ಭಾಮಿನಿ

ಮಹಿಳೆಯರು ಯಾಕೆ ಚಳವಳಿಯಲ್ಲಿ ಭಾಗವಹಿಸಬೇಕು?

Published

on

ಒಂದು ದೇಶದ ಅಭಿವೃದ್ದಿಯು ಆ ದೇಶದ ಮಹಿಳಾ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ. ಅಲ್ಲಿ ಮಹಿಳೆ ಸರ್ವತೋಮುಖ ಅಭಿವೃದ್ದಿ ಹೊಂದಿದ್ದಾಳೆಂದರೆ ಆ ದೇಶವು ಅಭಿವೃದ್ದಿ ಹೊಂದಿದೆ ಎಂದರ್ಥ. ಮಹಿಳೆಯರು ಮುಂಚೂಣಿಯಲ್ಲಿರದ ಚಳವಳಿಗಳು ಅಪೂರ್ಣ. ಇವು ಮಹಿಳೆಯರ ಅಭಿವೃದ್ದಿ ಸ್ಥಾನಮಾನಗಳನ್ನು ಕುರಿತಾದ ಮಹಾ ಮಾತುಗಳು.

ಗೌರವಾನ್ವಿತ ಭಾರತೀಯ ಮಹಿಳಾ ಬಂಧುಗಳೇ,ನಮ್ಮದು ಮೂಲ ಭಾರತದ್ದು ಮಾತೃ ಪ್ರಧಾನ ಸಮಾಜ.ಆದರೆ ನಿಮಗೆಲ್ಲಾ ತಿಳಿದಿರುವಂತೆ ಕ್ರಿ.ಪೂ 1800 ರ ಸುಮಾರಿಗೆ ಭಾರತಕ್ಕೆ ವಲಸೆ ಬಂದ ಆ ಅನಿಷ್ಟ ಅಲೆಮಾರಿ ಆರ್ಯರ ಆಗಮನದಿಂದ ಮತ್ತು ಅವರ ದಬ್ಬಾಳಿಕೆಯಿಂದ ಇಡೀ ಭಾರತವೇ ಹೋಳಾಯಿತು.. ಹಾಳಾಯಿತು. ಮೂಲ ಭಾರತೀಯರು ಸಾವಿರಾರು ಜಾತಿಗಳಾಗಿ ಒಡೆದು ಗುಲಾಮರಾದರು. ಆ ಆರ್ಯವೈದಿಕ ಪುರುಷಪ್ರಧಾನ ವ್ಯವಸ್ಥೆಯಲ್ಲಿ “ಹೆಣ್ಣು” ದಾಸಿಯಾದಳು..!

ಆರ್ಯೋತ್ತರ ಭಾರತದ ಮೊಮ್ಮೊದಲ ಮಹಿಳಾಸಮಾನತಾ ಮಹಾಹೋರಾಟಗಾರ ಮಾತೃಹೃದಯಿ ಭಗವಾನ್ ಬುದ್ಧರು ಮೊಟ್ಟಮೊದಲ ಬಾರಿಗೆ ಹೆಣ್ಣೆಂದರೆ ಸದಾ ಅನ್ಯರ ಅನುಕಂಪಕ್ಕೆ ಒಳಗಾಗಬೇಕಿರುವ ಅಬಲೆಯಲ್ಲ; ಆಕೆ ಎಲ್ಲದಕ್ಕೂ ಅರ್ಹಳು ಎಲ್ಲರೀತಿಯಲ್ಲಿ ಎಲ್ಲರಿಗೂ‌ ಸಮಾನಳು ಎಂಬುದನ್ನು ಸಾರಿದರು ಅದರಂತೆಯೇ ಮಾಡಿತೋರಿಸಿದರು.. ಮುಂದೆ ಬೌದ್ಧದೊರೆ ಸಾಮ್ರಾಟ್ ಅಶೋಕನ ಕಾಲಕ್ಕೆ ಹೆಣ್ಣು ಸಂಪೂರ್ಣ ಸ್ವತಂತ್ರಳೂ ಸಕಲಗೌರವಾರ್ಹಳೂ ಆದಳು.

