ದಿನದ ಸುದ್ದಿ
ವಾಟ್ಸಾಪ್‌ನಲ್ಲಿ ಪ್ರೈವೆಸಿ ಇರೋದೇ ಅಪಾಯ… ಸಾರ್..!
ಕ್ರಿಮಿನಲ್ ಮೀಡಿಯಾ ಆಪತ್ತಿನಕಥೆಗಳು
- ರಾಜಾರಾಂ ತಲ್ಲೂರ್
ತಮಾಷೆ ಅನ್ನಿಸ್ತಿದೆ.
ವಾಟ್ಸಾಪ್ ತನ್ನ ಮಾತೃಸಂಸ್ಥೆ ಫೇಸ್‌ಬುಕ್ ಜೊತೆ ಡೇಟಾ ಹಂಚಿಕೊಳ್ಳುವ, ತನ್ನ ಬ್ಯುಸಿನೆಸ್ ಫ್ಲಾಟ್‌ಫಾರಂ ಅನ್ನು ವ್ಯವಸ್ಥಿತಗೊಳಿಸುವ ಹೆಸರಿನಲ್ಲಿ ತನ್ನ ಬಳಕೆ ನೀತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳ ಬಗ್ಗೆ ಸ್ವತಃ ವಾಟ್ಸಾಪ್‌ಗೇ ನಡುಕ ಹುಟ್ಟುವಷ್ಟು ಬೊಬ್ಬೆ ಬಿದ್ದಿದೆ.
ವಾಸ್ತವದಲ್ಲಿ, ವಾಟ್ಸಾಪ್, ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಯಾವುದೇ ಬಳಕೆ ನೀತಿ ಬದಲಾವಣೆ ಮಾಡದೇ ತಮ್ಮ ಹಾಲೀ ಸ್ಥಿತಿಯಲ್ಲೇ ಏನೆಲ್ಲಾ ಡೇಟಾ ಸಂಗ್ರಹಿಸುತ್ತವೆಯೋ, ಅಷ್ಟನ್ನೇ ಒಂದುಕಡೆ ಇಂಟೆಗ್ರೇಟ್ ಮಾಡಿದರೆ ಅಷ್ಟು ಸಾಕು – ಅವುಗಳ ಪ್ರತಿಯೊಬ್ಬ ಬಳಕೆದಾರನೂ ಬೆತ್ತಲಾಗಿ ನಡುಬೀದಿಯಲ್ಲಿ ನಿಲ್ಲಲು.
ಪ್ರಶ್ನೆ ಅದಲ್ಲವೇ ಅಲ್ಲ. ವಾಟ್ಸಾಪ್ ತನ್ನ ಖಾಸಗಿತನದ ಕಾರಣದಿಂದಾಗಿಯೇ ಕ್ರಿಮಿನಲ್ ಮೀಡಿಯಾ. ಖಾಸಗಿತನ ಇಬ್ಬರು ವ್ಯಕ್ತಿಗಳ ನಡುವೆ ಇರುವ ತನಕ ತೊಂದರೆ ಇಲ್ಲ. ಎಲ್ಲ ಸಂದೇಶ ಸಂವಹನ ನಡೆಯುವುದು ಹಾಗೆಯೇ. ಆದರೆ, ಈ ಖಾಸಗಿತನ ಒಂದು ಗುಂಪಿನ ಹಿಡಿತಕ್ಕೆ ಬರುವುದು ಅಪಾಯಕಾರಿ. ಅದು ಎಷ್ಟು ಒಳ್ಳೆಯದಕ್ಕೆ ಬಳಕೆ ಆಗುತ್ತದೆಯೋ ಅದರ ಹತ್ತುಪಾಲು ಕೆಡುಕಿಗೆ ಬಳಕೆ ಆಗುತ್ತದೆ. ಹಾಗಾಗಿ ಅಲ್ಲಿ ನಡೆಯುವ ಗುಂಪಿನ ಸಂವಹನಗಳು ಸಾರ್ವಜನಿಕವಾಗುವ ತನಕ ವಾಟ್ಸಾಪ್ ಯಾವತ್ತಿಗೂ ಕ್ರಿಮಿನಲ್ ಮೀಡಿಯಾವೇ.
ಫೇಕ್ ಸುದ್ದಿಗಳು, ವದಂತಿಗಳು, ಅಪಪ್ರಚಾರಗಳು, ಕಳ್ಳಸಾಗಣೆ, ಕಳ್ಳವ್ಯಾಪಾರ, ಸಮಾಜದ್ರೋಹಿ ಶಕ್ತಿಗಳ ಸಂಘಟನೆ-ಸಮ್ಮಿಲನ-ಸಂಚಲನ… ಇವೆಲ್ಲವಕ್ಕೂ ಕಳೆದ ಏಳು ವರ್ಷಗಳಿಂದೀಚೆಗೆ ಭಾರತದಲ್ಲಿ ಮೂಲ ಯಾವುದು ಎಂದು ಒಮ್ಮೆ ಹಿಂದಿರುಗಿ ನೋಡಿ.
ಮತ್ತೆ ಹೇಳಿ… ವಾಟ್ಸಾಪ್‌ನಲ್ಲಿ ಬೇಕಾದ್ದು ಖಾಸಗಿತನವೇ ಅಥವಾ ಸಾರ್ವಜನಿಕ ಹೊಣೆಗಾರಿಕೆಯೆ?
ಸುದ್ದಿದಿನ.ಕಾಂ|ವಾಟ್ಸಾಪ್|9980346243