ದಿನದ ಸುದ್ದಿ

‘ನಾಡೋಜ ಪಾಟೀಲ ಪುಟ್ಟಪ್ಪ’ ನವರಿಗೆ ಸಿರಿಗೆರೆ ಬೃಹನ್ಮಠದಿಂದ 1ಲಕ್ಷ ರೂ ಕೊಡುಗೆ

Published

on

ಸುದ್ದಿದಿನ,ಹುಬ್ಬಳ್ಳಿ : ನೂರು ತುಂಬಿದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಅವರ ಹುಬ್ಬಳ್ಳಿಯ ನಿವಾಸದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶನಿವಾರ ಬೆಳಗ್ಗೆ ಭೇಟಿ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಕುರಿತಾದ ತಮ್ಮ ಹೋರಾಟದ ಹಳೆಯ ನೆನಪುಗಳ ಸುರಳಿಯನ್ನು ಪಾಪು ಶ್ರೀ ಗುರುಗಳವರ ಮುಂದೆ ಬಿಚ್ಚಿಟ್ಟರು.ರಾಜಕೀಯ ಮುಖಂಡರಿಗೆ ನಾಡು ನುಡಿಯ ವಿಷಯಗಳು ಪ್ರಥಮ ಆದ್ಯತೆ ಆಗಬೇಕು. ಆದರೆ ಅವರಿಗೆ ಇವು ಕೊನೆಯ ಆದ್ಯತೆಗಳಾಗಿರುವುದು ವಿಷಾದಕರವೆಂದು ಪಾಪು ಅನಿಸಿಕೆ ವ್ಯಕ್ತಪಡಿಸಿದರು.

“ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಭಾಗವಹಿಸಿದ್ದರು. ಉದ್ಘಾಟನೆ ಮುಗಿಸಿ ಹೊರಡಲು ವೇದಿಕೆ ಇಳಿದು ಹೊರಡಲು ಮುಂದಾದರು. ಆಗ ನಾನು ಸಮ್ಮೇಳನಾಧ್ಯಕ್ಷರ ಭಾಷಣ ಇನ್ನೂ ಮುಗಿದಿಲ್ಲ. ನಾಡಿನ ಮುಖ್ಯಮಂತ್ರಿಯಾದ ನೀವು ಅದು ಹೇಗೆ ಸಮ್ಮೇಳನಾಧ್ಯಕ್ಷರ ಭಾಷಣ ಕೇಳದೆ ಹೋಗುತ್ತೀರಿ ಎಂದು ಗದರಿಸಿದೆ. ಕುರ್ಚಿಯಿಂದ ಮೇಲೆದ್ದ ಮುಖ್ಯಮಂತ್ರಿಗಳು ಪುನಃ ಕುಳಿತರು’’ ಎಂದು ಹಳೆಯ ನೆನಪನ್ನು ಅವರು ಬಿಚ್ಚಿಟ್ಟರು.

ಪಾಪು ಅವರ ಅದ್ಭುತ ನೆನಪಿನ ಶಕ್ತಿಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳವರು ನಾಡು ನುಡಿಗಳ ಬಗೆಗಿನ ಅವರ ಕಾಳಜಿಯನ್ನು ರಾಜಕೀಯ ನೇತಾರರು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ ಅವರು ಚಿರಕಾಲ ಆರೋಗ್ಯದಿಂದ ಇದ್ದು ಕನ್ನಡ ನಾಡು ನುಡಿಗಳಿಗೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಒಂದು ಲಕ್ಷ ರೂಗಳ ನಿಧಿಯನ್ನು ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version