ದಿನದ ಸುದ್ದಿ
ಸಿರಿಗೆರೆ ಮಠದಿಂದ ಧರ್ಮದ ಆಧರಿತ ರಾಜಕೀಯ ಮಾರ್ಗದರ್ಶನ : ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ
ಸುದ್ದಿದಿನ,ಸಿರಿಗೆರೆ: ಮತದಾನ ಮಾಡುವ ಹಕ್ಕು ಇರುವವರೆಲ್ಲರೂ ರಾಜಕೀಯ ಮಾಡಬಹುದಾಗಿದೆ. ಸಿರಿಗೆರೆ ಮಠ ಎಂದಿಗೂ ತನಗಾಗಿ ರಾಜಕೀಯ ಮಾಡದೇ ಲೋಕ ಕಲ್ಯಾಣಕ್ಕಾಗಿ ರಾಜಕೀಯ ಮಾರ್ಗದರ್ಶನ ಮಾಡುತ್ತ ಬಂದಿದೆ ಎಂದು ಸಾಣೆಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹಿರಿಯ ಗುರು ರಾಜಕೀಯದಲ್ಲಿ ಬದ್ಧತೆ ತೋರಿದ್ದರು. ಅವರ ಕಾಲದಲ್ಲಿ “ಸಿರಿಗೆರೆ ಮಠ
ಸೀನಿದರೆ ವಿಧಾನಸೌಧ ನಡುಗುತ್ತಿತ್ತು’ ಎಂಬ ಮಾತು ಜನಜನಿತವಾಗಿತ್ತು. ಆ ಕಾಲದ ರಾಜಕೀಯ ಮುತ್ಸದ್ಧಿಗಳು ಶಿವಕುಮಾರ ಶ್ರೀಗಳ ಅಣತಿ ಇಲ್ಲದೆ ರಾಜಕೀಯ ಮಾಡಿದವರಲ್ಲ. ಎಚ್. ಸಿದ್ಧವೀರಪ್ಪ ಮತ್ತು ದೇವರಾಜ ಅರಸು ಒಮ್ಮೆಲೆ ಮುಖ್ಯಮಂತ್ರಿಗಳಾಗಬೇಕಾದ ಸಂದರ್ಭ ಸೃಷ್ಟಿಯಾಗಿದ್ದಾಗ ಸ್ವತಃ ದೇವರಾಜ ಅರಸು ಸಿರಿಗೆರೆಗೆ ಹತ್ತಾರು ಬಾರಿ ಬಂದು ಗುರುಗಳನ್ನು ಭೇಟಿಯಾಗಿದ್ದರು. ಗ್ರಾಮ ಪಂಚಾಯತ್, ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ತಾವು ಹೇಳಿದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಗುರುಗಳು ಮತದಾರರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದರು.
ಈಗ ರಾಜಕೀಯ ಕುಲಗೆಟ್ಟು ಹೋಗಿದೆ. ಗೌರವಾನ್ವಿತರು ರಾಜಕೀಯ ಮಾರ್ಗದರ್ಶನ ಮಾಡಿದರೆ ಅದನ್ನು ಬೇರೆಯೇ ರೂಪ ಕೊಟ್ಟು ನೋಡುತ್ತಾರೆ. ರಾಜಕಾರಣದಲ್ಲಿ ಒಬ್ಬ ಸ್ವಾಮಿ ಹೇಳಿದರೆ ತಪ್ಪು, ಮತ್ತೂಬ್ಬ ಸ್ವಾಮಿ ಹೇಳಿದರೆ ಬಾಯಿ ಮುಚ್ಚಿಕೊಂಡು ಇರುವಂತಹ ಸ್ಥಿತಿ ಬಂದಿದೆ. ತತ್ವ, ಬದ್ಧತೆ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಆದ್ದರಿಂದ ಯುವಕರು ಮತ್ತು ವಿದ್ಯಾರ್ಥಿಗಳು ನಿಷ್ಠೆ ಮತ್ತು ನಿಷ್ಠುರತೆ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401