ದಿನದ ಸುದ್ದಿ

ಮನೆಯಿಂದಲೇ ಮತದಾನ ; ಮೇ 6 ರವರೆಗೆ ಮುಂದುವರಿಕೆ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಇದೇ 10 ರಂದು ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಕೇಂದ್ರ ಚುನಾವಣಾ ಆಯೋಗ ಮೊದಲನೆ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡುವ ಕಾರ್ಯಕ್ರಮ ಕಳೆದ ತಿಂಗಳ 29ರಿಂದ ಆರಂಭವಾಗಿದ್ದು ಮೇ.6 ರವರೆಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಛೇರಿ ತಿಳಿಸಿದೆ.

ಹಿರಿಯ ನಾಗರೀಕರು ಹಾಗೂ ದಿವ್ಯಾಂಗರಿಗೆ ಮನೆಯಿಂದಲೇ ಮತದಾನ ಮಾಡುವ ಯೋಜನೆಯಂತೆ ನಮೂನೆ ಅರ್ಜಿ ಸಲ್ಲಿಸಿದವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಮಾಡುವುದಕ್ಕೆ ಅರ್ಜಿ ಸಲ್ಲಿಸಿದವರಿಗೆ ಚುನಾವಣಾ ಸಿಬ್ಬಂದಿಗಳು ಭೇಟಿ ನೀಡಿ ಮನೆಯಿಂದ ಮತದಾನದ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ | ಜಾಹಿರಾತು ಪ್ರಚಾರ ; ಚುನಾವಣಾ ಕಣ್ಗಾವಲು ಸಮಿತಿ ಅನುಮತಿ ಕಡ್ಡಾಯ

ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯ ವರೆಗೆ 11 ಸಾವಿರಕ್ಕೂ ಹೆಚ್ಚು ಹಿರಿಯನಾಗರೀಕರು. ದಿವ್ಯಾಂಗರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಛೇರಿ ವರದಿ ಮಾಡಿದೆ.

ಇದೇ ವೇಳೆ ಅತ್ಯಗತ್ಯ ಸೇವೆಯಲ್ಲಿರುವವರು ಅಂಚೆ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಈ ಮಧ್ಯೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 103ವರ್ಷದ ಹಿರಿಯ ನಾಗರಿಕ ಮಹಾದೇವ್ ಮಹಾಲಿಂಗ್ ಅವರು, ಮತ ಚಲಾಯಿಸಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲೂ ಮಹಾದೇವ್ ಅವರು ಮತದಾನದ ಹಕ್ಕು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸಲು ಮಹಾದೇವ್ ಪ್ರೇರಣೆಯಾಗಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿಯೂ ಮನೆ ಮನೆಯಿಂದ ಮತದಾನ ಮಾಡುವ ಪ್ರಕ್ರಿಯೆ ನಿನ್ನೆಯಿಂದ ಆರಂಭಗೊಂಡಿದ್ದು ಮೇ ೬ರವರೆಗೆ ನೋಂದಾಣಿ ಮಾಡಿಕೊಂಡಿರುವ ಹಿರಿಯ ನಾಯಕರೂ ಹಾಗೂ ದಿವ್ಯಾಂಗರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಚ್.ಎನ್. ಗೋಪಾಲ ಕೃಷ್ಣ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಯೋವೃದ್ಧರು ಹಾಗು ವಿಶೇಷಚೇತನರ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version