ಆದರೆ ಬೌದ್ಧಸಾಮ್ರಾಟ ಅಶೋಕನ ವಂಶವನ್ನು ನಿರ್ನಾಮ ಮಾಡಿದ ( ಕ್ರಿ.ಪೂ 185 ರಲ್ಲಿ) ಪುಷ್ಯಮಿತ್ರ ಶುಂಗನೆಂಬ ಕ್ರೂರಿ ಅಸಮಾನತಾವಾದಿ ಬ್ರಾಹ್ಮಣ ರಾಜನು ಸುಮತೀಭಾರ್ಗವನೆಂಬ ಮತ್ತೊಬ್ಬ ವಿಕೃತ ಬ್ರಾಹ್ಮಣ ಪಂಡಿತನಿಂದ “ಮನುಸ್ಮೃತಿ” ಎಂಬ ಕಾನೂನಿನ ಪುಸ್ತಕ (ಪುರಾತನ ಸಂವಿಧಾನ) ಬರೆಯಿಸಿ ಬೌದ್ಧಭಾರತದಲ್ಲಿ ಸಂಪೂರ್ಣ ಗೌರವಪಾತ್ರಳೂ ಸ್ವತಂತ್ರಳೂ ಆಗಿದ್ದ “ಸ್ತ್ರೀ” ಗೆ ತಮ್ಮ ಆರ್ಯವೈದಿಕ ಭಾರತದಲ್ಲಿ ಎಲ್ಲ ರೀತಿಯ ಸ್ವಾತಂತ್ರ್ಯ ಮತ್ತು ಗೌರವಗಳನ್ನು ಕಸಿದು ಹಾಕಿ ಆಕೆಯನ್ನು (ಬ್ರಾಹ್ಮಣ ಸ್ತ್ರೀಯರನ್ನೂ ಒಳಗೊಂಡಂತೆ) ಗಂಡಿನ ದಾಸಿಯನ್ನಾಗಿ ಮಾಡಿ
ಹೆಣ್ಣಿಗೆ ವಿದ್ಯೆ ಆಸ್ತಿ ಅಧಿಕಾರ ಮತ್ತು ಗೌರವಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು..! ಹೆಣ್ಣೆಂದರೆ ಮದುವೆಗೂ ಮುಂಚೆ ಅಪ್ಪನೆಂಬ ಗಂಡಿನ ನಿಯಂತ್ರಣದಲ್ಲಿ ಮದುವೆಯ ನಂತರ ಗಂಡನೆಂಬ ಗಂಡಿನ ನಿಯಂತ್ರಣದಲ್ಲಿಯೂ ಮುಪ್ಪಿನಲ್ಲಿ ಮಗನೆಂಬ ಗಂಡಿನ ನಿಯಂತ್ರಣದಲ್ಲಿಯೂ ಕಡ್ಡಾಯವಾಗಿ ಇರಬೇಕು “ನಃ ಸ್ತ್ರೀ ಸ್ವಾತಂತ್ರ್ಯಂ” ಎಂದು ಘೋಷಿಸಿ ಬರೆಯಿಸಿ ಹಾಗೆಯೇ 2000 ವರ್ಷಗಳ ಕಾಲ ಹೆಣ್ಣನ್ನು ಗುಲಾಮಳನ್ನಾಗಿ ಮಾಡಿ ಕೊಂಚವೂ ಸ್ವಂತ ಆಸೆ ಆಕಾಂಕ್ಷೆ ಗೌರವ ಸ್ವಾತಂತ್ರ್ಯ ಗಳಿರದ ಪ್ರಾಣಿಗಳಿಗಿಂತಲೂ ಕೀಳಾಗಿ ಹೆಣ್ಣುಕುಲವನ್ನು ನಡೆಸಿಕೊಳ್ಳಲಾಯಿತು..!

