ಭಾವ ಭೈರಾಗಿ
ಕವಿತೆ | ಈ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಜನ ಕುರಿಗಳಾಗಿರುವರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಖಳನಾಯಕರು ಆ ಕುರಿಗಳನ್ನು ಗುರಿ ತಪ್ಪಿಸುತ್ತಿ ರುವರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ನಾಯಕರು ಹಸಿ ಸುಳ್ಳುಗಾರರಾಗಿದ್ದಾರೋ ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಸಂತರು ಮೌನವಾಗಿದ್ದಾರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಅನ್ಯ ದ್ವೇಷಿಗಳು ಎಲ್ಲೆಡೆ ಗಾಳಿಯಂತೆ ಹಬ್ಬಿ ಕೊಳ್ಳುತ್ತಾರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ದನಿ ದಾಳಿಕೋರರನ್ನು ಹೊಗಳಲು ಮೇಲೇಳುತ್ತದೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಜನ ದುಷ್ಟರನ್ನು ಜನನಾಯಕ ಅನ್ನುತ್ತಾರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ನಾಯಕ ಹಿಂಸೆ, ತೋಳ್ಬಲಗಳಿಂದ ನಾಡನ್ನು ಆಳಲು ಹೊರಟಿದ್ದಾನೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶಕ್ಕೆ ಕೇವಲ ತನ್ನ ಭಾಷೆ, ತನ್ನ ಸಂಸ್ಕೃತಿ ಮಾತ್ರ ಗೊತ್ತಿರುತ್ತದೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಉಸಿರಲ್ಲಿ ಕೇವಲ ಬರೀ ಹಣವೇ ತುಂಬಿರುತ್ತದೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಜನ ತಮ್ಮ ಹಕ್ಕುಗಳು ಸರ್ವನಾಶವಾಗಲು ಬಿಡುತ್ತಾರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಯಾವ ದೇಶದ ಜನ ತಮ್ಮ ಸ್ವಾತಂತ್ರ್ಯ ಕೊಚ್ಚಿಕೊಂಡು ಹೋಗಲು ಬಿಡುತ್ತಾರೋ
ಆ ದೇಶ ಕಂಡು ಅಯ್ಯೋ ಪಾಪ ಅನ್ನೋಣ
ಓ ನನ್ನ ದೇಶವೇ
ಓ ನನ್ನ ಸುಮಧುರ ದೇಶವೇ
ನಿನಗೆ ನನ್ನ ಕಣ್ಣೀರು
–ಮೂಲ : ಲಾರೆನ್ಸ್ ಫೆರ್ಲಿಂಘೆಟ್ಟಿ
ಕನ್ನಡಕ್ಕೆ : ನಟರಾಜ್ ಹುಳಿಯಾರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243