ಅಂತರಂಗ
ಅನಾಥರನ್ನಾಗಿಸದ ಅಂತಿಮ ಸಂಗಾತಿ
- ಅಲ್ಮೆಡಾ ಗ್ಲಾಡ್ ಸನ್
ಒಂಬತ್ತು ವರ್ಷ ವಯಸ್ಸಿನ ಹುಡುಗನೊಬ್ಬನ ತಲೆಗೆ ಶಿಕ್ಷಣವೇ ಹತ್ತುತಿರಲಿಲ್ಲವಾಗಿ ಆತ ಮೂರನೇ ಕ್ಲಾಸಿನಿಂದ ಮೇಲೇರಿರಲಿಲ್ಲ! ಆದರೂ ಆತನ ಮಾನವೀಯ ಸೂಕ್ಷ್ಮ ಸಂವೇದನೆಯ ಉತ್ಕಟತೆ ಎಷ್ಟಿತೆಂದರೆ ದೇವಸ್ಥಾನ, ಮಸೀದಿ, ಚರ್ಚುಗಳ ಮುಂಭಾಗ ಭಿಕ್ಷುಕರ ಮಧ್ಯೆ ತಾನೂ ತಲೆಯ ಮೇಲೆ ಟವಲ್ ಹಾಕಿಕೊಂಡು ಕುಳಿತು ಭಿಕ್ಷೆ ಬೇಡಿ ಬಂದ ಹಣವನ್ನು ಅಲ್ಲಿದ್ದವರಿಗೆಲ್ಲಾ ಹಂಚುತ್ತಿದ್ದ.
ಇದನ್ನರಿತ ಆತನ ಸಂಬಂಧಿಕರು ಚರ್ಮ ಕಿತ್ತು ಬರುವ ಹಾಗೆ ಬಾರಿಸಿ ಕೆಡವುತ್ತಿದ್ದರೆ ಅಲ್ಲಿದ್ದ ಭಿಕ್ಷುಕರೇ ಆತನ ಪರವಾಗಿ ವಕಾಲತ್ತು ಹಾಕಿ ಬೇಡಿದ ಭಿಕ್ಷೆಯನ್ನೆಲ್ಲಾ ಭಿಕ್ಷುಕರಿಗೆ ಹಂಚುತ್ತಿದ್ದಾನೆ ಎಂದು ಶ್ಯೂರಿಟಿ ಕೊಟ್ಟ ಮೇಲೆಯೇ ಏನಾದರೂ ಆಗಿ ಹಾಳಾಗಿ ಹೋಗು ಎಂದು ಕೈ ಚೆಲ್ಲುತ್ತಿದ್ದರು.
ಹುಡುಗ ಮಾತ್ರ ತನ್ನ ಅಪ್ಪ ಪ್ರತಿದಿನ ನೀಡುತ್ತಿದ್ದ ಒಂದು ರೂಪಾಯಿಯಲ್ಲಿ ನೆಲ್ಲಿಕಾಯಿಗಳನ್ನು ಕೊಂಡು ಮಾರಿ, ಅದರಿಂದ ಬಂದ ಹಣದಲ್ಲಿ ಇಡ್ಲಿಯನ್ನೋ, ಚಿತ್ರಾನ್ನವನ್ನೋ ಕೊಂಡು ಜನರಿಗೆ ಹಂಚಿಬಿಡುತ್ತಿದ್ದ. ನೋಡುಗರಿಗೆ ಹುಡುಗನ ವರ್ತನೆಗಳು ವಿಲಕ್ಷಣ ಹಾಗೂ ಅತಿರೇಕವಾಗಿ ಕಾಣುತ್ತಿದ್ದರೂ ಆತನಿಗದು ಸಹಜವಾಗಿತ್ತು.
ಇವನನ್ನು ಹೀಗೆಯೆ ಬಿಟ್ಟರೆ ಕಳ್ಳನೋ, ಸುಳ್ಳನೋ ಆಗುತ್ತಾನೆಂದು ತೀರ್ಮಾನಿಸಿ, ದೆಹಲಿಯಲ್ಲಿ ಧರ್ಮಶಾಸ್ತ್ರ ಅಧ್ಯಯನ ನಡೆಸುತ್ತಿದ್ದ ಅಣ್ಣನ ಬಳಿಗೆ ಕಳುಹಿಸಿದ್ದರು. ಅಲ್ಲಿಯೂ ಇದೇ ವರ್ತನೆ! ಧರ್ಮಗುರುಗಳು ನಿಮ್ಮ ಮಗ ಯಾವ ಕಾರಣಕ್ಕೂ ಓದಲಾರ ಎಂಬ ಪ್ರಶಂಸಾ ಪತ್ರದೊಡನೆ ಆತನನ್ನು ವಾಪಸ್ ಕಳುಹಿಸಿದಾಗಲೂ ಪೋರ ತನ್ನ ಯೋಚನಾ ಕ್ರಮದಿಂದ ವಿಚಲಿತನಾಗಿರಲಿಲ್ಲ.