ಹೀಗೆಯೇ ಎರಡು ಸಾವಿರ ವರ್ಷಗಳ ಕಾಲ ನಲುಗಿಹೋದ ಸಮಸ್ತ ಹೆಣ್ಣುಕುಲ ಬ್ರಿಟಿಷರ ಕಾಲದಲ್ಲಿ ಸಾರ್ವರ್ತಿಕ ಶಿಕ್ಷಣ ಪದ್ಧತಿ ಜಾರಿಯಾದರೂ ಯಾವೊಬ್ಬ ಹೆಣ್ಣೂ ಶಾಲೆಯ ಹತ್ತಿರ ಸುಳಿಯಲಿಲ್ಲ ಬ್ರಾಹ್ಮಣ್ಯದ ಶಾಸ್ತ್ರದ ಭಯ ಮತ್ತು ಗಂಡುಸಮಾಜದ ದರ್ಪ ದಬ್ಬಾಳಿಕೆಯಿಂದ ಕೇವಲ ಒಲೆಮುಂದೆ ಅನ್ನಬೇಯಿಸುವ ಮತ್ತು ಗಂಡಿಗೆ ತನ್ನ ಸರ್ವಸ್ವವನ್ನು ಅರ್ಪಿಸಿ ಮಕ್ಕಳನ್ನು ಹೆರುವ ಯಂತ್ರದಂತೆಯೇ ಜೀವನ ಜೀಕುತ್ತಿದ್ದ ಹೆಣ್ಣು ಮೊಟ್ಟಮೊದಲಿಗೆ ಶಿಕ್ಷಣ ಕಲಿತದ್ದು (ಬ್ರಾಹ್ಮಣ ಮಹಿಳೆಯರನ್ನೂ ಸೇರಿದಂತೆ) 1848 ರಲ್ಲಿ. ಜ್ಯೋತಿಬಾ ಫುಲೆಯವರ ಛಲದಿಂದ ಮತ್ತು ಸಾವಿತ್ರಿಫುಲೆಯವರ ಒಲವಿಂದ..! (ಅದರ ಇತಿಹಾಸ ನಿಮಗೆ ಗೊತ್ತು ಎಂದು ಭಾವಿಸುತ್ತೇನೆ) ಸಾವಿತ್ರಿಫುಲೆಯವರು ಇಂದು ಪ್ರತಿ ವಿದ್ಯಾವಂತ ಭಾರತೀಯ ಹೆಣ್ಣುಮಕ್ಕಳ ಆರಾಧ್ಯದೈವವಾಗಬೇಕು ಗುರುಣಿಯಾಗಬೇಕು ಮಾದರಿಯಾಗಬೇಕು ಜೀವ ಇರುವವರೆಗೂ ಅವರನ್ನು ಸ್ಮರಿಸುತ್ತಾ ಋಣಿಯಾಗಿರಬೇಕು..! (ಆದರೀಗ ನಾವು ದುರ್ಗೆ ಚಾಮುಂಡಿ ಸರಸ್ವತಿ ಲಕ್ಷ್ಮಿ ಮುಂತಾದ ಕೊಲೆಗಡುಕ ಅಥವಾ ಕಲ್ಪಿತ ದೇವರುಗಳಿಗೆ ಕೈಮುಗಿಯುತ್ತಾ ಯಾವ ಶಾಸ್ತ್ರ ಪುರಾಣ ವೇದ ಸ್ಮೃತಿ ಗಳು ಹೆಣ್ಣನ್ನು ಸರ್ವನಾಶ ಮಾಡಿ ನಗುತ್ತಿತ್ತೋ ಅದೇ ಧರ್ಮದ ಮೂಢನಂಬಿಕೆಯ ಬಲೆಯಲ್ಲಿ ಸಿಕ್ಕಿ ನರಳುತ್ತಿದ್ದೇವೆ.. ಅಜ್ಞಾನಿಗಳಾಗಿದ್ದೇವೆ..) ಇರಲಿ,
ಮುಂದೊಂದು ದಿನ ಎಲ್ಲರ ಮನಸುಗಳೂ ಪರಿವರ್ತನೆಯಾಗುವ ಭರವಸೆ ನನಗಿದೆ. ಸತ್ಯವನ್ನು ಸೂರ್ಯನನ್ನು ಹೆಚ್ಚು ಕಾಲ ಬಚ್ಚಿಡಲು ಸಾಧ್ಯವಿಲ್ಲ..!

