ಬಹಿರಂಗ
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
- ಆದಿತ್ಯ ಭಾರದ್ವಾಜ್
ಹುಟ್ಟಿನಿಂದ ನಾನು ಬ್ರಾಹ್ಮಣ. ನಾನು ಜಾತಿಯನ್ನು ನಿರಾಕರಿಸುವುದು ಸುಲಭ. ಆದರೆ ದಲಿತನಿಗೆ ಅದು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಜಾತಿಯನ್ನು ನಿರಾಕರಿಸದೆ ಅದರೊಂದಿಗೆ ಬರುವ previlege ಬಗ್ಗೆ ಸದಾಕಾಲ ಅರಿವು ಇಟ್ಟುಕೋಬೇಕು ಎಂಬುದು ನನ್ನ ನಿಲುವು.
ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನಿಸಲಾಗಿದೆ ಅಂತ ಬ್ರಾಹ್ಮಣ ಅಭಿವೃದ್ಧಿ ನಿಗಮ, ಹಿಂದುತ್ವದ ಮುಖವಾಡ ತೊರೆದ ಸಂವಾದ ಅಂತಹ ಸಂಘ ಪರಿವಾರದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಮುಗಿಬಿದ್ದು ನಿರ್ದೇಶಕರ ಕೈಲಿ ಕ್ಷಮೆ ಕೇಳಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕಲು ಧಮಕಿ ಹಾಕಿ ಒಪ್ಪಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ನಡೆ ಇದು. ಈ ನಿಗಮ ಸ್ಥಾಪನೆಯ ಬಗ್ಗೆ ಅಂದೇ ಬಹಿರಂಗವಾಗಿ ಖಂಡಿಸದಿರುವುದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮರಾಠರು, ಲಿಂಗಾಯತರಿಗೆ ನಿಗಮ ಸ್ಥಾಪಿಸಿದಾಗ ವಿರೋಧ ವ್ಯಕ್ತವಾಗಿದೆ. ಆದರೆ ಬ್ರಾಹ್ಮಣರಿಗೇ ನಿಗಮ ಸ್ಥಾಪಿಸಿದ ಮೇಲೆ ಯಾವ ಜಾತಿಗೆ ಬೇಕಾದರೂ ಸ್ಥಾಪಿಸಬಹುದಾಗಿದೆ. ಇದು ಸಾಮಾಜಿಕ ನ್ಯಾಯದ ಅಣಕ. ಎಲ್ಲ ಮೇಲ್ಜಾತಿಗಳ ನಿಗಮಗಳನ್ನು ರದ್ದು ಮಾಡಬೇಕಿದೆ.
ಇವತ್ತು ಇದೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಒಂದು ಶಕ್ತಿಕೇಂದ್ರವಾಗಿ ತಲೆ ಎತ್ತಿದೆ. ಬ್ರಾಹ್ಮಣ್ಯವನ್ನು ಯಾಕ್ರೀ ಲೇವಡಿ ಮಾಡ್ತೀರಿ ಅಂತ ಅದರ ಅಧ್ಯಕ್ಷರು ಕೇಳ್ತಾರೆ ಇವತ್ತು! ಬ್ರಾಹ್ಮಣರು ಮತ್ತು ಫ್ಯೂಡಲ್ ಮೇಲ್ಜಾತಿಗಳು ಜಾತಿ ನಿಂದನೆ ಅಂತ ಅರಚಾಡುವುದೇ ಅಪಹಾಸ್ಯ. ಈ ಜಾತಿಗಳು ನಡೆಸಿರುವ ಅಟ್ರಾಸಿಟಿಗಳ ಹಿನ್ನೆಲೆಯಲ್ಲಿ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಟೀಕಿಸಿದರೆ, ಬೈದರೆ ಅದನ್ನು ಕೇಳಿಸಿಕೊಳ್ಳುವ ಸಹನೆಯನ್ನು ಈ ಸಮುದಾಯಗಳು ಬೆಳೆಸಿಕೊಳ್ಳಬೇಕಿದೆ.
ಇದನ್ನೂ ಓದಿ | ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!
ದನಿ ಇದ್ದವನದೇ ನ್ಯಾಯ ಎಂಬಂತಾಗಿದೆ. ಬಲಹೀನ ವರ್ಗಗಳನ್ನು ಕಾಪಾಡಲು ಇರುವ ಕಾನೂನು, ಮೀಸಲಾತಿಯಂತಹ ಸವಲತ್ತುಗಳನ್ನು, ಈ ಕೋಮುಗಳು ಹೊಡೆದುಕೊಳ್ಳುತ್ತಿವೆ, ತಮ್ಮ ಹಕ್ಕು ಎಂಬಂತೆ ಆಗ್ರಹಿಸುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯ ತಾತ್ವಿಕ ತಳಹದಿಯನ್ನೇ ಬುಡಮೇಲು ಮಾಡಿ ಬ್ರಾಹ್ಮಣರು, ವೈಶ್ಯರು ಒಂದು ಬೆರಳು ಕೂಡಾ ಎತ್ತದೇ ಹೊಡೆದುಕೊಂಡರು. ಬ್ರಾಹ್ಮಣರು ಇವತ್ತು ತಾವೇ ವಿಕ್ಟಿಂಗಳು ಎಂಬಂತೆ ಇತರ ಬಲಹೀನ ವರ್ಗಗಳೊಂದಿಗೆ ತಮ್ಮನ್ನೂ ಕಾಣಬೇಕು ಎಂಬಂತೆ ಆಡುತ್ತಿದ್ದು ಅದಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಇವತ್ತು ಹಿಂದುತ್ವದ ಮುಖವಾಡ ಹೊತ್ತು ಅಧಿಕಾರ ಹಿಡಿದಿರುವುದು ಬ್ರಾಹ್ಮಣಿಕೆಯೇ ಆಗಿರುವುದರಿಂದ ಇದು ಆಶ್ಚರ್ಯವೇನೂ ಅಲ್ಲ.
ಇನ್ನು ಪೊಗರು ಸಿನಿಮಾದಲ್ಲಿ ಹೆಣ್ಣನ್ನು ಬಿಂಬಿಸಿರುವ ಕುರಿತು ಪ್ರತಿಭಟನೆಗಳಾಗಬೇಕಿತ್ತು. “ಖರಾಬು” ಹಾಡಿಗೆ ಯೂಟ್ಯೂಬ್ ಅಲ್ಲಿ ಸುಮಾರು 21 ಕೋಟಿ views ಇವೆ! ಬದಲಿಗೆ ಬ್ರಾಹ್ಮಣರು ಪ್ರತಿಭಟನೆ ಮಾಡುತ್ತಿರುವುದು, ಅದನ್ನು ದಕ್ಕಿಸಿಕೊಂಡಿರುವುದು ಇವತ್ತಿನ ಕಾಲಮಾಪದ ರೂಪಕ.
(ಕೃಪೆ : ಫೇಸ್‌ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243