ದಿನದ ಸುದ್ದಿ
ಸೂಳೆಕೆರೆ ಎಂಬ ಬೃಹತ್ ಸರೋವರದ ಇತಿಹಾಸ
ನೂರಾರು ವರ್ಷಗಳ ಹಿಂದೆ ಕಟ್ಟಿಸಿದ ಕೆರೆಗಳು ಇಂದಿಗೂ ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿವೆ. ಚೆನ್ನಗಿರಿ ತಾಲ್ಲೂಕಿನ ”ಸೂಳೆಕೆರೆ’ ಅಂತಹ ಕೆರೆಗಳಲ್ಲಿ ಒಂದು. ಇದು ಏಷ್ಯಾ ಖಂಡದ ‘ಅತಿ ದೊಡ್ಡ ಕೆರೆ ‘ಎಂಬ ಖ್ಯಾತಿ ಪಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಏಷ್ಯಾಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಯಲು ಸೀಮೆಯ ಬಟ್ಟ ಬಯಲುಗಳ ನಡುವೆ ಮೈತಳೆದಿರುವ ಸೂಳೆಕೆರೆ ಈ ಭಾಗದ ಹೆಮ್ಮೆಯ ನಿಸರ್ಗ ತಾಣವೂ ಆಗಿದ್ದು ನೂರಾರು ರೈತ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.
ಈ ಕೆರೆಯ ವಿಸ್ತೀರ್ಣ 4416 ಎಕರೆ 17 ಗುಂಟೆ. ಈ ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿಯನ್ನು ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿಗಳಾದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ.
ಐತಿಹಾಸಿಕ ಹಿನ್ನೆಲೆ: ಈ ಕೆರೆಯ ನಿರ್ಮಾಣದ ಹಿಂದೆ ಅಚ್ಚರಿಯ ಸಂಗತಿಗಳಿವೆ. ಕೆಲವು ಐತಿಹ್ಯದಂತಿವೆ. ಇವು ಇತಿಹಾಸಕ್ತರಿಗೆ ಹೆಚ್ಚಿನ ಸಂಶೋಧನೆಗೆ ಆಕರಗಳನ್ನು ಒದಗಿಸುತ್ತವೆ. ಈ ಕೆರೆ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂಬ ಐತಿಹ್ಯವಿದೆ. ವಿಕ್ರಮರಾಯನೆಂಬ ರಾಜ ಸ್ವರ್ಗವತಿಯನ್ನು ಆಳುತ್ತಿದ್ದ. ನೂತನಾ ದೇವಿ ಅವನ ಪತ್ನಿ. ಈ ದಂಪತಿಗೆ ಶಾಂತಲಾದೇವಿ (ಶಾಂತಮ್ಮ ) ಎಂಬ ಒಬ್ಬಳೇ ಮಗಳು. ಅವಳು ಯೌವ್ವನಾವಸ್ಥೆಗೆ ಬಂದಾಗ ಒಮ್ಮೆ ತಂದೆಯ ಅನುಮತಿ ಪಡೆಯದೆ ಕಾರ್ಯ ನಿಮಿತ್ತ ನೆರೆಯ ಊರಿಗೆ ಹೋಗಿ ಅರಮನೆಗೆ ಹಿಂತಿರುಗುತ್ತಾಳೆ. ಆಕೆಯ ನಡವಳಿಕೆಯನ್ನು ತಂದೆ ವಿಕ್ರಮರಾಯ ಆಕ್ಷೇಪಿಸಿ ನಿಂದಿಸುತ್ತಾನೆ. ನಡತೆಗೆಟ್ಟವಳು ಎಂದು ಆರೋಪಿಸುತ್ತಾನೆ.
ತಂದೆಯ ಬೈಗುಳದ ಮಾತುಗಳನ್ನು ಕೇಳಿ ನೊಂದ ಶಾಂತಲಾದೇವಿ ಆರೋಪದಿಂದ ಮುಕ್ತಳಾಗಲು ತಂದೆಯ ನಂತರ ಒಂದು ಕೆರೆಯನ್ನು ನಿರ್ಮಿಸಲು ಸಂಕಲ್ಪ ಮಾಡುತ್ತಾಳೆ. ಸ್ವರ್ಗಾವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವೆಂದು ನಿರ್ಧರಿಸುತ್ತಾಳೆ. ಆ ಜಾಗವನ್ನು ಬಿಟ್ಟುಕೊಡುವಂತೆ ವೇಶ್ಯೆಯರನ್ನು ಕೇಳುತ್ತಾಳೆ. ಕೆರೆಗೆ ‘ಸೂಳೆಕೆರೆ’ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ.ಆ ಬೇಡಿಕೆಗೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂದು ಇತಿಹಾಸ ಹೇಳುತ್ತದೆ.