ಮುಂದೆ ಸ್ವಾತಂತ್ರ್ಯಾ ನಂತರದ ಆಧುನಿಕ ಭಾರತದಲ್ಲಿ ಸಮಸ್ತ ಮಹಿಳೆಯರ ಪರವಾಗಿ ಮಹಿಳಾಹಕ್ಕುಗಳ ಪರವಾಗಿ ಮಹಿಳಾ ಸಮಾನತೆಯ ದನಿಯಾಗಿ ಹಗಲಿರುಳು ಹೋರಾಡಿ ಗೆದ್ದವರು ಮತ್ತು ಇಂದಿಗೂ ಬ್ರಾಹ್ಮಣ ಮಹಿಳೆಯರಿಂದ ಹಿಡಿದು OBC,ST,SC, ಮುಸ್ಲಿಂ ಕ್ರೈಸ್ತ ಮುಂತಾದ ಎಲ್ಲಾ ಜಾತಿ ಧರ್ಮದ ಮಹಿಳೆಯರು ಶಾಶ್ವತವಾಗಿ ಮತ್ತು ಸಹಜವಾಗಿ ಅನುಭವಿಸುತ್ತಿರುವ ಪ್ರತಿಯೊಂದು ನಾಗರೀಕ ಸಾಮಾಜಿಕ ಹಕ್ಕುಗಳಾದ ಶಿಕ್ಷಣ, ಪದವಿ, ಉದ್ಯೋಗ, ಮಹಿಳಾ ಮೀಸಲಾತಿ, ರಾಜಕಾರಣ, ಬರೆಯುವ, ಮಾತನಾಡುವ, ಆಸ್ತಿಹೊಂದುವ ಹಕ್ಕು, ವಿಚ್ಛೇದನದ ಹಕ್ಕು , ಸ್ವತಂತ್ರವಾಗಿ ಬದುಕುವ ಹಕ್ಕು, ಸಂಘಟನೆಗಳಲ್ಲಿ‌ ಭಾಗವಹಿಸುವ ಹಕ್ಕು ಮೆಟೆರ್ನಿಟಿ ಲಿವ್ ನಂತಹ ಹತ್ತುಬಹಲವಾರು ಮಹಿಳೆಯರ ಸಾಂವಿಧಾನಿಕ ವಿಶೇಷ ಹಕ್ಕು ಅಧಿಕಾರ ಸವಲತ್ತು…. ಒಂದೊಂದೂ ದೊರೆತಿರುವುದು ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರ ಹೋರಾಟದ ಫಲ ಮತ್ತು ಬಾಬಾಸಾಹೇಬ್ ರಚಿತ ಸಂವಿಧಾನದಿಂದ..!

ಈ ದೇಶದ ಪ್ರತಿ ಜಾತಿಯ ಪ್ರತಿಧರ್ಮದ ಹೆಣ್ಣುಮಕ್ಕಳು ಅದರಲ್ಲಿಯೂ ವಿದ್ಯಾವಂತ ಮಹಿಳೆಯರು ತಂಪುಹೊತ್ತಿನಲ್ಲಿ ದೀಪಹಚ್ಚಿ ಸದಾ ಸ್ಮರಿಸಿ ನಮಿಸಿ ಕೈಮುಗಿಯಬೇಕಿರುವುದು ಇರದ ಮುಕ್ಕೋಟಿ ದೇವತೆಗಳಿಗಲ್ಲ.., ಬದಲಾಗಿ ತಮ್ಮ‌ಇಂದಿನ ಇರುವಿಕೆಗೆ ಬೇಷರತ್ ಕಾರಣಕರ್ತರಾದ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರಿಗೆ.!! ಜೊತೆಜೊತೆಗೆ ಅದೆಂಥ ಕಡುಕಷ್ಟದಲ್ಲಿಯೂ ಅವರಿಗೆ ಇಂಬಾಗಿ ನಿಂತು ತನ್ನಂಥ ಕೋಟ್ಯಾಂತರ ಮಹಿಳೆಯರ ಕತ್ತಲ ಬಾಳಿಗೆ ಬೆಳಕು ಹಚ್ಚಲು ಬಾಬಾಸಾಹೇಬರನ್ನೇ ಸಮಾಜಕ್ಕೆ ತ್ಯಾಗಮಾಡಿ ಸವೆದು ಮಾಯವಾದ ರಮಾಬಾಯಿ ಅಂಬೇಡ್ಕರರಿಗೆ..!!

