ದಿನದ ಸುದ್ದಿ
ರಾಜ್ಯದೆಲ್ಲಡೆ ಸಂಭ್ರಮದಿಂದ ರಾಮನವಮಿ ಆಚರಣೆ
ಸುದ್ದಿದಿನ ಡೆಸ್ಕ್ : ರಾಜ್ಯದೆಲ್ಲಡೆ ಇಂದು ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕೋರೊನಾ ಕಾರಣದಿಂದಾಗಿ ರಾಮೋತ್ಸವಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಭಾರಿ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಮನವಮಿ ಉತ್ಸವಕ್ಕೆ ಸಂಭ್ರಮ, ಸಡಗರ ಎದ್ದು ಕಾಣುತ್ತಿದೆ.
ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ಭಕ್ತರು ಪೂಜೆ ಸಲ್ಲಿಸಿದರು.ವಿವಿಧ ಸಂಘ ಸಂಸ್ಥೆಗಳು ಸಹ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು ಪದ್ಮಾನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ರಾಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆ ಬಸವೇಶ್ವರ ಮಠದಲ್ಲಿ ನಿರ್ಮಾಣವಾಗಿರುವ ಅತಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ವಿವಿಧ ಧಾರ್ಮಿಕ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಅವರು ಅತಿ ಎತ್ತರದ ವಿಗ್ರಹವನ್ನು ರಾಜ್ಯದ ಶಿಲ್ಪಿಗಳು ನಿರ್ಮಾಣ ಮಾಡಿದ್ದಾರೆ.ಅವರ ಕೊಡುಗೆ ಅನನ್ಯ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ರಾಮನವಮಿಯ ಅಂಗವಾಗಿ ಈ ಕಾರ್ಯಕ್ರಮಕ್ಕೆ ತಾವು ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಜನಪ್ರಿಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ದೇವನಹಳ್ಳಿ, ಹಾಗೂ ನೆಲಮಂಗಲ ತಾಲೂಕುಗಳಲ್ಲಿ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮೊಳಕೆ ಪೈರಿಗೆ ಪೂಜೆ ಹಾಗೂ ಆಶ್ವತ್ಥ ಕಟ್ಟೆಗೆ ವಿಶೇಷ ಪೂಜೆ ನೆರವೇರಿಸಲಾಯಿತು ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿಯೂ ರಾಮನವಮಿಯನ್ನು ಸಡಗರದಿಂದ ಆಚರಿಸಿರುವ ಬಗ್ಗೆ ವರದಿಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿಯೂ ರಾಮನವಮಿಯನ್ನು ಶ್ರದ್ಧಾಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243