ದಿನದ ಸುದ್ದಿ
ಗ್ರಾಹಕರ ಸಹಕಾರವೇ ಸಂಸ್ಥೆಯ ಬಂಡವಾಳ : ತರಳಬಾಳು ಶ್ರೀ
ಸುದ್ದಿದಿನ, ಬ್ಯಾಡಗಿ: ಪ್ರಾಮಾಣಿಕ ಆಡಳಿತ, ಗ್ರಾಹಕರ ಸಹಕಾರ, ನಂಬಿಕೆಯಿಂದ ಬ್ಯಾಂಕ್ ಶತಮಾನ ಕಂಡಿದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ .ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಗಜಾನನ ಕೋ. ಆಪರೇಟಿವ್ ಅರ್ಬನ್ ಬ್ಯಾಂಕ್ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದಾನಧರ್ಮದಲ್ಲಿ ಪಾಲ್ಗೊಳ್ಳಬೇಕು. ಬ್ಯಾಂಕ್ ಆಡಳಿತ, ಗ್ರಾಹಕರು ಹಾಗೂ ಸಿಬ್ಬಂದಿಯ ಕಾರ್ಯ, ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಇದೇ ರೀತಿ ಮುಂದುವರಿಯಲಿ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬಹುತೇಕ ದೊಡ್ಡ ಬ್ಯಾಂಕ್ಗಳು ನಷ್ಟದ ಹಾದಿಯಲ್ಲಿವೆ. ಇಂತಹ ಸ್ಥಿತಿಯಲ್ಲಿ ನೂರಾರು ಕೋಟಿ ರೂ. ವಹಿವಾಟು ನಡೆಸುವ ಗಜಾನನ ಬ್ಯಾಂಕ್ ಕಾರ್ಯ ಶ್ಲಾಘನೀಯ ಎಂದರು. ಶಾಸಕ ಶ್ಯಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, 1918ರಲ್ಲಿ ಬ್ರಿಟಿಷರ ಅವಧಿಯಲ್ಲಿ ಸ್ಥಳೀಯವಾಗಿ ಬ್ಯಾಂಕ್ ತೆರೆದು ನೂರರ ಸಂಭ್ರಮ ಆಚರಿಸುತ್ತಿರುವುದು ದೊಡ್ಡ ಸಾಧನೆ ಎಂದರು. ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸಾಲ ಪಡೆಯಲು ತಿಂಗಳುಗಟ್ಟಲೇ ಅಲೆದಾಡಬೇಕು. ಆದರೆ, ಅರ್ಬನ್ ಬ್ಯಾಂಕ್ಗಳು 24 ಗಂಟೆಯಲ್ಲಿ ಸಾಲ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿವೆ ಎಂದರು.
ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ, ಬಸಲಿಂಗಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶ್ಯಾಮನೂರ ಶಿವಶಂಕರಪ್ಪ ಅವರು ಶತಮಾನೋತ್ಸವ ಸ್ಮರಣ ಸಂಚಿಕೆ, ಸಂಸದ ಶಿವಕುಮಾರ ಉದಾಸಿ ಬೆಳ್ಳಿನಾಣ್ಯ ಬಿಡುಗಡೆ ಮಾಡಿದರು.
ಶಾಸಕರಾದ ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ವರ್ತಕ ಎಸ್.ಆರ್. ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಜಿಲ್ಲಾ ಉಪನಿಬಂಧಕಿ ಶಶಿಕಲಾ ಪಾಳೇದ, ಸಹಾಯಕ ನಿಬಂಧಕ ನಾಗಪ್ಪ ಕುಮ್ಮೂರ, ಚನ್ನಬಸನಗೌಡ ಪಾಟೀಲ, ಜಗದೀಶ ಪಾಟೀಲ ಇದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಹಿರೇಮಠ ತಂಡದಿಂದ ತತ್ವಪದ ಹಾಗೂ ಜಾನಪದ ಗೀತೆಗಳ ಗಾಯನ ಜರುಗಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401