ದಿನದ ಸುದ್ದಿ
ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಬೈಕ್ ರ್ಯಾಲಿ
- ವರದಿ : ಸಿ ಜಗದೀಶ್ ಕೂಲಂಬಿ
ಸುದ್ದಿದಿನ,ದಾವಣಗೆರೆ:ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಇದೆ ಫೆಬ್ರವರಿ 04 ರಿಂದ 12 ರವರೆಗೆ ನಡೆಯಲಿರುವ 76 ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರದವರೆಗೆ ಬೃಹತ್ ಬೈಕ್ ರ್ಯಾಲಿಯ ಮೂಲಕ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ ಶ್ರೀ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಕರೆತರಲಾಗುವುದು.
ಇಂದು ಭರಮಸಾಗರದ ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಬೈಕ್ ರ್ಯಾಲಿಯನ್ನು ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡು ಆ ಮೂಲಕ ಹುಣ್ಣಿಮೆಗೆ ಶುಭ ಕೋರಬೇಕೆಂದು ತೀರ್ಮಾನಿಸಲಾಯಿತು.
ಬೈಕ್ ರ್ಯಾಲಿಯು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆಯಿಂದ ಫೆ 4 ರ ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡು ಭರಮಸಾಗರ ಹೋಬಳಿಯ ಸುಮಾರು 30 ಹಳ್ಳಿಗಳ ಮೂಲಕ ಸಾಗಿ ಸುಮಾರು 5000 ಬೈಕ್ ರ್ಯಾಲಿಯ ಮೂಲಕ ಸಂಜೆ ನಾಲ್ಕು ಗಂಟೆಗೆ ಭರಮಸಾಗರದಲ್ಲಿ ನಡೆಯಲಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾ ಮಂಟಪಕ್ಕೆ ತಲುಪುವುದು.
ಭರಮಸಾಗರ ಹೋಬಳಿಯ ಭಕ್ತರ ಆಶಯದಂತೆ ಅಂದು ಸಂಜೆ ನಾಲ್ಕು ಗಂಟೆಗೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ತೆಪ್ಪೋತ್ಸವ ಕಾರ್ಯಕ್ರಮವನ್ನು ಭರಮಸಾಗರದ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸರ್ವ ಸಮಾಜದ ಬಾಂಧವರು ಭಾಗವಹಿಸಿ ಬೈಕ್ ರ್ಯಾಲಿಯನ್ನು ಹಾಗೂ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ದಾವಣಗೆರೆ ಇವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.
ಸಭೆಯಲ್ಲಿ ಶಶಿಧರ ಹೆಮ್ಮನ ಬೇತೂರು, ಮೋಹನ್ ಸಿರಿಗೆರೆ, ಕುಮಾರ್ ಮೆಳ್ಳೆ ಕಟ್ಟೆ, ಬಸವರಾಜ್ ಸಿರಿಗೆರೆ, ಶೈಲೇಶ್ ಚೌಲಹಳ್ಳಿ, ಶ್ರೀನಿವಾಸ್ ರಾಮಘಟ್ಟ, ಸಿದ್ದೇಶ್ ನಂದಿ ಕಂಬ, ರಾಕೇಶ್ ಸಾತಿ, ಲಿಂಗರಾಜ್ ನಾಗನೂರು, ಅಶೋಕ್ ಹೊನ್ನ ನಾಯಕನಹಳ್ಳಿ, ಮಲ್ಲಿಕಾರ್ಜುನ್ ಮೆಳ್ಳೆಕಟ್ಟೆ, ಸಂತೋಷ್ ಗಂಗನಕಟ್ಟೆ, ಮತ್ತಿತರ ಪದಾಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು.
ವಿಶೇಷ ಸೂಚನೆ : ಫೆಬ್ರವರಿ 4 ರಿಂದ 12 ರವರೆಗೆ ನಡೆಯುವ ತರಳಬಾಳು ಹುಣ್ಣಿಮೆಗೆ ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುವ ಭಕ್ತಾದಿಗಳಿಗೆ ಹೆಬ್ಬಾಳು ಟೋಲ್ ನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿರುತ್ತದೆ. ಭಕ್ತರು ತಮ್ಮ ವಾಹನಗಳಿಗೆ ಶಿವ ಧ್ವಜ ಕಟ್ಟಿಕೊಂಡವರಿಗೆ ಉಚಿತ ಪ್ರವೇಶವಿರುತ್ತದೆ.
ದಾವಣಗೆರೆ ಜಿಲ್ಲಾ ಪತ್ರಿಕಾ ಹಾಗೂ ಮಾಧ್ಯಮದ ಎಲ್ಲಾ ವರದಿಗಾರ ಮಿತ್ರರು ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಸುದ್ದಿಯನ್ನು ಮಾಡುವುದರ ಮೂಲಕ ನಾಡಿನಾದ್ಯಂತ ಜನರಿಗೆ ತಲುಪಿಸಬೇಕೆಂದು ಕೋರಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243