ಇಂದು ನಮ್ಮ ಕಣ್ಣೆದುರಿಗೆ ಭಗವಾನ್ ಬುದ್ಧ ಫುಲೆದಂಪತಿಗಳ ಮತ್ತು ಬಾಬಾಸಾಹೇಬ್- ದಾದಾಸಾಹೇಬರನ್ನೊಳಗೊಂಡ ಎಲ್ಲ ನಮ್ಮ ಮಹಾಪೂರ್ವಿಕರ ಕನಸುಗಳನ್ನು ಸಾಕಾರಗೊಳಿಸಲು ತನ್ನ ವಯಕ್ತಿಕ ಜೀವನವನ್ನೇ ತ್ಯಾಗಮಾಡಿ ಮದುವೆಯಾಗದೆ ಹಗಲಿರುಳು ಭಾರತದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೆ ದುಡಿಯುತ್ತಿರುವ ಮಹಾತ್ಯಾಗಿ ಮಹಾಮಹಿಳೆ ಜಗತ್ತಿನೆಲ್ಲರಿಂದ ಉಕ್ಕಿನ ಮಹಿಳೆ ಎನಿಸಿಕೊಂಡಿರುವ ಅಕ್ಕಾ ಮಾಯಾವತಿಯವರು ಎಲ್ಲಾ ಹೆಣ್ಣುಕುಲಕ್ಕೆ ಮಾದರಿಯಾಗಬೇಕು..! ಮಯಾವತಿಯವರನ್ನು ಇಡೀ ಮಹಿಳಾಕುಲ ತಮ್ಮ ಪ್ರತಿನಿಧಿಯಂತೆ ನೋಡಬೇಕೆ ಹೊರತು ಜಾತಿಹಿನ್ನೆಲೆಯಿಂದಲೋ ಒಂದು ಪಕ್ಷಕ್ಕೆ ಸೀಮಿತಮಾಡಿಯೋ‌ ನೋಡಬೇಕಿಲ್ಲ. ಅಕ್ಕ ಮಾಯಾವತಿಯವರು ಇಡೀ ಮಹಿಳಾಕುಲದ ಧೈರ್ಯದ ತ್ಯಾಗದ ಸಂಕೇತ..! ಮಹಿಳಾಕುಲಕ್ಕೆ ಹೆಮ್ಮೆಯ ಸಂಕೇತ..! ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ ಎದೆಯೊಳಗೆ ಭಾರತದ ಇಡೀ ಶೋಷಿತ ಸಮುದಾಯದ ವಿಮೋಚನೆಯ ಬಗ್ಗೆ ಅಪಾರ ಕಾಳಜಿ ಇರಿಸಿಕೊಂಡಿದ್ದ ಸಾಮಾನ್ಯ ಶಿಕ್ಷಕಿ ಈ ದೇಶಕಂಡ ಆಧುನಿಕ ಭಾರತದ ಬಹುಜಪ್ರವಾದಿ ಕಾನ್ಷಿರಾಂಜಿಯವರ ಒಡಗೂಡುವಿಕೆ ಮತ್ತು ಮಾರ್ಗದರ್ಶನದಿಂದ ಭಾರತದ ಬಹುದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ‌ ನಾಲ್ಕುಬಾರಿ ಮುಖ್ಯಮಂತ್ರಿ ಯಾಗುವುದು ಸಾಮಾನ್ಯ ವಿಚಾರವೇನಲ್ಲ. ಅದರ ಹಿಂದಿರುವ ಕಾಳಜಿ ಶ್ರಮ ಧೈರ್ಯ ತ್ಯಾಗ ಅನನ್ಯವಾದದ್ದು.. !

ಹೀಗೆ ಭಾರತೀಯ ಮಹಿಳೆಯರ ಏಳಿಗೆಗಾಗಿ ದುಡಿದ ದುಡಿಯುತ್ತಿರುವ ಮಹಾಪುರುಷ ಮತ್ತು ಮಹಾನಾರಿಯರ ತ್ಯಾಗದಿಂದ ಎಲ್ಲವನ್ನೂ ಅನುಭವಿಸುತ್ತಿರುವ ಪ್ರಮುಖವಾಗಿ ವಿದ್ಯಾವಂತ ಮಹಿಳೆಯರು ಆ ಮಹಾನ್ ತ್ಯಾಗಿಗಳಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದರೆ.. ಅವರ ಕನಸುಗಳನ್ನು ಸಾಕಾರಗೊಳಿಸುವ ಚಳವಳಿಗಳಲ್ಲಿ ತಮ್ಮನ್ನು ತಾವು ಸ್ವ ಇಚ್ಛೆಯಿಂದ ತೊಡಗಿಸಿಕೊಳ್ಳುವ ಮೂಲಕ. ‘ಯಾರೋ ಹೋರಾಟ ಮಾಡುತ್ತಾರೆ ನಮಗ್ಯಾಕೆ ‘ ಎಂದು ನಿರ್ಲಿಪ್ತರಾಗದೆ ನಿಮಗೆ ಆದಾಗ ಆಗುವಷ್ಟು ಆಗುವ ರೀತಿಯಲ್ಲಿ‌ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚಳವಳಿಯಲ್ಲಿ ದಯಮಾಡಿ ಭಾಗವಹಿಸಿ. ಎಂಬುದು ನನ್ನೆಲ್ಲಾ ಗೌರವಾನ್ವಿತ ಮಹಿಳೆಯರಲ್ಲಿ ಕಳಕಳಿಯ ಮನವಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version