ಇಂದು ಆತ ನಲವತ್ತೆರೆಡರ ಯುವಕ. ವಿಶೇಷ ಅಂತಃಶಕ್ತಿ, ಧಾರ್ಮಿಕ ಬದ್ಧತೆ, ಇಚ್ಛಾಶಕ್ತಿ ಹಾಗೂ ತಾತ್ವಿಕತೆಯನ್ನು ತನ್ನ ಸರಳ ಬದುಕಿನೊಂದಿಗೆ ಮೇಳೈಸಿಕೊಂಡಿರುವ ಈತನ ನಾಜುಕಿಲ್ಲದ ಮಾತುಗಳು ಒಬ್ಬ ಪ್ರಬುದ್ಧ ಮೌಲ್ವಿಯದ್ದೋ, ಸೂಫಿಸಂತನದ್ದೋ ಎಂದೆನ್ನಿಸದಿರಲಾರದು. ಯಾರಿಗೂ ಬೇಡವಾದ ಸುಮಾರು ಹದಿಮೂರು ಸಾವಿರ ಅನಾಥ ಶವಗಳಿಗೆ ಗೌರವಪೂರ್ಣ ಶ್ರದ್ಧಾಂಜಲಿಯೊಡನೆ ವಿದಾಯ ನೀಡಿದ ಶ್ರೇಷ್ಠ ಕಾಯಕ ರತ್ನ ನಮ್ಮ ಅಯೂಬ್ ಅಹಮದ್.
ಮೈಸೂರು ನಗರ ಇವರನ್ನು ‘ಬಾಡಿಮಿಯಾ ಎಂದೂ ಪ್ರೀತಿಯಿಂದ ಕರೆಯುತ್ತಿದೆ. ಜನಸ್ನೇಹಿ ಅಯೂಬ್ ಬಾಡಿಮಿಯಾ ಎಂದೆನ್ನಿಸಿಕೊಂಡಿದ್ದೇ ರೋಚಕವಾದುದ್ದು. ಯಾವುದೋ ವೈರಾಗ್ಯಕ್ಕೋ, ಭಾವೋದ್ರೇಕಕ್ಕೋ, ಗುರುತಿಸಿಕೊಳ್ಳುವ ಪ್ರವೃತ್ತಿಗೋ ಸಿಲುಕಿ ಅಯೂಬ್ ಈ ಕಾರ್ಯಕ್ಕೊಡ್ಡಿಕೊಂಡವರಲ್ಲ.
ಬದಲಾಗಿ ಎಳವೆಯಲ್ಲೇ ತನ್ನ ಅಪ್ಪ ಪಠಿಸುತ್ತಿದ್ದ ಖುರಾನನಿನ ನುಡಿಮುತ್ತುಗಳನ್ನೆ ಎದೆಯೊಳಗಿಳಿಸಿಕೊಂಡು ಇನ್ಸಾನಿಯಾತ್ ಜಿಂದಾಬಾದ್ ಎಂದು ಹೃದಯದೊಳಗೆ ಬರೆದುಕೊಂಡು ಸಂತೃಪ್ತನಾದ ಯುವಕನೀತ . “ನಮ್ದುಕೆ ಅಪ್ಪಾಜಿನೆ ನಮ್ಗೆ ಗುರುಗಳಿದಂಗೆ. ಚಿಕ್ಕದ್ರಿಂದ ಖುರಾನ್ ಓದಿ ನಮ್ಗೆ ಅರ್ಥ ಹೇಳ್ಕೊಡೊರು. ಖುರಾನ್ ಒಂದ್ಕಡೆ ಹೇಳ್ತೈತೆ, ಮಂದಿ ಬದ್ಕಿದ್ರೂ, ಸತ್ರೂ ಅವರ್ನ ಗೌರವದಿಂದ ನೋಡು ಅಂತ.
