ದಿನದ ಸುದ್ದಿ
ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ ಶ್ರದ್ಧಾಂಜಲಿ : ದಾಸೋಹಕ್ಕೆ ಮಲ್ಲನಾಯಕನಹಳ್ಳಿಯಲ್ಲಿ ನಾಳೆ ಅಕ್ಕಿ ಸಮರ್ಪಣೆ
ಸುದ್ದಿದಿನ ಡೆಸ್ಕ್ : ನಾಡಿನ ಸಾಮಾಜಿಕ , ಶೈಕ್ಷಣಿಕ,ಧಾರ್ಮಿಕ ಕ್ಷೇತ್ರದ ದಿವ್ಯಚೇತನ , ಲೋಕದ ತರಳರಬಾಳಿನ ಮಹಾಬೆಳಗು, ಶ್ರೀ ಮದ್ದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 26 ನೆಯ ಶ್ರದ್ಧಾಂಜಲಿ ಸಮಾರಂಭವು ದಿನಾಂಕ 20-09-2018 ರಿಂದ 24-09-2018 ರವರೆಗೆ ಜರುಗಲಿದೆ.
ಲಕ್ಷಾಂತರ ಶಿಷ್ಯ ಸಮುದಾಯ ಪಾಲ್ಗೊಂಡು ಶ್ರೀ ಗುರು ಕೃಪೆ ಪಡೆಯುವ ಈ ದಿನದ ದಾಸೋಹ ಕೈಂಕರ್ಯಕ್ಕೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ವ್ಯಾಪ್ತಿಯ ಶಿಷ್ಯಸಮಾಜ ನೂರಾರು ಕ್ವಿಂಟಲ್ ಅಕ್ಕಿಯನ್ನು ನಾಳೆಯ 14 ರ ಶುಕ್ರವಾರ ಸಮರ್ಪಿಸಲಿದ್ದಾರೆ.
ನಾಡಿಗೆ ಬರ ಬಂದರೂ ತರಳಬಾಳು ಮಠದ ಭಕ್ತರ ಭಕ್ತಿಗೆ ಎಂದೂ ಬರ ಬರುವುದಿಲ್ಲ ಎನ್ನುವ ಶ್ರೀ ಗಳ ಆಶೀರ್ವಾಣಿಗೆ ಸಾಕ್ಷಿ ಎಂಬಂತೆ 2013 ರಿಂದಲೂ ಹರಿಹರ ತಾಲ್ಲೂಕಿನಲ್ಲಿ ಶ್ರದ್ಧಾಂಜಲಿ ಸಮಾರಂಭದ ಪೂರ್ವದಿ ಅಕ್ಕಿ ಸಮರ್ಪಿಸುವ ಸಂಪ್ರದಾಯ ಆರಂಭವಾಗಿದ್ದು, ಹೊಳೆ ಸಿರಿಗೆರೆ, ಕುಂಬಳೂರು,ಮಲೇಬೆನ್ನೂರು,ಹನಗವಾಡಿಯಲ್ಲಿ ಈ ಕಾರ್ಯಕ್ರಮಗಳು ಈ ಹಿಂದಿನ ವರ್ಷಗಳಲ್ಲಿ ನಡೆದಿದ್ದು ಇತಿಹಾಸ. ಬೇಡಬಾರದು ಜಂಗಮ, ಬೇಡಿಸಿಕೊಳ್ಳಬಾರದು ಭಕ್ತ ಎಂಬ ಅಣ್ಣನವರ ವಾಣಿಗನುಗುಣವಾಗಿ ಮಲ್ಲನಾಯಕನಹಳ್ಳಿ ಹಾಲುಮತದ ಸಮಾಜದವರು ಸೇರಿದಂತೆ ಇನ್ನಿತರ ಸಮಾಜದವರ ಸಹಕಾರದಿಂದ ಅಕ್ಕಿ ಸಂಗ್ರಹಿಸಿ ಮಹಾಗುರುವಿನ ದಾಸೋಹ ಸೇವೆಗೆ ಎಲ್ಲರೂ ಒಟ್ಟಾಗಿ ಕಾರ್ಯಮಗ್ನರಾಗಿ ಈ ಬಾರಿ ಮಲ್ಲನಾಯಕನಹಳ್ಳಿಯಲ್ಲಿ ಆಯೋಜಿಸಿರುವ ಅಕ್ಕಿಯ ಭಕ್ತಿ ಸಮರ್ಪಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ.
ಇದೇ ಪ್ರಥಮ ಬಾರಿಗೆ ಈ ಗ್ರಾಮಕ್ಕೆ ಪುರ ಪ್ರವೇಶ ಮಾಡುತ್ತಿರುವ ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾನ್ನಿಧ್ಯ ಮುಖೇನ ತನು ಮನ ಧನದ ಭಕ್ತಿಯನ್ನು ಅರ್ಪಿಸಲಿದ್ದಾರೆ.
ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜನೀಯ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಶ್ರೀಗಳವರು ,ಕನಕ ಗುರುಪೀಠದ ಶ್ರೀ ಗುರುವರ್ಯರಾದ ಶ್ರೀ ನಿರಂಜಾನಂದಪುರಿ ಸ್ವಾಮೀಜಿಯವರು ವಹಿಸಲಿದ್ದಾರೆ. ಪೂಜ್ಯ ತ್ರಯರನ್ನು ಒಂದೇ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರುವದರ ಜೊತೆ ಜಾತ್ಯಾತೀತ ಸಹಬಾಳ್ವೆ ಯಡಿ ಸಮಾನತೆಯಿಂದ ಬದುಕುವ ಸಂದೇಶ ಸಾರುವದಕ್ಕೆ ಮಲ್ಲನಾಯಕನಹಳ್ಳಿ ಸಾಕ್ಷಿಯಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಹರ ತಾಲ್ಲೂಕು ಸಾಧು ಸಮಾಜದ ಅಧ್ಯಕ್ಷ ಬಣಕಾರ ವಿರೂಪಾಕ್ಷಪ್ಪ ವಹಿಸಲಿದ್ದು, ಶ್ರೀ ಮದ್ ಸಾಧು ಸದ್ದರ್ಮ ಸಮಾಜದ ಅಧ್ಯಕ್ಷರಾದ ಶರಣ ಕೆ.ಆರ್ ಜಯದೇವಪ್ಪನವರು ಅಕ್ಕಿ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ
ಸಾಹಿತಿ ಶರಣ ಶಾಂತಗಂಗಾಧರ್ ಉಪನ್ಯಾಸ ನೀಡಲಿದ್ದು,ಸಂಸದರಾದ ಶರಣ ಜಿ.ಎಂ ಸಿದ್ದೇಶ್ವರ, ಶಾಸಕರು ಹಾಗೂ ಮಾಜಿ ಸಚಿವರಾದ ಡಾ.ಶಾಮನೂರು ಶಿವಶಂಕರಪ್ಪ ,ಹರಿಹರ ಶಾಸಕ ಶರಣ ರಾಮಪ್ಪ ,ಮಾಜಿ ಶಾಸಕರಾದ ಬಿ.ಪಿ.ಹರಿಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಾವಿರಾರು ಶರಣ ಬಂಧುಗಳು ಸಾಕ್ಷಿಯಾಗಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401