ದಿನದ ಸುದ್ದಿ
ಏನಿದು ಜಲಜೀವನ್ ಮಿಷನ್..? ಮಾಹಿತಿಗೆ ಮಿಸ್ ಮಾಡ್ದೆ ಓದಿ
- ಡಾ. ಗಿರೀಶ್ ಮೂಗ್ತಿಹಳ್ಳಿ
ಕೇಂದ್ರ ಸರ್ಕಾರದಿಂದ ಶೇ.50 ಅನುದಾನದ ಅಳತೆಯಲ್ಲಿ ಕರ್ನಾಟಕಕ್ಕೆ 1150 ಕೋಟಿ ರೂ ಅನುದಾನ ಮಂಜೂರಾಗಿದೆ. ಮುಂದಿನ ಮೂರು ವರ್ಷದ ಒಳಗೆ ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಜೋಡಿಸುವ ಗುರಿ ನಿಗದಿಪಡಿಸಲಾಗಿದೆ.
ಏನಿದು ಜಲ ಜೀವನ್ ಮಿಷನ್..?
ಕೇಂದ್ರ ಸರ್ಕಾರ ಜೆ ಜೆ ಮಿಷನ್ ಅನ್ನು ಆಗಸ್ಟ್ 2019 ರಲ್ಲಿ ಘೋಷಿಸಿತು. 2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಸರಬರಾಜು (ಹರ್ ಘರ್ ಜಲ) ಒದಗಿಸುವುದು ಮಿಷನ್‌ನ ಮುಖ್ಯ ಉದ್ದೇಶವಾಗಿದೆ. ದೇಶಾದ್ಯಂತ ಸುಸ್ಥಿರ ನೀರು ಸರಬರಾಜು ನಿರ್ವಹಣೆಯ ಉದ್ದೇಶಗಳನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿವೆ.
ಜಲ ಜೀವನ್ ಮಿಷನ್ ಗುರಿ
ಮಳೆನೀರು ಕೊಯ್ಲು, ಅಂತರ್ಜಲ ಪುನರ್ಭರ್ತಿ ಮತ್ತು ಕೃಷಿಯಲ್ಲಿ ಮರುಬಳಕೆಗಾಗಿ ಮನೆಯ ತ್ಯಾಜ್ಯ ನೀರನ್ನು ನಿರ್ವಹಿಸಲು ಸ್ಥಳೀಯ ಮೂಲಸೌಕರ್ಯಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಜೊತೆಗೆ, ಪಾಯಿಂಟ್ ರೀಚಾರ್ಜ್, ಸಣ್ಣ ನೀರಾವರಿ ಟ್ಯಾಂಕ್‌ಗಳ ನಿರ್ಜಲೀಕರಣ, ಕೃಷಿಗೆ ಗ್ರೇ ವಾಟರ್ ಬಳಕೆ ಮತ್ತು ಮೂಲ ಸುಸ್ಥಿರತೆಯಂತಹ ವಿವಿಧ ನೀರಿನ ಸಂರಕ್ಷಣಾ ಪ್ರಯತ್ನಗಳನ್ನೂ ಆಧರಿಸಿದೆ.
ಮಿಷನ್‌ನ ಅವಶ್ಯಕತೆ ಮತ್ತು ಮಹತ್ವ
ಭಾರತವು ವಿಶ್ವ ಜನಸಂಖ್ಯೆಯ ಶೇ.16 ರಷ್ಟು ಮಾನವ ಸಂಪನ್ಮೂಲ ಹೊಂದಿದೆ, ಆದರೆ ಕೇವಲ ಶೇ. ೪ ರಷ್ಟು ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿದೆ. ಇದರಿಂದಾಗಿ ಅಂತರ್ಜಲ ಮಟ್ಟವನ್ನು ಕುಂಠಿತಗೊಳಿಸುವುದು, ಕಾಡಿನ ಅತಿಯಾದ ಶೋಷಣೆ ಮತ್ತು ಹದಗೆಡುತ್ತಿರುವ ನೀರಿನ ಗುಣಮಟ್ಟ, ಹವಾಮಾನ ಬದಲಾವಣೆ ಇತ್ಯಾದಿ ಸಂಗತಿಗಳು ಕುಡಿಯುವ ನೀರನ್ನು ಒದಗಿಸಲು ಇರುವ ಪ್ರಮುಖ ಸವಾಲುಗಳಾಗಿವೆ.
ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ, ಇಂದು ದೇಶದಲ್ಲಿ ನೀರಿನ ಸಂರಕ್ಷಣೆಯ ತುರ್ತು ಅವಶ್ಯಕತೆಯಾಗಿದೆ. ಆದ್ದರಿಂದ, ಜಲ ಜೀವನ್ ಮಿಷನ್ ಸ್ಥಳೀಯ ಮಟ್ಟದಲ್ಲಿ ಸಮಗ್ರ ಬೇಡಿಕೆ ಮತ್ತು ನೀರಿನ ಪೂರೈಕೆ ನಿರ್ವಹಣೆಯತ್ತ ಗಮನ ಹರಿಸಲಿದೆ.
ಆಕರ
- ‘ಪ್ರಜಾವಾಣಿ’ ಕನ್ನಡ ದಿನ ಪತ್ರಿಕೆ
- ‘ದಿ ಹಿಂದೂ’ ಇಂಗ್ಲಿಷ್ ದಿನ ಪತ್ರಿಕೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243