ಭಾವ ಭೈರಾಗಿ

ಕವಿತೆ | ಅಡಿ ಟಿಪ್ಪಣಿ

Published

on

 

ಕೊಳ : ರಸ್ತೆ ಬದಿ ಕೂತ ಮುದಿ
ಸ್ವಾತಂತ್ರ್ಯ ಯೋಧನ ಕಣ್ಣು

ಮರ : ಬಿಟ್ಟಲ್ಲೇ ಲಡ್ಡಾದ ಬೋಳು
ಬಾವುಟದ ಕೋಲು

ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ
ಸ್ತಬ್ಧ ಚೂರು ರೊಟ್ಟಿ

ಸೂರ್ಯ : ಬಟ್ಟೆ ತೊಟ್ಟಿಲ್ಲಲ್ಲಿ ಹೊಳೆವ
ಕೈಕೂಸಿನ ನೆತ್ತಿ

ನದಿ : ಮನೆ ಬಿಟ್ಟೋಡಿದ ಪೋರಿಯ
ಏದುಸಿರಿನ ಜಾಡು

ಕಾಮನಬಿಲ್ಲು : ಕಾಮಾಟಿಪುರದಲಿ ಒಡೆವ
ಬಳೆಗಳ ಚೂರು

ಹಗಲು : ಬೇಕಾರ್ ಪೋರನ ಎದುರು
ಬಿದ್ದ ರದ್ದಿ ಪತ್ರಿಕೆ

ಹಕ್ಕಿ : ಸಂತ್ರಸ್ತರಿಗೆಂದೇ ಬಾಲ್ಕನಿಯಿಂದ
ಎಸೆದ ಹಳೇ ಹರಕು ಬಟ್ಟೆ

ರಾತ್ರಿ : ಹಳೆ ಗೆಳೆಯನ ಅರಸುತ್ತಾ
ಅಲೆದು ಬಂದ ಬವಳಿ

ಇಂಚರ : ಶಿವಕಾಶಿ ಪಟಾಕಿಯಲಿ ಸುತ್ತಿದ
ಎಳೆ ಕಂಠಗಳ ಸುರುಳಿ

ಕವಿತೆ : ಸ್ವಂತ ವಿಳಾಸ ಇಲ್ಲದವ
ಬರೆಯದ ಪತ್ರದ ಸಾಲು

ಬೆಳಗು : ಮೂಕನ ಅರೆ ಎಚ್ಚರದಲಿ
ಕೇಳಿ ಬಂದ ಹಾಡು

ಜಯಂತ ಕಾಯ್ಕಿಣಿ

( ಜಯಂತ ಕಾಯ್ಕಿಣಿ ಅವರ ‘ಒಂದು ಜಿಲೇಬಿ’ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version