ದಿನದ ಸುದ್ದಿ

ಬೆಳೆ ವಿಮೆ: ಬಿಹಾರಕ್ಕೆ ತರಳಬಾಳು ಶ್ರೀಗಳ ಆಶಯದಂತೆ ಅಧ್ಯಯನ ತಂಡ ಕಳುಹಿಸಲು ಸರ್ಕಾರದ ಒಪ್ಪಿಗೆ

Published

on

ಸುದ್ದಿದಿನ,ಬೆಂಗಳೂರು: ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತಾಪಿ ವರ್ಗಕ್ಕೆ ಅನ್ಯಾಯವಾಗಿದೆ ಎಂಬ ಕೂಗಿಗೆ ಸ್ಪಂದಿಸಿರುವ ಕೃಷಿ ಸಚಿವ ಶಿವಶಂಕರ ರೆಡ್ಡಿ, ಬಿಹಾರದಲ್ಲಿ ಅನುಷ್ಠಾನದಲ್ಲಿರುವ ರೈತಸ್ನೇಹಿ ವಿಮೆ ಯೋಜನೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸುವ ಭರವಸೆ ನೀಡಿದರು.

ಆರ್‌.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಶಾಸಕರು, ಅಧಿಕಾರಿಗಳು, ರೈತ ಮುಖಂಡರ ಜತೆ ಚರ್ಚಿಸಿದ ಬಳಿಕ ಸಚಿವರು ಈ ನಿರ್ಧಾರ ಪ್ರಕಟಿಸಿದರು. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ರೈತರ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. ಆದರೆ, ಮಾರ್ಗದರ್ಶಿ ಸೂತ್ರಗಳ ಗೊಂದಲದಿಂದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ವಿಮಾ ಕಂಪನಿಗಳು ಕಠಿಣ ನಿಯಮ ರೂಪಿಸಿ ಪರಿಹಾರ ನೀಡಲು ಅಡ್ಡಿಪಡಿಸುತ್ತಿದೆ ಎಂಬ ಭಾವನೆ ರೈತರಲ್ಲಿ ಮನೆ ಮಾಡಿದೆ ಎಂದು ಶಾಸಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ನಷ್ಟ ಆಗಿರುವ ಕಡೆ ರೈತರಿಗೆ ಪರಿಹಾರ ಸಿಕ್ಕಿದೆ. ಕೆಲವೆಡೆ ತಾಂತ್ರಿಕ ಕಾರಣದಿಂದ ಪರಿಹಾರ ಪ್ರಕಟಿಸಿಲ್ಲ. ಇಲಾಖೆ ಅಥವಾ ವಿಮಾ ಕಂಪನಿಗಳಿಂದ ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಲಾಗುವುದೆಂದು ಭರವಸೆ ನೀಡಿದರು.

ರೈತರ ಕಷ್ಟಕ್ಕೆ ಸ್ಪಂದನೆ ನೀಡಿ: ತರಳಬಾಳು ಶ್ರೀ

ಬೆಳೆ ವಿಮೆ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿರುವ ಜತೆಗೆ ಯೋಜನೆಯಲ್ಲಿನ ಲೋಪ-ದೋಷಗಳನ್ನು ಸ್ವಾಮೀಜಿ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿ ”ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗದಂತೆ ಸರಕಾರ ಎಚ್ಚರ ವಹಿಸಬೇಕು. ಕಠಿಣ ನಿಯಮಗಳಿದ್ದಲ್ಲಿ ಅವುಗಳನ್ನು ಸರಳೀಕರಿಸಬೇಕು,” ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಕಿವಿಮಾತು ಹೇಳಿದರು.