ಹಸ್ದವರ್ಗೆ ಊಟ, ಚಳಿಯಲ್ಲಿದ್ದೋರ್ಗೆ ಬಟ್ಟೆ ಕೊಟ್ಟು, ಸತ್ತೋದೊರ್ಗೇ ಗೌರವದಿಂದ ಕಳ್ಸಿಕೊಡು ಅಂತನೇ ಎಲ್ಲಾ ದೇವ್ರು ಹೇಳ್ತಿರೋದು. ನಾವೆಲ್ಲಾ ಭೂಮೀಲಿ ಬಾಡಿಗೆ ಮನೆಯಾಗೆ ಇದೀವಿ. ಯಾರ್ದು ಪರ್ಮನೆಂಟ್ ಇಲ್ಲ. ಹೋಗೊದ್ರೊಳ್ಗೆ ಅಲ್ಲಾ ಮಾಲೀಕ್ದು ಬಾಡಿಗೆ ಕಟ್ಟ್ಬೇಕು. ನಾನು ಅದನ್ನೇ ಮಾಡ್ತಾ ಇದೀನಿ ಅಷ್ಟೇ “ಎಂದು ಹೇಳುವ ಅಯೂಬ್ ಜಿ ‘ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷಗಳಾಗಿವೆ.
“ನಮ್ದು ಚಿಕ್ಕ್ದ್ರಲ್ಲಿ ಯೆಲ್ಡ್ಮೂರು ಸೈಂಕಲ್ ಇಟ್ಟಿದ್ವಿ. ದೊಡ್ಡವನಾದಾಗ ಒಂದು ಸೆಕೆಂಡ್ ಹ್ಯಾಂಡ್ಲು ಕಾರು ಮಡಗ್ಬೇಕು ಅನ್ಸಿತ್ತು” ಎಂದು ತನ್ನ 18ರ ಹರೆಯವನ್ನು ನೆನಪಿಸಿಕೊಂಡ ಅಯೂಬ್ ಕಾರೊಂದನ್ನು ಖರೀದಿ ಮಾಡಲು ಬಸ್ನಲ್ಲಿ ಹೋಗ್ತಿದ್ದಾಗ ಬಂಡಿಪಾಳ್ಯದ ಬಳಿ ಶವವೊಂದು ಬಿದ್ದಿತ್ತಂತೆ. ಸಂಜೆ ತನ್ನ ಕಾರಿನೊಂದಿಗೆ ಮರಳುತ್ತಿದ್ದಾಗಲೂ ಶವ ಅಲ್ಲೇ ಬಿದ್ದಿತ್ತು. “ಖುರಾನ್ ಪ್ರಕಾರ ಯಾವುದೇ ಶವಾ ಬಿದ್ದಿಲ್ರಿ, ನಾವು ಅದ್ರ ಮಕ ನೋಡ್ದೆ, ಶವದ್ ಮೆರವಣಿಗೆಯಲ್ಲಿ ನಾಲ್ಕೆಜ್ಜೆ ಹಾಕ್ದೆ ಮುಂದುಕ್ಕೋಗ್ಬಾರ್ದು.
ನಾನು ಮಕ ನೋಡಿ ಅಲ್ಲಿದ್ದವರ್ಗೆ ‘ಕ್ಯಾ ಸಾಬ್ ಅಭಿ ಐಸಾ ಹೀ ಹೈನಾ? ಅಂತ ಕೇಳ್ದೆ. ‘ಕ್ಯಾ ಕರ್ನಾ ಕೋಹಿ ನಹೀ ಹೈನಾ?’ ಅಂದಾಗ ಛೋಡೊ ಭಾಯ್ ಮೈ ಹೂನಾ? ಅಂತ ಹೇಳ್ಬುಟ್ಟಿದ್ದೇ ಹೆಣ ಎತ್ತ್ಕೊಂದಿ ಕೆ.ಆರ್.ಆಸ್ಪತ್ರೆಗೆ ತಂದಿದ್ದೆ. ಎಲ್ಲರೂ ಹೊಸ ಕಾರ್ ನ ಚಾಮುಂಡಿಗೋ, ದರ್ಗಕ್ಕೋ ತಗೊಂದಿ ಹೋಗ್ತಾರೆ. ಇಲ್ಲ ಅಪ್ಪ-ಅಮ್ಮಂಗೆ ಕುಂದ್ರಿಸ್ಕೊಂದಿ ರೌಂಡ್ ಹೋಗ್ತಾರೆ, ನಾನ್ ಮಾಡಿದ್ದು ನೋಡಿ ನಮ್ಮವ್ರು ನಮ್ಗೆ ದನಕ್ಕೆ ಬಡ್ದಂಗೆ ಬಡ್ದುಬಿಟ್ರು.
