ಭಾವ ಭೈರಾಗಿ
ಕವಿತೆ | ನಿನ್ನ ದಶಕದ ಪ್ರೇಮಕ್ಕಿಗೋ ಶೋಕ ಪುಷ್ಪ..!
- ಚೈತ್ರ ಟಿ ಎಸ್ ಬಕಲ
ಮೌನಿಯಾದೆನು, ಇಂದೊಮ್ಮೆ ಸೋಲೊಪ್ಪದೆ
ಮೌನಿಯಾದೆ!
ಹಿಂದಿನಂತೆ ಮಾತನಾಡುವ ಮೌನವಲ್ಲ,
ಇಂದು, ಮೌನ ಮೌನವಾಗೇ ಸ್ತಬ್ದವಾಗಿದೆ!.
ಮೌನ ಮುರಿಯಲಾದರೂ ಏನಿಹುದು?,
ಉಲಿಯಬೇಕಿದೆ ಬೇಡುವ ಪರಿಯಲಿ
“ಎನ್ನ ಬಿಡದಿರು, ನೀನಿರದೆ ನಾನಿರೆ!”
ಪ್ರೇಮಿಸಿದ ಪಾಪಕ್ಕಾಗಿ ಪರಿತಪಿಸಲಾರದೆ,
ಒಮ್ಮೆಲೆ ಮಿಂಚಂತೆ ಉದ್ಧಟ ಮೂಡಿ,
ಸುಡುಗಾಡಿನ ಸೂತಕ ಅಂತರಂಗವ ಅಳಿದಂತಾಗಿ,
ಅಚ್ಚರಿಯಿಂದೆದ್ದು ಇದೋ ಮಾತನಾಡುವೆ,
ನನ್ನ ಮಾತು, ಕೊನೆಯ ಮಾತು!
“ಕಣ್ಣೀರು ನನ್ನ ಅಸ್ತ್ರವಲ್ಲ, ಪ್ರೇಮ ನಿನ್ನ ಅಸ್ತ್ರವಲ್ಲ!
ಸೋಲಿಸುವ ಪ್ರೀತಿ ನಿನ್ನದಲ್ಲ, ಸೋತಿರುವೆ!
ಸಾಯಿಸುವ ಪ್ರೀತಿ ನಿನ್ನದು, ಬದುಕಿರುವೆ!
ಬದುಕಿರುವೆ, ಬದುಕು ಕಾಣುವ ದಾಹದಿ
ನಿನ್ನ ದಶಕದ ಪ್ರೇಮಕ್ಕಿಗೋ ಶೋಕ ಪುಷ್ಪ!”
ಮೌನಿಯಾದೆನು, ಪ್ರೀತಿಯನು ಪರಿತ್ಯಜಿಸಿ ಗೆದ್ದು ಮೌನಿಯಾದೆ!
ಸುದ್ದಿದಿನ.ಕಾಂ|ವಾಟ್ಸಾಪ್|9980346243