ಸಚಿವರಿಗೆ ನಷ್ಟದ ವಿವರಣೆ ಹಸ್ತಾಂತರ

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಶೇ.75ರಷ್ಟು ಬೆಳೆ ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ರೈತರಿಗೆ ಸಮರ್ಪಕವಾದ ಪರಿಹಾರ ದೊರೆತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ 111 ಕೋಟಿ ರೂ. ಹಾಗೂ ದಾವಣಗೆರೆಯಲ್ಲಿ 70 ಕೋಟಿ ರೂ. ಕಂತಿನ ಮೊತ್ತ ಪಾವತಿಯಾಗಿದೆ. ಆದರೆ, ಪರಿಹಾರ ಕ್ರಮವಾಗಿ 22 ಕೋಟಿ ರೂ. ಹಾಗೂ 11 ಕೋಟಿ ರೂ. ಮಾತ್ರ ದೊರೆತಿದೆ. ಈ ತಪ್ಪು ಸರಿಪಡಿಸಲು ಎರಡೂ ಜಿಲ್ಲೆಗಳಿಗೆ ಅಧ್ಯಯನ ತಂಡ ಕಳುಹಿಸಿ ವರದಿ ತರಿಸಿಕೊಳ್ಳುವುದಾಗಿ ಸಚಿವರು ಪ್ರತಿಕ್ರಿಯಿಸಿದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ್‌, ಎನ್‌.ಚಂದ್ರಪ್ಪ, ಶಿವಕುಮಾರ ಉದಾಸಿ, ಶಾಸಕರಾದ ಶ್ರೀರಾಮುಲು, ಸಿ.ಟಿ.ರವಿ, ಗೂಳಿಹಟ್ಟಿ ಶೇಖರ್‌, ರಘುಮೂರ್ತಿ, ವಿರೂಪಾಕ್ಷಪ್ಪ, ರಾಮಚಂದ್ರ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್‌, ಲಿಂಗಪ್ಪ, ಬೆಳ್ಳಿ ಪ್ರಕಾಶ್‌, ಮಾಜಿ ಸಂಸದ ಜನಾರ್ದನಸ್ವಾಮಿ, ರೈತ ಮುಖಂಡ ಎಚ್‌.ಆರ್‌.ಬಸವರಾಜಪ್ಪ, ಕೃಷಿ ಕಾರ್ಯದರ್ಶಿ ಎಂ.ಮಹೇಶ್ವರರಾವ್‌, ನಿರ್ದೇಶಕ ಬಿ.ವೈ.ಶ್ರೀನಿವಾಸ್‌ ಮತ್ತಿತರರಿದ್ದರು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ

  • ಬೆಳೆ ವಿಮೆ ಅಧ್ಯಯನಕ್ಕಾಗಿ ಬಿಹಾರಕ್ಕೆ ಅಧಿಕಾರಿಗಳ ತಂಡ ಕಳುಹಿಸಲು ಒಪ್ಪಿಗೆ.
  • ಹಾವೇರಿ, ಗದಗ ಜಿಲ್ಲೆಯಲ್ಲಿ ಭತ್ತ ಹಾಗೂ ಅಕ್ಕಿ ಎಂಬ ಮಾಹಿತಿ ಪರಿಹಾರದ ಕಾಲಂನಲ್ಲಿ ತಪ್ಪಾಗಿ ನಮೂದಾಗಿದ್ದು, ಸರಿಪಡಿಸಲು ಒತ್ತಾಯ.
  • ಪಡಿತರ ಮೂಲಕ ಮೆಕ್ಕೆಜೋಳ ವಿತರಣೆಗೆ ಕ್ರಮಕ್ಕೆ ಮನವಿ.
  • ಪಡಿತರದಡಿ ಮೆಕ್ಕೆಜೋಳ ವಿತರಿಸದಿದ್ದಲ್ಲಿ ಪ್ರತಿ ರೈತನ 10 ಕ್ವಿಂಟಾಲ್‌ ಉತ್ಪನ್ನದ ಮೊತ್ತ ಬ್ಯಾಂಕ್‌ ಖಾತೆಗೆ ಜಮೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version