ನಂಗೇನಾದ್ರೂ ದಯ್ಯ-ಪಯ್ಯ ಏನಾದ್ರೂ ಹಿಡ್ಕೊಂಡು ಬಿಟ್ರೆ ಅಂತ ಅವರ್ಗೆ ಬಯ್ಯ. ನಾನು,’ ನಾನೇನ್ ತಪ್ಪು ಕೆಲಸ ಮಾಡ್ದೆ? ‘ ಅಂತ ತಲೆ ಕೆರ್ಕಂಡಿ ಮೈಸೂರು ಬೇಡ್ನಕ್ಕೇ ಬೇಡ ಅಂತ ಬೆಂಗಳೂರ್ಗೆ ಹೊಂಟ್ಬಿಟ್ಟೆ. ಒಂದ್ಸಲ ಲಾಲ್ಬಾಗ್ನಲ್ಲಿ ಜನ ಗುಂಪು ಸೇರಿದ್ರು. ನಾನು ಫಿಲಿಂ ಶೂಟಿಂಗ್ ಇರ್ಬೋದು, ಹೀರೊಗೆ ಒಂದ್ಸಲ ಕೈ ಮಿಲಾಯ್ಸ್ಬೋದು ಅಂತ ನುಗ್ಗಿ ಹೋದ್ರೆ ಮತ್ತೆ ಹೆಣ ಬಿದ್ದಿತ್ತು. ನಾನ್ ಹೆದ್ರಿ ‘ಯಾ ಅಲ್ಲಾ ಏನಿದೆಲ್ಲಾ’ ನನ್ ಗಿರಾಚಾರ ನೆಟ್ಗಿಲ್ಲ ಅಂತ ಹೇಳ್ತಿದ್ರುವೇ ಬಾಡಿನ ಬಿಟ್ಟೋಗೋಕೆ ಮನ್ಸಾಗ್ನಿಲ್ಲ.
ಮತ್ತೆ ಹೆಣ ಹೊತ್ತ್ಕೊಂದಿ ಹೊಂಟಾಗ ಅಲ್ಲಿದ್ದ ಮುದುಕ್ರು ನನ್ ಕೈ ಮುಗ್ದು ಮಗಾ ನೀನು ಮಾಡಿದ್ದು ಅಂತಿಂಥಾ ಸಣ್ಣ್ ಕೆಲ್ಸ ಅಲ್ಲಾ, ನಿನ್ಗೆ ಒಳ್ಳೆದಾಗ್ತುದೆ ಅಂತ ಆಶೀವಾರ್ದ ಮಾಡಿದ್ರು ಎಂದು ನೆನಪಿಸಿಕೊಂಡ ಅಯೂಬ್. ತನ್ನ ಬದುಕಿಗಾಗಿ ಬಾಡಿಗೆ ಆಟೋ, ಟ್ಯಾಕ್ಸಿ ಚಾಲನೆ ಮಾಡುತ್ತಾ, ಲಾರಿಗಳಿಗೆ ಹಣ್ಣು-ತರಕಾರಿಗಳನ್ನು ತುಂಬುತ್ತಾ ತನ್ನ ಒಡನಾಡಿಗಳ ಸಂಕಷ್ಟಗಳಿಗೆ ಪ್ರತೀ ಕ್ಷಣ ಮಿಡಿಯುತ್ತಾ ಸಾಗುತ್ತಿದ್ದಾರೆ.
ಮೊದಮೊದಲು ಈ ವಿಶಿಷ್ಟ ಕಾಯಕ ಅಯೂಬ್ ರವರನ್ನು ಅಗ್ನಿಪರೀಕ್ಷೆಗೊಳಿಸಿದ್ದಿದೆ. ಸ್ನೇಹಿತರು, ಸಂಬಂಧಿಕರು ದೂರವಾಗಿ ತಿರಸ್ಕಾರ, ಅನಾಥ ಪ್ರಜ್ಞೆಗಳು ಇನ್ನಿಲ್ಲದಂತೆ ಕಾಡಿದಾಗ ಯಾ ಅಲ್ಲಾ ಏನಿದು ಈ ಥರಾ ಎಕ್ಸಾಮು ತಗೊಂದಿದಿ? ಎಂದು ಅತ್ತದುಂಟು. ಸಣ್ಣ ವಾಹನದಲ್ಲಿ ಹೆಣವನ್ನು ತುಂಬಿ ಒಬ್ಬಂಟಿಯಾಗ ಬರುವಾಗ ಭಯವೆಂಬುದು ದೆವ್ವಗಳಾಗಿ ಕಾಡಿದುಂಟು.
