ರಾಜಕೀಯ
ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಗೆಲ್ಲಬೇಕು ಎಂದರೆ…!
2004 ಈಗಿನಂತಹದ್ದೇ ದೆಹಲಿಯ ಏಪ್ರಿಲ್-ಮೇ ತಿಂಗಳ ಸುಡು ಬಿಸಿಲಿನ ಕಾಲ. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಸೋತು ಜೆಡಿ ಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದ ಹೊತ್ತು. ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳ ಸಂದರ್ಶನ ಮಾಡಲು ಹೊರಟಿದ್ದೆ.
ಮೊದಲು ಧರ್ಮಸಿಂಗ್ ಸಿಕ್ಕರು. ಮೆದು ಸ್ವಭಾವದ, ಬಹಳ ಡಿಪ್ಲೊಮೆಟಿಕ್ ಆಗಿ ಮಾತನಾಡುವ ಧರ್ಮಸಿಂಗ್ ಆ ದಿನ ತೀರಾ ಅಗ್ರೆಸಿವ್ ಆಗಿದ್ದರು. ‘’ಹೌದು, ನಾನು ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಎಂದು ಬರೆಯಿರಿ’’ ಎಂದು ಜೋರು ದನಿಯಲ್ಲಿಯೇ ವಿವರವಾಗಿ ಮಾತನಾಡಿದ್ದರು.
ಅದರ ನಂತರ ಪಕ್ಕದ ರೂಮ್ ನಲ್ಲಿದ್ದ ಖರ್ಗೆ ಬಳಿ ಹೋದೆ. ಅವರು ‘’ ನೋಡ್ರಿ ದಿನೇಶ್, ಈ ಸಂದರ್ಶನ ಎಲ್ಲ ಬೇಡ, ನಮ್ಮಪಕ್ಷ ನಿಮಗೆ ಗೊತ್ತಲ್ಲ, ಹೈಕಮಾಂಡ್ ಗೆ ಇಷ್ಟವಾಗುವುದಿಲ್ಲ. ನೀವೇ ಲೇಖನ ಬರೆದು ಬಿಡಿ, ಸಂದರ್ಶನ ಬೇಡ’’ ಅಂದ್ರು ‘’ ನೋಡಿ ಸಾರ್, ಈಗಾಗಲೇ ನಿಮ್ಮ ಸ್ನೇಹಿತರು ನಾನು ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿಬಿಟ್ಟಿದ್ದಾರೆ. ಅವರಿಗೆ ಹೈಕಮಾಂಡ್ ಭಯ ಇಲ್ವಾ?’’ ಎಂದೆ. ಆಗಲೂ ಹಿಂದೆ ಮುಂದೆ ನೋಡಿದರು. ಅವರ ಜತೆ ನನಗೆ ಸ್ವಲ್ಪ ಸಲಿಗೆ ಇದೆ. ಆ ಕಾರಣಕ್ಕೆ ಸ್ವಲ್ಪ ಸಿಟ್ಟೂ ಬಂದಿತ್ತು. ‘’ ನೋಡಿ ಸಾರ್, ನೀವು ಹೀಗೆ ಹಿಂಜರಿಯುತ್ತಾ ಕೂತರೆ ಮುಖ್ಯಮಂತ್ರಿ ಆಗುವುದೇ ಇಲ್ಲ’’ ಎಂದು ಬಿಟ್ಟೆ, ನಕ್ಕರು. ಕೊನೆಗೂ ಅವರನ್ನು ಸಂದರ್ಶನಕ್ಕೆ ಒಪ್ಪಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು.
2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಇದೇ ಏಪ್ರಿಲ್ ತಿಂಗಳ ಬಿಸಿಲಲ್ಲಿ ಧರ್ಮಸಿಂಗ್ ಮತ್ತು ಖರ್ಗೆ ಅವರ ಜತೆಯಲ್ಲಿ ಎರಡು ದಿನ ಅವರ ಹೆಲಿಕಾಪ್ಟರ್ ನಲ್ಲಿ ಸುತ್ತಿದ್ದೆ. ಆ ದಿನಗಳಲ್ಲಿ ಸಂವಿಧಾನದ 371ಜೆ ತಿದ್ದುಪಡಿಯ ರೂವಾರಿಯಾಗಿದ್ದ ಖರ್ಗೆ ‘’ವಿಕಾಸ ಪುರುಷ’’ನ ಹೊಸ ಅವತಾರದಲ್ಲಿದ್ದರು. ಹೋದಲ್ಲೆಲ್ಲ ಜೈಕಾರ.
