ದಿನದ ಸುದ್ದಿ
ತೋತಾಪುರಿಗಾಗಿ ಒಂದಾದ ನೀರ್ದೋಸೆ ಜೋಡಿ
ಸುದ್ದಿದಿನ ಡೆಸ್ಕ್: ನೀರ್ದೋಸೆ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಅಭಿರುಚಿಗೆ ನಾಂದಿ ಹಾಡಿದ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಅವರ ಜೋಡಿ ಮತ್ತೆ ಒಂದಾಗುತ್ತಿದೆ.
ತೋತಾಪುರಿ ಚಿತ್ರಕ್ಕಾಗಿ ಕೈ ಜೋಡಿಸುತ್ತಿರುವ ಈ ಜೋಡಿ ಗಾಂಧಿನಗರದ ಕುತೂಹಲ ಕೆರಳಿಸಿದೆ. ಶ್ರೀರಂಗಪಟ್ಟಣದಲ್ಲಿ ಸೋಮವಾರ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದೆ. ಟ್ವಿಟರ್‍ನಲ್ಲಿ ಜಗ್ಗೇಶ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕೆಂಪು ಟವಲ್, ಸ್ವೆಟರ್ ಹಣೆಗೆ ಕುಂಕುಮದ ಬೊಟ್ಟು ಇಟ್ಟಿರುವ ಚಿತ್ರವನ್ನು ಜಗ್ಗೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕನ್ನಡಿಗರಿಗೆ ನಗೆಯ ರಸದೌತಣ ನೀಡಿದ ನೀರ್ದೋಸೆಯ ನಮ್ಮಿಬ್ಬರ ಜೋಡಿ ಮತ್ತೆ ಒಂದಾಗುತ್ತಿದೆ. ತೋತಾಪುರಿ ಚಿತ್ರದ ಶೀರ್ಷಿಕೆ ಬಹಳ ಅದ್ಬುತ ಕಥೆ.. ನೀರ್ದೋಸೆಗಿಂತ ಎರಡು ಹೆಜ್ಜೆ ಮುಂದೆ ಎಂದು ಧೈರ್ಯವಾಗಿ ಹೇಳಬಲ್ಲೆ. ನಾಳೆಯಿಂದ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ಆರಂಭ.. ಶುಭ ಹಾರೈಸಿ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತೋತಾಪುರಿ ಚಿತ್ರಕ್ಕೆ ತೊಟ್ ಕೀಳ್ಬೇಕಷ್ಟೆ ಎಂಬ ಹಾಸ್ಯಾಸ್ಪದ ಟ್ಯಾಗ್‍ಲೈನ್ ನೀಡಲಾಗಿದೆ. ಚಿತ್ರದ ಕತೆ ಏನು? ಜಗ್ಗೇಶ್ ಅವರ ಪಾತ್ರವೇನು ಎಂಬುದು ಇನ್ನು ಬಹಿರಂಗಗೊಂಡಿಲ್ಲ.
ಲೇಡೀಸ್ ಟೈಲರ್ ಎಂಬ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಿದ್ದು, ವಿಜಯ ಪ್ರಸಾದ್ ಅವರೇ ಇದನ್ನು ನಿರ್ದೇಶಿಸುತ್ತಿದ್ದಾರೆ ಎಂದು ಈ ಹಿಂದೆ ಗಾಳಿ ಸುದ್ದಿ ಹಬ್ಬಿತ್ತ. ಇದು ಸುಳ್ಳು ಎಂದು ಜಗ್ಗೇಶ್ ಅವರೇ ಸ್ಪಷ್ಟಪಡಿಸಿದ್ದರು.