ಆದರೆ ತನ್ನನರಿತ ಹೆತ್ತಪ್ಪ ನೀಡಿದ ನೈತಿಕ ಹಾಗೂ ಧಾರ್ಮಿಕ ಶಕ್ತಿ ಅಯೂಬ್ರನ್ನು ‘ಮೆಸ್ಸಾಯಾ’ನನ್ನಾಗಿಸಿದೆ. ಅನಾಥ ಹೆಣಗಳ ಒಡನಾಡಿಯೆಂದೇ ಗುರುತಿಸಲ್ಪಟ್ಟ ಬಾಡಿಮಿಯಾ ಅಯೂಬ್ ಮಾಡದಿರುವ ಸೇವಾ ಕಾರ್ಯಗಳಿಲ್ಲ. ಮೊದಲೆಲ್ಲಾ ಅರಮನೆ ಮುಂಭಾಗ ಅನ್ನ ಇಲ್ದೆ ಕುಳಿತಿರುವವರಿಗೆ ಅನ್ನ ಕೊಡುತ್ತಿದ್ದರಂತೆ. ಕೆಲವರು ಬಂದು ಇಲ್ಲೇ ಊಟ ಕೊಡಬೇಡಿ ಅರಮನೆಗೆ ಅವಮಾನ ಆಗುತ್ತೆ ಅಂತ ಹೇಳಿದ್ರಂತೆ. ಅದಕ್ಕೆ ನಮ್ಮ ಅಯುಬ್ “ಹರೇ ಬಾಯ್ ನಮ್ದುಕ್ಕೆ ಏನಾದ್ರೂ ಇಲ್ಲಿದು ರಾಜಕುಮಾರ್ ಆಗಿದ್ದಿದ್ರೆ ಇವರನ್ನೆಲ್ಲ ಒಳಗೆ ಕರ್ಕೊಂಡು ಹೋಗಿ ಕುಂದ್ರಿಸಿ ಊಟ ಕೊಡ್ತ್ತಿದ್ದೆ” ಅಂತ ಹೇಳಿ ನಕ್ಕಿದ್ದ ರಂತೆ!
ಫೆಬ್ರವರಿ 22ನೇ ತಾರೀಕು ಅಹಮದ್ ರವರ ಹುಟ್ಟುಹಬ್ಬ. ಆ ದಿನ ಆಯುಬ್ ಜನರಿಗೆ ಒಂದು ಸಂದೇಶವನ್ನು ನೀಡಲಿಕ್ಕೆ ಇಷ್ಟಪಟ್ಟಿದ್ದಾರೆ. “ಅಲ್ಲಾ ಭಾಯ್! ಏನ್ ಘನಂದಾರಿ ಕಾಮ್ ಜೀವನದಲ್ಲಿ ಮಾಡಿಬಿಟ್ಟಿದ್ದೀರಿ ಅಂತ ಹುಟ್ದಬ್ಬ ಸೆಲೆಬ್ರೇಟ್ ಮಾಡ್ತೀರಿ? ಹಾಗೆ ನೋಡಿದರೆ ಒಂದು ವರ್ಷ ವೇಸ್ಟೇಜ್ ಆಗಿ ಇನ್ನೊಂದ್ ವರ್ಷ ವೇಸ್ಟೇಜ್ ಆಗ್ತಾಯಿದೆ.
ಇದಕ್ಕೆ ಹೋಗಿ ಕೇಕ್ ಪಾಕ್ ವೇಸ್ಟೇಜ್ ಎಲ್ಲ ಜನ್ರಿಗೆ ತಿನ್ಸೋ ಬದ್ಲು ಒಬ್ಬ ರೋಗಿದ್ದು ಬಿಲ್ ಕಟ್ಟಿ? ಒಂದು ಬಡ ಮಗಂದು ಸ್ಕೂಲ್ ಫೀಸು ಚುಕ್ತಾ ಮಾಡಿ? ಮೇಲ್ಗಡೆಯವಂದು ಅಕೌಂಟ್ ನಲ್ಲಿ ಒಂದಿಷ್ಟು ಜಮಾ ಮಾಡಿಕೊಂಡು ಬನ್ನಿ? ನಿಮಗೂ ಒಳ್ಳೆಯದಾಗುತ್ತದೆ ಜನರಿಗೂ ಒಳ್ಳೆಯದಾಗುತ್ತದೆ.” ಅಂತ! ಹೇಗಿದೆ ಸಂದೇಶ?
