ದಿನದ ಸುದ್ದಿ
ತರಳಬಾಳು ಶ್ರೀ ಶಿವಕುಮಾರಶ್ರೀಗಳ ಶ್ರದ್ಧಾಂಜಲಿ : ಮಲ್ಲನಾಯಕನಹಳ್ಳಿಯಲ್ಲಿ ಜರುಗಿದ ಅಕ್ಕಿ ಸಮರ್ಪಣೆಯ ಸಮಾರಂಭ
ಸುದ್ದಿದಿನ ಡೆಸ್ಕ್ : ಲೋಕದ ತರಳರ ಬಾಳಿನ ಆರಾಧ್ಯ ದೈವವಾದ ತರಳಬಾಳು ಗುರು ಪರಂಪರೆಯ 20 ನೇ ಪೀಠದ ಅಧಿಪತಿಗಳಾಗಿ ಪೀಠವು ಸೇವೆಯ ಸಾಧನ ಎಂಬಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಾಲ್ಕು ದಶಕಗಳ ಅಹರ್ನಿಶಿ ತಪೋನಿಷ್ಟರಂತೆ ಕಾರ್ಯಮಗ್ನರಾಗಿ ಬಿದ್ದ ಸಮಾಜವನ್ನೇ ಎದ್ದು ನಿಲ್ಲಿಸಿದ ಮಹಾಬೆಳಗಾಗಿ ಅಸಂಖ್ಯಾತ ಶಿಷ್ಯರ ಹೃದಯದ ನಿತ್ಯ ಪೂಜನೀಯಸಿಂಹಸಾನಾಧೀಶರಾಗಿವಿರಾಜಮಾನರಾಗಿರುವ ಸ್ಮರಣೀಯ ಪರಮಪೂಜನೀಯ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯಮಹಾಸ್ವಾಮೀಜಿಯವರ 26 ನೇ ಶ್ರದ್ಧಾಂಜಲಿಯ ಸಮಾರಂಭ ಇದೇ 20 ರಿಂದ 24 ರವರೆಗೆ ಸಿರಿಗೆರೆಯಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಿ ಆಗಮಿಸುವ ಲಕ್ಷಾಂತರ ಶಿಷ್ಯರ ದಾಸೋಹ ಪ್ರಸಾದ ಸೇವೆಗೆ ಶ್ರೀ ಮಠದ ಅಭಿಮಾನಿ ಶಿಷ್ಯ ಸಮಾಜ ತನು-ಮನ-ಧನ-ದವಸ-ಧಾನ್ಯ ಅರ್ಪಿಸುವ ಪ್ರತೀತಿ, ಸಂಪ್ರದಾಯವೆಂಬಂತೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಡೆಯುತ್ತಿದೆ. ಈ ವರ್ಷದ ಶ್ರದ್ಧಾಂಜಲಿಯ ಸಮಾರಂಭಕ್ಕೆ ಈಗಾಗಲೇ ಹಲವಾರು ತಾಲ್ಲೂಕಿನ ಶ್ರದ್ದಾಳು ಶಿಷ್ಯರು ಭಕ್ತಿಯನ್ನು ಸೇವೆಯನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ.ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿಯ ಸಮಸ್ತ ಸಮಾಜ ಬಾಂಧವರು ಮಹಾಗುರುವಿನ ಪುಣ್ಯ ಸ್ಮರಣೆಗೆ ನೂರಾರು ಕ್ವಿಂಟಲ್ ಅಕ್ಕಿಯನ್ನು ಸಮರ್ಪಿಸುವ ಮೂಲಕ ನಾಡಿಗೆ ಬರ ಬಂದಿರಬಹುದು ಆದರೆ ತರಳಬಾಳು ಮಠದ ಶಿಷ್ಯರ ಭಕ್ತಿಗೆ ಎಂದೂ ಬರ ಬರುವುದಿಲ್ಲ ಎಂಬ ಶ್ರೀ ಗುರುವಾಣಿಯನ್ನು ಮತ್ತೊಮ್ಮೆ ಉನ್ನತೀಕರಿಸಿದ್ದಾರೆ.
ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಅತ್ಯಂತ ಶ್ರದ್ದಾಭಕ್ತಿಯ ಮೂಲಕ ಪ್ರವೇಶ ಮಾಡಿಕೊಂಡು, ಗ್ರಾಮೀಣ ಕಲೆಗಳಾದ ವೀರಗಾಸೆಯ ಶಿವಸ್ತುತಿಯಲ್ಲಿ, ಭಜನೆಯ ಭಕ್ತಿಯ ಪರಾಕಾಷ್ಠೆಯಲ್ಲಿ ,ಸುಮಂಗಲಿಯರ ಪೂರ್ಣ ಕುಂಭದ ಸ್ವಾಗತದಿ ಶ್ರೀ ಗಳವರನ್ನು ಸ್ವಾಗತಿಸಿದ ದೃಶ್ಯ ಶ್ರೀ ಗುರು ಭಕ್ತಿಯನ್ನು ಸಾಕ್ಷೀಕರಿಸಿತು. ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳವರು ಪೂಜ್ಯ ತರಳಬಾಳು ಶ್ರೀಗಳವರ ಜೊತೆ ಪಾದಯಾತ್ರೆಗೈಯುವುದರ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದು ಪೂಜ್ಯರ ಮೇಲಿನ ಭಕ್ತಿ ಗೌರವ ಇಮ್ಮಡಿಯಾಗಿಸತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯದ್ವಯರ ಶಿವ ಹರ ಸಾನ್ನಿಧ್ಯದಿ ಅರ್ಥಪೂರ್ಣ ವಿಷಯಗಳು ಮಂಡನೆಯಾದವು.ಮಾಜಿ ಶಾಸಕರಾದ ಬಿ.ಪಿ.ಹರೀಶ್ ಸೇರಿದಂತೆ ಎಲ್ಲಾ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾರಂಭ ಸ್ನೇಹ ಪ್ರೀತಿಯ ಸಹೋದರತೆಯ ಸಂದೇಶವನ್ನು ಸಾರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401