ದಿನದ ಸುದ್ದಿ
ಕೊಡಗು ಸಂತ್ರಸ್ತರ ನಿರ್ಲಕ್ಷ್ಯ: ಜಗ್ಗಿ ಸ್ವಾಮೀಜಿ ಜಗ್ಗಿದ ಟ್ವಿಟ್ಟಿಗರು
ಸುದ್ದಿದಿನ ಡೆಸ್ಕ್: ರಾಲಿ ಫಾರ್ ರಿವರ್ ಎಂಬ ಅಭಿಯಾನದ ಮೂಲಕ ಕಾವೇರಿ ನದಿ ತೀರದ ಪ್ರದೇಶಗಳ ಜನರ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದ ಇಶಾ ಫೌಂಡೇಶನ್‍ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಗುರು ಅವರು ನೇಪಾಳದ ತುದಿಯಲ್ಲಿರುವ ಹಿಮವದ್ಪರ್ವತಕ್ಕೆ ತಮ್ಮ ಶಿಷ್ಯಪಡೆಯೊಂದಿಗೆ ಪ್ರವಾಸ ಕೈಗೊಂಡಿರುವ ಫೋಟೊವೊಂದನ್ನು ಟ್ವಿಟರ್‍ನಲ್ಲಿ ಅಪ್‍ಲೋಡ್ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಟ್ವಿಟ್ಟಿಗರು ಕಾವೇರಿ ನದಿ ತೀರದ ಜನರ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದ ಸದ್ಗುರು, ಕೊಡಗು ನೆರೆ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚುವ ಬದಲು ವಿದೇಶ ಪ್ರವಾಸ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರ್ಯಾಲಿ ಫಾರ್ ರಿವರ್, ಮಿಸ್ಟ್ ಕಾಲ್ ಅಭಿಯಾನದಂತ ಮಹತ್ವದ ಕಾರ್ಯ ಕೈಗೊಳ್ಳುವುದಾಗಿ ಪ್ರಚಾರ ಪಡೆದಿದ್ದ ಸದ್ಗುರು ಅವರು ಅದೇ ಪ್ರದೇಶದ ಜನರ ನೋವಿಗೆ ಯಾಕೆ ಸ್ಪಂದಿಸುತ್ತಿಲ್ಲ. ಅದರಲ್ಲೂ ಕಾವೇರಿ ಹಿನ್ನೀರಿನ ಮೀನಾಕ್ಷಿ ಪುರದಲ್ಲಿ ಹುಟ್ಟಿ, ಕಾವೇರಿ ನೀರನ್ನು ಕುಡಿದು ಈ ಮಟ್ಟಕ್ಕೆ ಬೆಳೆದಿರುವ ಸದ್ಗುರು ಅವರಿಗೆ ಈಗ ಕೊಡಗು ಸಂತ್ರಸ್ತರ ಬಗ್ಗೆ ಕಾಳಜಿ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಕೊಡವರ ನೋವಿಗಿಂತ ಈ ಪ್ರವಾಸವೇ ಹೆಚ್ಚಾಯಿತೇ? ಜ್ಞಾನಿಗಳು ಹಾಗೂ ಒಳ್ಳೆ ವಾಗ್ಮಿಯೂ ಆಗಿರುವ ನೀವು ಖುದ್ದಾಗಿ ಬಂದು ನೊಂದವರಿಗೆ ಸಾಂತ್ವನ ಹೇಳಬಹುದಿತ್ತು. ಅವರಲ್ಲಿ ಧೈರ್ಯ ತುಂಬಬಹುದಿತ್ತು ಎಂದು ಇನ್ನಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀವು ಕೈಗೊಂಡಿದ್ದ ರ್ಯಾಲಿ ಫಾರ್ ರಿವರ್ ಅಭಿಯಾನ ಪೊಳ್ಳಾ? ಅಥವಾ ಪ್ರಚಾರದ ಗಿಮಿಕ್ಕಾ?
ಸ್ವಾಮೀಜಿಗಳಿಗೂ ರಾಜಕಾರಣಿಗಳಿಗೂ ಏನೂ ವ್ಯತ್ಯಾಸ ಇಲ್ಲ ಎಂಬುದನ್ನು ನೀವು ನಿಜ ಮಾಡಿದಿರಿ ಎಂದು ಟ್ವಿಟ್ಟಿಗರು ಅಕ್ಷರ ಬಾಣ ಬಿಟ್ಟಿದ್ದಾರೆ.
.ಇದಕ್ಕೆ ಇಶಾ ಫೌಂಡೇಶನ್‍ನವರು ಪ್ರತಿಕ್ರಿಯಿಸಿದ್ದು, ಈಗಾಗಲೇ ಇಶಾ ಫೌಂಡೇಶನ್ ಕಾರ್ಯಕರ್ತರು ಕೊಡಗಿನಲ್ಲಿ ಕಾರ್ಯನಿರತರಾಗಿದ್ದಾರೆ. ನೀವೂ ಕೈ ಜೋಡಿಸಿ. ಸದ್ಗುರುಗಳ ಪ್ರವಾಸ ಮೊದಲೇ ಬುಕ್ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇನ್ನೂ ಹಲವರು ಸ್ವಾಮೀಜಿ ಅವರು ಒಳ್ಳೆಯ ನಾಯಕತ್ವದ ಗುಣ ಹೊಂದಿರುವವರು. ಅವರೇ ಖುದ್ದಾಗಿ ಕೊಡಗು ಸಂತ್ರಸ್ತರಿಗೆ ಸಾಂತ್ವನ ಹೇಳಬೇಕು. ಈ ಸಮಯದಲ್ಲಿ ಕೊಡವರ ನೋವಿಗಿಂತ ಪ್ರವಾಸಕ್ಕೇ ಆದ್ಯತೆ ಕೊಟ್ಟಿದ್ದು ಸರಿಯಲ್ಲ. ರ್ಯಾಲಿ ಫಾರ್ ರಿವರ್ ಅಭಿಯಾನದಲ್ಲಿ ತಮ್ಮ ಬದಲು ಬೆಂಬಲಿಗರನ್ನೇ ಏಕೆ ಮುಂದೆ ಬಿಡಲಿಲ್ಲ. ಏಕೆಂದರೆ ಆಗ ಅವರಿಗೆ ಪ್ರಚಾರ ಬೇಕಿತ್ತು ಎಂದು ಟ್ವಿಟ್ಟಿಗರು ತಿವಿದಿದ್ದಾರೆ.
ಕಳೆದ ವರ್ಷ ರ್ಯಾಲಿ ಫಾರ್ ರಿವರ್ ಅಭಿಯಾನ ಕೈಗೊಂಡಿದ್ದ ಸದ್ಗುರು ಅವರು ನಾಲ್ಕು ಕೋಟಿ ರೂ. ಹಮ್ಮರ್ ಕಾರು ಹಾಗೂ ಜೀಪ್ ಕಂಪಾಸ್ ಎಸ್‍ಯುವಿ ಮೂಲಕ ಕಾವೇರಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನವರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.