ಭಾವ ಭೈರಾಗಿ
ಕವಿತೆ | ಅಲ್ಲಮನ ಪರಮಾತ್ಮನಂತೆ
ಕವಿತೆ ದೇವರು
ಮುಗಿದು ಕೈ ಬೇಡು ಪದ ಪುಷ್ಪ
ಎಸೆದು ; ದೇವರಲ್ಲವೇ ಒಲಿದಾನು ಹೇಗೆ
ಸಲೀಸಾಗಿ?
ತೆರೆದಕಣ್ಣ ತೆರೆದೇ ಮುಚ್ಚಬೇಕು ಒಳಗೇ
ಅಗಣಿತ ಅಕ್ಷರಗಳ ಧ್ಯಾನ
ಸದಾ ಉಚ್ವಾಸ- ನಿಚ್ವಾಸ!
ಕವಿತೆ ಕಡಲ ದಡದ ಮರಳೇ
ಮರ- ಮರಳಿ ಮನೆಕಟ್ಟಲು?
ಪ್ರಹ್ಲಾದನಿಗೊಲಿದ ನರಸಿಂಹ
ಕವಿತೆಯ ತಾದಾತ್ಮ; ಕಾಣದ ದೇವರ
ಜಗವರಸಿ ಹೊರಟ ಕತೆ ಹಳೆಯದು!
ಕಲ್ಲೋ,ಮರವೋ,ಮಣ್ಣೋ,ಮಂದಿರ
ಮಸೀದಿ- ಚರ್ಚುಗಳ ಪಡಸಾಲೆಗೆ ಹಣೆಯಿಕ್ಕಿ
ದವರಿಗೆ ಕಂಡಂಗೆ ಕಾಣದಂಗೆ
ಸಿಕ್ಕಂತೆ ಮಾಡಿ,ಸಿಗದಂತೆ ಓಡೋ ದೇವರ ಕತೆ
ಕವಿತೆಯ ಕತೆ ಎರೆಡೂ ಒಂದೆ!
ದೇವರಿಗೇನ್ ಬರ; ಮುಕ್ಕೋಟಿ ಲೆಕ್ಕಕ್ಕೆ ಕಾವ್ಯಕ್ಕೆ?
ಉಪವಾಸವಿದ್ದೂ ತಾಂಬೂಲ ಬಾಯಿ ಕೆಂಪು
ಮಾಡಿಕೊಂಡಂತೆ ಕಾವ್ಯ ದರ್ಶನ!
ರೂಪ ಸಾವಿರ ಭಕ್ತ- ಭಕ್ತಿ ಏಕ
ಹುಡುಕೋ ದೈವ ಸಿಕ್ಕೀತು,ಕಾವ್ಯ ಸಿಗುವುದಾ
ದಕ್ಕಿಸಿಕೊಳ್ಳುವುದಾ ಅಲ್ಲಮನ ಪರಮಾತ್ಮನಂತೆ,ಅಕ್ಕನ ಮಲ್ಲಿಕಾರ್ಜುನನಂತೆ!
ದೇವರಾರಿಗೆ ಬೇಕು- ಹೇಳೋ ಧೈರ್ಯವೆಲ್ಲಿ..ಮನದ ಮಾತಿನ ಕಾವ್ಯ ಶೀಘ್ರ ಸ್ಖಲನದ ನಿರಾಸಾಭಾಸ!
ಸಿಕ್ಕರೆ ಕಲ್ಲೂ ಶಿಲೆ ;ಸಾಕ್ಷತ್ಕಾರದ ಮಣಿಬಿಂಬ
ಇಲ್ಲಾ..ಬರೀ ಕಲ್ಲು
ಅರ್ಥಹೀನ ಬರಿ ಪದಗಳಷ್ಟೇ ನಮ್ಮ ಪಾಲು
ಸಿಕ್ಕಿಕೊಂಡ ಜೇಡ ನಾವು- ನಮ್ಮ ಸುತ್ತ ಬಂಧ ನೂಲು!
– ಸಂತೆಬೆನ್ನೂರು ಫೈಜ್ನಟ್ರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9986715401