ಭಾವ ಭೈರಾಗಿ

ಕವಿತೆ | ಕುಡುಕ ಸೂಳೆಮಗನೊಬ್ಬನ ಭಕ್ತಿಗೀತೆ

Published

on

 

ನ್ನ ಬೇವಾರ್ಸಿ ಮಾತು ಬಿಡಿ,
ಸೂಫಿ ಸಂತರನ್ನು ಕೇಳಿ
ನಾಗಾ ಸಾಧುಗಳನೂ
ಡಿವಿಜಿಯಂಥ ಡಿವಿಜಿಯೆ ಮಿಕ್ಸ್ ಮಾಡಿದ
ಉಮರನ ಒಸಗೆಯ ಕೇಳಿ
ತರದೂದಿದ್ದರೆ ಆಮೇಲೆ ತಕರಾರ ಥಕಥೈ ಹೇಳಿ.

ಆ ಹಕ್ಕಿಯ ಆ ಕಾನಿನ ಆ ಬಾನಿನ ಆ ಹಾಡಿನ
ಆ ಜಾಡಿನ ಆ ನಾಡಿನ ಅಮಲೇರಿರಲು
ಕಡಿಯುವ ಈ ಬಾಳ ಕುಡಿಯುವೆ, ಬಿಸುಡವೆನದ ಕುಡಿದು ತೊಟ್ಟು ಕೊನೆಯ ತೊಟ್ಟೂ
ಕದ್ದೋಡುವೆನಿಲ್ಲಿಂದ ಈ ದರಿದ್ರ ಮರ್ತ್ಯದಿಂದ
ಆ ಸುಖ ಸುಂದರ ಅಮರ್ತ್ಯಕೆ
ದಿನದಿನದೀ ಗಾಣ-ನರಕದಿಂದ ಅನುದಿನದ ನಾಕಕೆ.

ಹೇಳಿ ಏನಿದೆ ಈ ತಾವಿನಲ್ಲಿ
ನೋವು ಸಾವು ಸಂಕಟದೊಂದೆ ಏಕತಾರಿ ಗೊಗ್ಗರು ಭೂಮಿಗೀತವಿಲ್ಲಿ
ಕ್ಷಣವೊಂದರ ಇಂದಿನೀ ಸೌಂದರ್ಯ ಸೊರಗಿ ಕರಗಿ ಪ್ರೇತವಾಗಿ
ನಾಳೆಗೇನು ಉಳಿಯಿತಿಲ್ಲಿ
ನನಗೇನಿದೆ ಹೇಳಿ ಕೆಲಸವಿಲ್ಲಿ.

ಎಲ್ಲಿ ಎಲ್ಲಿ ಹಳೆ ಹುಳಿ ಹೆಂಡವೆಲ್ಲಿ
ಅದನು ಕುಡಿಯಲಾರೆನೇ
ಕುಡಿದು ಮತ್ತನಾಗಿ ಕತ್ತಲಲ್ಲಿ ಕಾಣದಿರೆನೆ ಆ ಅಗೋಚರ ದಿವ್ಯವ
ಮದ್ಯ ಕುಡಿದ ಮಧ್ಯ ರಾತ್ರಿ ನಿದ್ದೆಯಲ್ಲಿ ಹಾಗೇ ಸುಮ್ಮನೆ ಬರಲಿ ಸೊಗದ ಕನಸಿನಂತೆ ಸುಖ ಮರಣ
ಎಂದು ಹಾರೈಸಿದ್ದದೆಷ್ಟು ದಿನ.

ಆದರೂ ನಾನು ಸತ್ತರೂ ಕತ್ತರಿಸುವ ಬಾಳು ಉಳಿದೆ ಉಳಿವುದಲ್ಲ ;
ನಮ್ಮನಣಕಿಸುವುದಲ್ಲ
ಅಮಲೆ ನನಗೆ ಪಾಠ ಕಲಿಸಿತಲ್ಲ
ಬೇಡ ಈ ಸಾವ ಪಯಣ
ಜೀವಿಸುವುದೆ ಸಾವ ಸೋಲಿಸುವ ಅಮಲು
ಇದೆ ನನ್ನ ಹೊಸ ಠರಾವು
ಎಂಬ ಕೀಟ್ಸನನ್ನೂ ಕೇಳಿರಲ್ಲ.

ಮದ್ಯ ಮಾರ್ಗ ಹಿಡಿಯಿರಲ್ಲ
ಅವಿವೇಕದತಿರೇಕದ ಅಮಲುಗಳ್ಯಾವುವೂ ಬಾಟ್ಲಿಗಳಂತಿರುವುದಿಲ್ಲ
ಬಾಟ್ಲಿ ಒಡೆದು, ಪಕ್ಕಕೆ ಮದ್ಯದಂಗಡಿಯ ನೂಕಿ
ಕೊಲೆ ಸುಲಿಗೆ ಮಾನಭಂಗ ಭ್ರಷ್ಟಾಚಾರ ನೀಗಿದೆವೆಂಬ
ನಶೆಯಿಂದ ಬೇಗ ಹೊರಬನ್ನಿರಲ್ಲ.

-ಪ್ರೊ. ಎಚ್.ಪಟ್ಟಾಭಿರಾಮ ಸೋಮಯಾಜಿ
ಮಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version