ಭಾವ ಭೈರಾಗಿ

ಕವಿತೆ | ನೀ ಎಂಥ ಮಕ್ಳಿಗೆ ಜನ್ಮ ಕೊಟ್ಟೆ ನನ್ನವ್ವ..?

Published

on

  • ಮಹೇಶ ಶಿಂಗೆ

ಯ್ಯೋ ನನ್ನವ್ವ
ಎಂಥ ಗತಿ ಬಂತು ನಿನಗವ್ವ
ರಸ್ತೆ ಮಧ್ಯೆ ನಿನ ಬಟ್ಟೆ ಬಿಚತಾರವ್ವ.
ಅತ್ಯಾಚಾರಗೈದು,
ಮತ್ತೆ
ಭಾರತ ಮಾತಾ ಕೀ ಜೈ
ಅನ್ತಾರವ್ವ.

ದೇಶಭಕ್ತಿ ಬರೀ ತೊರಿಕೆ
ಆಗೊಯಿತವ್ವ
ಇಲ್ಲಿ ಅತ್ಯಾಚಾರ ಮಾಡಿದ್ರೆ
ನಡೆಯತ್ತವ್ವ
ಆದ್ರೆ
ಭಾರತ ಮಾತಾ ಕಿ ಜೈ
ಅಂತ ಹೇಳಲೇ ಬೇಕವ್ವ
ಹೇಳದಿದ್ರೇ ನನ್ನವ್ವ,
ದೇಶದ್ರೋಹಿ ಪಟ್ಟ
ಕಟ್ಟ ಬಿಡ್ತಾರವ್ವ.

ಇದೆಂತ ಮಕ್ಳನ
ಹೆತ್ತಿದೆ?
ನೀ ಹೇಳವ್ವ
ಅತ್ಯಾಚಾರಿಗೂ ಧರ್ಮದ
ಲೇಬಲ್ ಹಚ್ಚಿ,
ಬ್ಯಾಟರಿ ಹಿಡ್ದು ಹುಡುತಿದ್ದಾರವ್ವ.

ಅವಳು..
ಇವಳು…ಎನ್ನದೇ
ಮುದುಕಿ..
ಸಣ್ಮಕಳು ಅಂತ ಬಿಡದೇ,
ಜೊಲ್ಲು ನಾಯಿಯ ಚಟದ
ಕಾಮುಕರು
ರಸ್ತೆ ಮೇಲೆ
ನಿನ್ನ ಬೆತ್ತಲೆ ದೇಹ
ತಿಂದು ಬಿಸಾಕಿ ಬಿಡ್ತಾರವ್ವ..
ಅವ್ವ ನನ್ನವ್ವ
ನೀ ಹೆಂಥಾ ಮಕ್ಳಿಗೆ
ಜನ್ಮ ಕೊಟ್ಟೆ
ನೀ ಹೇಳವ್ವ?

ಅಣ್ಣ ಬಿಡಣ್ಣ
ದಮ್ಮಯ್ಯ ಬಿಡಣ್ಣ
ನಿನ್ನ ತಂಗಿ
ಅಂತ ತಿಳಿದಾದರೂ
ಸರಿ
ಬಿಡಣ್ಣ …
ನಿನ ಕೈ ಮುಗಿತಿನಿ
ನಿನ ಕಾಲಿಗೂ ಬಿಳ್ತಿನಿ
ನನ್ನ ಹಾಳು
ಮಾಡಬೇಡಣ್ಣ..
ಅಣ್ಣ..ಅಣ್ಣ…
ಅಂತ ಕಿರುಚಿದರೂ
ಗೋಗರೆದರೂ
ಮರುಗಿದರೂ
ಕರಗರೂ
ಆ ನೀಚ ನಿನ ಮಕ್ಳು
ಕಾಮುಕರು
ಅವ್ವ ನನ್ನವ್ವ
ನೀ ಹೆಂಥ
ಮಕ್ಳಿಗೆ ಜನ್ಮ ಕೊಟ್ಟೆ?
ನೀ ಹೇಳವ್ವ.

ಹೆಣ್ಣೆಂದರೆ
ಹಣ್ಣಂತ ತಿಳಿದರೆ..?
ಎಲ್ಲೆಂದರಲ್ಲಿ
ಕಾಣಿದರೆ ..
ಕಲ್ಲು ಬಿಸಾಕಿ
ಕೆಡವಿ ಸಿಪ್ಪೆ ಸುಲಿದು
ತಿಂದು ಬಿಡುವರೆ..?
ಎದೆ ಹಾಲ ಕುಡಿಸೊ
ತಾಯಿನೂ
ದಿಟ್ಟಿಸಿ ನೋಡುವ
ಮಕ್ಳನ ಹೆತ್ತ ಬಿಟ್ಟೆನವ್ವ.
ಅವ್ವ ನೀನ ಮೊಲೆಗೆ
ಜೋತು ಬಿದ್ದು
ಭಾರತ ಮಾತಾ ಕೀ ಜೈ
ಅಂತ
ಹೇಳ್ತಿದ್ದಾರವ್ವ..

ಅಂಜಿಕೆ ಮನದಲ್ಲಿ
ಮನೆ ಮಾಡಿ ಸುಡುತ್ತಿದೆ
ನನಗಿಗವ್ವ..
ನಿನ್ನಂಥೆ
ನನ್ನ ಹೆತ್ತ ತಾಯಿ ಹೆಣ್ಣವ್ವ..
ನನ್ನ ಒಡಹುಟ್ಟಿದವಳೂ
ನಿನ್ನಂಥೆ ಮುದ್ದು ಮುದ್ದಾಗಿದ್ದಾಳವ್ವ..
ನನ್ನ ಜೀವನ ಅರ್ಧಾಂಗಿ
ಅವಳೂ ನಿನ್ನಂಥೆ ಹೆಣ್ಣು ಕೇಳವ್ವ
ಪುಟ್ಟ ಪುಟ್ಟ ಹೆಜ್ಜೆಯ
ಗೆಜ್ಜೆಯ ನಾದ
ತಂದ,
ಮನೆಗೆಲ್ಲ ಸ್ವರ್ಗ ತಂದ
ನನ್ನ ಮುದ್ದಿನ ಮಗಳೂ ಹೆಣ್ಣು
ನೋಡವ್ವ..
ಕಣ್ಣು ಕಳೆದುಕೊಂಡು
ಇರಲು ಹೆಂಗೆ ಸಾಧ್ಯ ಐತಿ ಹೇಳವ್ವ…..?
ಅವ್ವ
ನೀ ಹೆಂಥ ಮಕ್ಳಿಗೆ
ಜನ್ಮ ಕೊಟ್ಟೆ
ಹೇಳವ್ವ..?

ಅತ್ಯಾಚಾರಿಗೂ ಧರ್ಮದ ಲೇಬಲ್ ಹಚ್ಚಿ
ಬ್ಯಾಟರಿ ಹಿಡ್ದು
ಅಧರ್ಮಿಯನನ್ನ ಹುಡುಕುತಿದ್ದಾರವ್ವ
ನೀ ಆ ವೇಳೆಗೆ ಪಟ್ಟ
ಯಾತನೆ ಎಲ್ಲ ಮರೆತು
ಧರ್ಮದ ಬ್ಯಾನರ ಹಿಡಿದೇ ಹೊಡದಾಡತಿದ್ದಾರವ್ವ.

ಅವ್ವ ನೀ ಹೆಂಥ ಮಕ್ಳಿಗೆ ಜನ್ಮ ಕೊಟ್ಟೆ
ನೀ ಹೇಳವ್ವ..?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version