ಕೆರೆ ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಈ ಕೆರೆಗೆ ಹರಿದು ಬರುತ್ತದೆ. ಹಳೇ ಮೈಸೂರು ರಾಜ್ಯದ ಬ್ರಿಟಿಷ್ ಇಂಜಿನಿಯರ್ ಸ್ಯಾಂಕಿ (ಕೆ) ಅವರು ‘ಈ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣವಾಗಿದೆ. ಅದು ಅಚ್ಚರಿಯ ಸಂಗತಿ’ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿವೆ. ಈ ಕೆರೆ ಸುಮಾರು 15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ (2000 ಎಕರೆ) ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನೂ ಪೂರೈಸುತ್ತಿದೆ.
ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇವಾಲಯವಿದೆ. ಕೆರೆಯ ಅಂಚಿನಲ್ಲಿ ಆಕರ್ಷಕ ಕಲ್ಲು ಮಂಟಪವಿದೆ. ಇಲ್ಲಿಂದ ಕೆರೆಯನ್ನು ನೋಡುವುದು ಸೊಗಸಾದ ಅನುಭವ.
ಕೆರೆಗೆ ಸಿದ್ದೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ ಹಾಗೂ ಕತ್ತರಿ ತೂಬು ಎಂಬ ಮೂರು ತೂಬುಗಳಿವೆ. ಗುಡ್ಡಗಳ ಪರಿಸರದಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳಿವೆ.
ಸುಮಾರು 27 ಅಡಿ ನೀರಿನ ಮಟ್ಟವಿರುವ ಕೆರೆಯಲ್ಲಿ 10 ಅಡಿಗಳಷ್ಟು ಹೂಳು ತುಂಬಿಕೊಂಡಿದೆ. ಈ ಕೆರೆಯು 1992ರಲ್ಲಿ ಕೋಡಿ ಬಿದ್ದಿತ್ತು. ಹದಿನೇಳು ವರ್ಷದ ನಂತರ ಈ ವರ್ಷ (2009) ಮತ್ತೊಮ್ಮೆ ಕೋಡಿ ಬಿತ್ತು. ಇದರಿಂದ ಅಪಾರ ಹಾನಿಯೂ ಆಯಿತು. ಹಿನ್ನೀರಿನಿಂದಾಚೆಯ 3500 ಎಕರೆ ಪ್ರದೇಶ ಜಲಾವೃತ್ತಗೊಂಡಿತ್ತು. ಕೆರೆಯಲ್ಲಿರುವ ಹೂಳನ್ನು ಕಾಲಕಾಲಕ್ಕೆ ಎತ್ತಿದ್ದರೆ ಹಾನಿ ತಪ್ಪಿಸಬಹುದಿತ್ತು.
ಕೆರೆಗಳ ಹೂಳನ್ನು ಕಾಲಕಾಲಕ್ಕೆ ತೆಗೆದು ಕೆರೆಯನ್ನು ಬಲಪಡಿಸುವ ಗ್ರಾಮಗಳಿಗೆ ಹಿಂದಿನ ಕಾಲದಲ್ಲಿ ತೆರಿಗೆ ವಿನಾಯಿತಿ ನೀಡುವ ಪದ್ಧತಿ ಇತ್ತು ಎಂಬುದು ಕೌಟಿಲ್ಯನ ‘ಅರ್ಥಶಾಸ್ತ್ರ’ದಲ್ಲಿ ಉಲ್ಲೇಖವಾಗಿದೆ. ಆದರೆ ಈಗ ಹೂಳು ತೆಗೆಯುವ ವ್ಯವಸ್ಥೆಯೇ ಇಲ್ಲ.
ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಕೆರೆಗಳಲ್ಲಿ ಒಂದು ಎನ್ನಲಾದ ಈ ಕೆರೆಗೆ ಶಾಂತಿಸಾಗರ ಎಂದೂ ಹೆಸರಿದೆ. ಕೆರೆ ನಿರ್ಮಾಣ ಮಾಡಿದ ಶಾಂತಲಾದೇವಿಯನ್ನು ಸ್ಮರಿಸುವುದೂ ಇದರ ಉದ್ದೇಶ. ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಅದು ಇಂದಿಗೂ ಸೂಳೆಕೆರೆ ಆಗಿ ಉಳಿದಿದೆ.
ಕೆರೆಯ ಹೆಸರು ಬದಲಾವಣೆಗೆ ಇತಿಹಾಸಕ್ತರು, ಚಿಂತಕರು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಮದ್ರ ನೋಡಿಲ್ಲದ ಮಕ್ಕಳ ಪಾಲಿಗೆ ಈ ಕೆರೆ ಸಮುದ್ರದಂತೆ ಕಾಣುತ್ತದೆ.
(ಸಂಗ್ರಹ)