ಭಾವ ಭೈರಾಗಿ

ಕವಿತೆ | ಐಟಂ ಗರ್ಲ್..!

Published

on

 

ನಾ ನಾನಾಗಿದ್ದೆ.
ಬಡತನ ನನ್ನ ಮನೆಯನ್ನು
ಕಿತ್ತುತಿನ್ನುವ ಮೊದಲು,
ಆಡಿ ನಲಿಯುವ ವಯಸ್ಸಲ್ಲಿ
ಜವಾಬ್ದಾರಿಗಳು
ಹೆಗಲೇರುವ ಮೊದಲು.

ನಾ ನಾನಾಗಿದ್ದೆ.
ಜೀವನದಲ್ಲಿ
ಕನಸುಗಳನ್ನೊತ್ತು
ಬದುಕುವ ಛಲ ಹೊಂದಿ
ಕೆಲಸವನ್ನರಸಿ ಎಂದೂ
ಕಾಣದ ಪಟ್ಟಣವೆಂಬ
ಮಾಯಾಜಾಲವನ್ನು
ಹೊಕ್ಕುವ ಮೊದಲು.

ನಾ ನಾನಾಗಿದ್ದೆ.
ಹೋದ ಕಡೆಯಲ್ಲೆಲ್ಲ
ನನ್ನ ಚೆಂದವನ್ನು
ಮನದಲ್ಲೇ ಸಂಭೋಗಿಸಿ
ಮೈಥುನ
ಮಾಡಿಕೊಳ್ಳುವುದಕ್ಕೂ
ಮೊದಲು.

ನಾ ನಾನಾಗಿದ್ದೆ.
34,26,32 ಎಂದು
ಅಳತೆ ಟೇಪಿನ
ಸುತ್ತಳತೆಯ
ಲೆಕ್ಕದಲ್ಲಿ ನನ್ನ
ದೇಹವನ್ನು ಹರಾಜಿಗೆ
ಇಡುವುದಕ್ಕೂ ಮೊದಲು.

ನಾ ನಾನಾಗಿದ್ದೆ.
ಅಡಿಗಳ ಲೆಕ್ಕದ
ಈ ದೇಹವನ್ನು‌
ಸ್ಲಿಮ್ಮು, ಸೆಕ್ಸಿ, ಜಿ಼ರೋ ಸೈಜ಼್
ಆಧಾರದ ಮೇಲೆ
ವರ್ಗೀಕರಿಸುವ ಮೊದಲು.

ನಾ ನಾನಾಗಿದ್ದೆ.
ಮೊಲೆ, ಯೋನಿಯಂಬ
ರಕ್ತಮಾಂಸದ ಮುದ್ದೆಯು
ಹೆಣ್ಣಿನ ಅಸ್ತಿತ್ವವನ್ನು
ನಿರ್ಧರಿಸುತ್ತದೆ ಎಂದು
ತಿಳಿಯುವುದಕ್ಕೂ ಮೊದಲು.

ಹೌದೂ

ನಾ ಇಂದಿಗೂ ನಾನಾಗಲೂ
ಪ್ರಯತ್ನಿಸುತ್ತಲೇ ಇದ್ದೇನೆ
ಆದರೆ ಈ ಹಸಿವು ಬಿಡಬೇಕಲ್ಲ.
ಹಸಿವಿಗೆ ಭಾವನೆಗಳ ಹಂಗಿಲ್ಲ.

ಹೊಟ್ಟೆಯನ್ನು ಹೊತ್ತ ತಪ್ಪಿಗೆ ನಾ ಗರ್ಲ್ ಆಗಿದ್ದೇನೆ
ಹ್ಹಾ ಕ್ಷಮಿಸಿ
“ಐಟಂ ಗರ್ಲ್”
ಆಗಿದ್ದೇನೆ…!

ಮಸಣದ ಹೂ (ಪೂರ್ಣಿಮ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version