ದಿನದ ಸುದ್ದಿ

ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ

Published

on

ಸುದ್ದಿದಿನಡೆಸ್ಕ್:ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ ಭಟ್ಕಳ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕಳೆದ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕಾರವಾರದ ಮುಖ್ಯ ರಸ್ತೆಗಳಲ್ಲಿ ನೀರು ನಿಂತು ಜನ, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಜಿಲ್ಲಾಸ್ಪತ್ರೆಯ ನೆಲ ಮಹಡಿಯೂ ಜಲಾವೃತಗೊಂಡಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ನಗರದ ಬಸ್ ಡಿಪೋದಲ್ಲೂ ಭಾರೀ ಪ್ರಮಾಣದಲ್ಲಿ ನೀರು ನಿಂತು ಸಿಬ್ಬಂದಿ ಪರದಾಡುವಂತಾಗಿದೆ. ಡೋಭಿಘಾಟ ಬಳಿ ಕಳೆದ ರಾತ್ರಿ ಗುಡ್ಡ ಕುಸಿತ ಸಂಭವಿಸಿದೆ.

ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿಯಿಂದ ಸುರಿದ ಬಾರಿ ಮಳೆಯಿಂದಾಗಿ ಇಡೀ ಹುಬ್ಬಳ್ಳಿ ಕೆರೆಯಂತಾಗಿದೆ. ರಸ್ತೆಗಳೆಲ್ಲಾ ಮುಳುಗಿ ನದಿಯಂತೆ ನೀರು ಹರಿಯುತ್ತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಆಟೋ, ಬೈಕ್‌ಗಳು ನೀರಲ್ಲಿ ಮುಳುಗಿ ಹೋಗಿವೆ.

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಗ್ರಾಮೀಣ ಭಾಗದಲ್ಲೂ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ರಜೆ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಬಾಧಿತ ಗೊಂಡಿದೆ. ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಮಧ್ಯೆ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯಲ್ಲಿ ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ನಾಲ್ಕು ಹಸುಗಳು ಸಾವನ್ನಪ್ಪಿವೆ. ಹಲವೆಡೆ ಸುರಿದ ಮಳೆಯಿಂದಾಗಿ ತರಕಾರಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ರೋಣ ತಾಲೂಕಿನಲ್ಲಿ ಇಂದು ಬೆಳಗಿನ ಜಾವದವರೆಗೆ ಮಳೆಯಾಗಿದೆ. ಬೆಣ್ಣೆಹಳ್ಳದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಾವಗಲ್ ಗ್ರಾಮದ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ, ಶೇಂಗಾ, ಹೆಸರು ಮತ್ತು ಮೆಣಸಿನಕಾಯಿ ಬೆಳೆಗಳು ಜಲಾವೃತಗೊಂಡಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version