ನಮ್ಮ ಹಾರಾಟದ ಮೊದಲ ದಿನ ನಾಲ್ಕು ಕ್ಷೇತ್ರಗಳನ್ನು ಆರಿಸಿಕೊಂಡಿದ್ದರು. ಅದರ ಬಗ್ಗೆ ಹೇಳುತ್ತಾ ‘’ ನೋಡಿ, ನಾವು ಹೋಗುತ್ತಿರುವ ನಾಲ್ಕೂ ಕ್ಷೇತ್ರಗಳಲ್ಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳು ನನ್ನ ಲೋಕಸಭಾ ಚುನಾವಣೆಯಲ್ಲಿ ನನಗೆ ವಿರುದ್ಧವಾಗಿ ಕೆಲಸ ಮಾಡಿದ್ದರು ಗೊತ್ತಾ? ಎಂದರು. ನನಗೆ ಆಶ್ಚರ್ಯವಾಯಿತು.
‘’ ಹಾಗಿದ್ದರೆ ಅವರಿಗೆ ಟಿಕೆಟ್ ತಪ್ಪಿಸಬಹುದಿತ್ತಲ್ಲಾ?’’ ಎಂದೆ.. ‘’ ಛೇ, ಹಾಗೆಲ್ಲ ಮಾಡೋಕ್ಕಾಗುತ್ತಾ, ಅವರಿಗೆ ಟಿಕೆಟ್ ತಪ್ಪಿಸಿದೆ ಎಂದು ತಿಳಿದುಕೊಳ್ಳಿ. ಏನಾಗುತ್ತಿತ್ತು? ಅವರು ಬಂಡುಕೋರರಾಗಿ ಸ್ಪರ್ಧಿಸುತ್ತಿದ್ದರು. ಅದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸೋತುಹೋದರೆ ಅದನ್ನು ಮತ್ತೆ ಕೈಗೆ ತೆಗೆದುಕೊಳ್ಳಲು ಹತ್ತು ವರ್ಷ ಬೇಕು. ಅವರನ್ನು ಗೆಲ್ಲಿಸಿದರೆ ನನ್ನ ಮುಂದಿನ ಚುನಾವಣೆಯಲ್ಲಿಯಾದರೂ ನನ್ನ ಪರವಾಗಿ ಕೆಲಸ ಮಾಡಬಹುದಲ್ಲಾ?’’ ಎಂದರು. ಆ ದಿನ ನಾವು ಹೋಗಿದ್ದ ಎರಡು ಕ್ಷೇತ್ರಗಳಲ್ಲಿ ಒಂದು ಅಫಜಲ್ ಪುರ, ಇನ್ನೊಂದು ಚಿಂಚೋಳಿ. (ಆಗಲೂ ಚಿಂಚೋಳಿ ಬೀದರ್ ಲೋಕಸಭೆಗೆ ಸೇರಿತ್ತು)
ಕಾಂಗ್ರೆಸ್ ಪಕ್ಷದಲ್ಲಿ ‘’ ಸೋಲಿಸುವ ರಾಜಕಾರಣ’’ ದ ಪಂಟರ್ ಗಳಿದ್ದಾರೆ. ಅವರ ಜೊತೆ ಮಾತನಾಡುವಾಗೆಲ್ಲ ಖರ್ಗೆಯವರ ಜತೆಗಿನ ಈ ಮಾತುಕತೆಯನ್ನು ತಪ್ಪದೆ ಹೇಳುತ್ತೇನೆ. ಒಳಗುದ್ದುಗಳ ಮೂಲಕ ‘’ಸೋಲಿಸುವ ರಾಜಕಾರಣ’’ದ ಮೂಲಕ ರಾಜಕೀಯವಾಗಿ ಗೆದ್ದವರು ಕಡಿಮೆ ಎನ್ನುವದು ನನ್ನ ಅನುಭವ.
ಮಲ್ಲಿಕಾರ್ಜುನ ಖರ್ಗೆಯವರ ಜತೆಗಿನ ಈ ಎರಡು ಮಾತುಕತೆಗಳಲ್ಲಿ ನನಗೆ ಕಂಡದ್ದು ಅವರ ಪ್ರಶ್ನಾತೀತ ಪಕ್ಷ ನಿಷ್ಠೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪಕ್ಷ ನಿಷ್ಠೆಯಿಂದಾಗಿ ಅವರಿಗೆ ರಾಜಕೀಯದಲ್ಲಿ ಲಾಭಕ್ಕಿಂತ ನಷ್ಟವಾದುದೇ ಹೆಚ್ಚು. ಯಾರಿಗೆ ಗೊತ್ತು, ಮುಂದಿನ ದಿನಗಳಲ್ಲಿ ಅವರಿಗಾಗಲಿರುವ ದೊಡ್ಡ ರಾಜಕೀಯ ಲಾಭವಾಗಿ ಬಿಟ್ಟರೆ, ಹಿಂದಿನ ದಿನಗಳ ರಾಜಕೀಯ ನಷ್ಟಗಳು ಸಣ್ಣಪುಟ್ಟ ಎಂದು ಅನಿಸಿಬಿಡಬಹುದು. ಹಾಗಾಗಲಿ. ಆ ದೊಡ್ಡ ಲಾಭದ ಸಾಧ್ಯತೆ ಯಾವುದೆಂದು ಬಿಡಿಸಿ ಹೇಳಬೇಕೇ?
–ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9980346243