ದಿನದ ಸುದ್ದಿ
ನಿರುದ್ಯೋಗಿ ಪುರುಷನಿರಬಹುದು ಆದರೆ, ನಿರುದ್ಯೋಗಿ ಮಹಿಳೆ ಇರುವುದಿಲ್ಲ : ಎಸ್ ಪಿ ಹನುಮಂತರಾಯ
ಸುದ್ದಿದಿನ, ದಾವಣಗೆರೆ : ನಿರುದ್ಯೋಗಿ ಪುರುಷ ಇರಬಹುದು. ಆದರೆ ನಿರುದ್ಯೋಗಿ ಮಹಿಳೆ ಇರುವುದಿಲ್ಲ. ಎಲ್ಲ ಮಹಿಳೆಯರೂ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಕೆಲವರಿಗೆ ಮಾತ್ರ ಸಂಬಳ ಬರುತ್ತದೆ ಎನ್ನುವ ಮೂಲಕ ಹೆಣ್ಣಿನ ಅವಿರತ ಪರಿಶ್ರಮದ ಬಗ್ಗೆ ಹೇಳಿದ ಅವರು ಶಿಕ್ಷಣ ಮತ್ತು ಮಾಹಿತಿ ಹೆಣ್ಣನ ಸಬಲೀಕರಣಕ್ಕೆ ರಹದಾರಿಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ನುಡಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಹೆಣ್ಣಿನ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಅನೇಕ ಕಾಯ್ದೆ ಕಾನೂನುಗಳನ್ನು ತರಲಾಗಿದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಟಾನದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದರು.
ಇದನ್ನೂ ಓದಿ | ಇಡೀ ಪ್ರಪಂಚ ನಿಂತಿರುವುದು ಹೆಣ್ಣೆಂಬ ಅಸ್ತಿತ್ವದ ಮೇಲೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಜಿಲ್ಲೆಯಲ್ಲಿ ಒಂದು ಮಹಿಳಾ ಠಾಣೆ ಇದ್ದು, ಜಿಲ್ಲೆಯ ಯಾವುದೇ ಭಾಗದ ಮಹಿಳೆಯರು ಇಲ್ಲಿ ದೂರು ನೀಡಬಹುದು ಮತ್ತು ಪ್ರಕರಣಗಳ ತನಿಖೆ ಕೈಗೊಳ್ಳಬಹುದು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಇದೆ. ಇದೀಗ ಜಿಲ್ಲೆಯಲ್ಲಿ ಸಹಾಯವಾಣಿ ಸಂಖ್ಯೆ 112 (ಇಎಸ್‍ಎಸ್‍ಆರ್-ಎಮರ್ಜೆನ್ಸಿ ರೆಸ್ಪಾನ್ಸಿವ್ ಸಪೋರ್ಟ್ ಸಿಸ್ಟಂ) ಗೆ ಕರೆ ಮಾಡಿದರೆ ತಕ್ಷಣ ನಿಯೋಜಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಸಹಾಯ ಮಾಡುವರು. ಜಿಲ್ಲೆಯಾದ್ಯಂತ ಒಟ್ಟು 16 ಜೀಪ್ ಮತ್ತು ಅಧಿಕಾರಿಗಳು ಇದಕ್ಕೆ ನಿಯೋಜನೆಗೊಂಡಿರದ್ದಾರೆ ಎಂದು ಮಾಹಿತಿ ನೀಡಿದರು.
ಮಹಿಳೆಯರ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಎನ್‍ಜಿಓ ಗಳು, ಸಾಂತ್ವನ ಕೇಂದ್ರ, ಒನ್ ಸ್ಟಾಪ್ ಸೆಂಟರ್ ಸಖಿ ಇದ್ದು ತೊಂದರೆಯಲ್ಲಿರುವ ಹೆಣ್ಣು ಮಕ್ಕಳು ಇವುಗಳ ಸದುಪಯೋಗ ಪಡೆಯಬಹುದು ಎಂದರು.
ಕೌಟುಂಬಿಕ ಹಿಂಸೆ ಕಾಯ್ದೆ ಒಂದು ಪ್ರಮುಖ ಕಾಯ್ದೆಯಾಗಿದ್ದು ವಯಸ್ಸಾದವರು, ಶೋಷಿತ ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ಮತ್ತು ಪರಿಹಾರ ಪಡೆಯಬಹುದಾಗಿದ್ದು, ಇಂತಹ ಕಾಯ್ದೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಹೊಂದಬೇಕು ಎಂದರು.
ಮಹಿಳೆಯರು ಮತ್ತು ರೈತರಲ್ಲಿ ಅಗಾಧ ಶಕ್ತಿ ಮತ್ತು ಸಹನೆ ಇದ್ದು, ಈ ಶಕ್ತಿಗೆ ಚಾಲನೆ ನೀಡುವ ಚಾಲಕರಾಗಬೇಕು. ನಿಮ್ಮೊಳಗೆ ಜಾಗೃತಿ ಮೂಡಿ ಮುನ್ನಗ್ಗಬೇಕೆಂದ ಅವರು ಇಲಾಖೆ ಸದಾ ನಿಮ್ಮೊಟ್ಟಿಗೆ ಇದೆ ಎಂದು ಭರವಸೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243