ಈಗ ಸ್ಲಂ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿನ ಹಸಿದ ಹೊಟ್ಟೆಗಳನ್ನು ಸಮಾಧಾನಿಸುತ್ತ, ಪಡಿತರಗಳನ್ನು ವಿತರಿಸುತ್ತಿರುವ ಆಯುಬ್ ‘ಇಂಡಿಯಾ ಯುಟಿಲಿಟಿ ಬ್ಯಾಂಕ್’ ಎಂಬುದನ್ನು ಸ್ಥಾಪಿಸಿ ಜನರಿಂದ ಉಪಯೋಗಿಸಲ್ಪಟ್ಟ ಆದರೆ ಚೆನ್ನಾಗಿರುವ ಪದಾರ್ಥಗಳನ್ನು ಸಂಗ್ರಹಿಸಿ ಇಲ್ಲದವರಿಗೆ ಹಂಚುವ ಪ್ರವೃತ್ತಿಯಲ್ಲಿದ್ದಾರೆ. ಅನೇಕ ಬಡ ಹೆಣ್ಣುಮಕ್ಕಳ ಮಾಂಗಲ್ಯಭಾಗ್ಯಕ್ಕೂ ಕಾರಣೀಭೂತರಾಗಿದ್ದಾರೆ.
ತನ್ನ ಮಗಳ ಹೆಸರಿನಲ್ಲಿ ಉಚಿತ ಟೈಲರಿಂಗ್ ತರಬೇತಿಯನ್ನು ನೀಡುತ್ತಿದ್ದಾರೆ. ನೂರಾರು ಕೊರೊನಾ ಹೆಣಗಳನ್ನು ಧೃತಿಗೆಡದೇ ಸಾಗಿಸಿ ‘ವಾರಿಯರ್’ ಎಂದೆನ್ನಿಸಿಕೊಂಡಿದ್ದಾರೆ. ಹಾರ್ಮೋನಿ ಯೂನಿವರ್ಸಿಟಿ ಆಫ್ ಅಮೆರಿಕ ನೀಡಿದ ಗೌರವ ಡಾಕ್ಟರೇಟ್, ಮೈಸೂರು ದಸರಾದಲ್ಲಿ ನ ನಾಗರಿಕ ಸನ್ಮಾನ,ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ತನ್ನನರಸಿ ಬಂದರೂ ಹೊನ್ನಶೂಲಕ್ಕೇರದೇ ಮಂದಹಾಸದೊಡನೆ ಪ್ರಶಸ್ತಿಗಳು ಬೇಡ, ದೇವರ ಕೆಲಸಕ್ಕೆ ಕೈ ಜೋಡಿಸಿ ಎನ್ನುವ ಬಾಡಿಮಿಯಾನ ಸುಳ್ಳು, ತಟವಟಗಳಿಲ್ಲದ, ಅನುಕರಣೆಗೂ ಅಸಾಧ್ಯವಾದ ಅಪ್ಪಟ ಅಪರಂಜಿಯ ಬದುಕು ನಮ್ಮೊಡನಿರುವವರನ್ನು ಪ್ರೀತಿಸುವ, ನಮ್ಮನಗಲಿದವರನ್ನೂ ಗೌರವಿಸುವ ಮೌಲ್ಯವೊಂದನ್ನು ಬಿತ್ತುತ್ತಾ ಎಲ್ಲಾ ಧರ್ಮಗಳ ಧರ್ಮಗುರುಗಳನ್ನೂ ವಿಸ್ಮಿತರನ್ನಾಗಿಸಿದೆ.
ಹ್ಯಾಪಿ ಬರ್ತಡೇ ಭಾಯಿ! ನಿಮ್ಮಂತಹ ಹೃದಯವಂತರ ಸಂತತಿ ಇನ್ನೂ ಹೆಚ್ಚಲಿ!!
(21 ಫೆಬ್ರವರಿ ಯ ಫೇಸ್ ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243