಚಿಕೆಗೆ ಇನ್ನಷ್ಟು ಮೆರಗು ನೀಡಿವೆ. ಮುಖಪುಟದ ರೂಪದರ್ಶಿಯ ಸಹಜ ಸೌಂದರ್ಯ ಕಣ್ಣೆಳೆಯುವಂತೆ, ವಿಶೇಷಾಂಕ ಇಡೀಯಾಗಿ ಮನಸ್ಸನ್ನು ಮುಟ್ಟಿದೆ ಅನ್ನುವಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಗೋವರ್ಧನರ ಶ್ರಮ ಮತ್ತು ಸಮಯ ಇಲ್ಲಿ ಸಾರ್ಥಕವಾಗಿದೆ.
ಅಭಿನಂದನೆಗಳು ಗೋವರ್ಧನ ಗಿರಿ ಹಾಗೂ ಅವರ ತಂಡಕ್ಕೆ.
–ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579