ದಿನದ ಸುದ್ದಿ
ಹವಾಮಾನ ವರದಿ
ಸುದ್ದಿದಿನ ಡೆಸ್ಕ್ : ರಾಜ್ಯದ ಕರಾವಳಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪ್ರತಿದಿನ 100 ರಿಂದ 150ಮಿಲಿಮೀಟರ್ ಮಳೆ ಬೀಳುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರ ಆಸ್ತಿ ಹಾಗೂ ಪ್ರಾಣ ಹಾನಿಯಾಗುವುದನ್ನು ತಪ್ಪಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಸೇವೆಗೆ ಟೋಲ್ ಫ್ರೀ ನಂ. 1077ಹಾಗೂ ದೂರವಾಣಿ ಸಂಖ್ಯೆ 08382-229857 ಮೊಬೈಲ್ ಸಂಖ್ಯೆ 9483511015ಕ್ಕೆ ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ. ರಾಜ್ಯದ ಕರಾವಳಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ರಾಜ್ಯಾದ್ಯಂತ ಮಳೆಯಾಗಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಅತಿ ಹೆಚ್ಚು 12ಸೆಂಟಿ ಮೀಟರ್ ಮಳೆಯಾಗಿದೆ. ಭಂಟ್ವಾಳ, ಮೂಡಬಿದ್ರೆ, ನಾಗನಹಳ್ಳಿ 11, ಮಂಗಳೂರು ವಿಮಾನ ನಿಲ್ದಾಣ, ಮೈಸೂರು 9, ಕಾರ್ಕಳ, ಶ್ರೀರಂಗಪಟ್ಟಣ, ಪಾಂಡವಪುರ, ಕೃಷ್ಣರಾಜ ಸಾಗರ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 8, ಯಲ್ಲಾಪುರ, ಮದುಗಿರಿ, ಯಗಟಿ, ಹುಡಕೆರೆ, ಹೊಳೆಹೊನ್ನೂರು, ಮಳವಳ್ಳಿ 7, ಉಡುಪಿ, ಕೊಲ್ಲೂರು, ಕುಮುಟ, ತೊಂಡೆಬಾವಿ, ಕೊಣಂದೂರು, ಚಿಕ್ಕನಾಯಕನ ಹಳ್ಳಿ ತಲಾ 6 ಸೆಂಟಿ ಮೀಟರ್ ಮಳೆಯಾಗಿದೆ.
ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಮಳೆ, ಗುಡುಗು ಸಹಿತ ಭಾರಿ ಮಳೆ ಸಂಭವ. ಕಲಬರಗಿಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು ಸುತ್ತಮುತ್ತ ಮೋಡಕವಿದ ವಾತಾವರಣ, ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆ ನಿರೀಕ್ಷೆ. ಗರಿಷ್ಠ 31, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಂಭವವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243