ಅಂತರಂಗ
ದ್ವೇಷ ರಾಜಕೀಯದ ವಿರುದ್ಧ ಬರಹಗಾರರ ಮನವಿ
ಭಾರತದ ಉದ್ದಗಲದಲ್ಲಿ ಇರುವ 200 ಕ್ಕೂ ಹೆಚ್ಚಿನ ಬರಹಗಾರರು ಸಹಿ ಮಾಡಿದ ಮನವಿಯೊಂದನ್ನು ಬಿಡುಗಡೆ ಮಾಡಿದ್ದಾರೆ. “ನಾವು ದ್ವೇಷ ರಾಜಕೀಯದ ವಿರುದ್ಧ ಮತ ನೀಡೋಣ. ನಾವು ಸಮಾನ ಹಾಗೂ ಬಹುತ್ವ ಭಾರತಕ್ಕಾಗಿ ಮತ ನೀಡೋಣ” ಎಂದಿದ್ದಾರೆ.
ಭಾರತದ ಬರಹಗಾರರ ವೇದಿಕೆಯ ಪರವಾಗಿ ಕೆ.ಸಚ್ಚಿದಾನಂದನ್ ಮತ್ತು ಗೀತಾ ಹರಿಹರನ್ ಇಮೈಲ್ ಮೂಲಕ ಸೋಮವಾರ ಈ ಹೇಳಿಕೆ ನೀಡಿದ್ದಾರೆ.
“ನಮ್ಮ ದೇಶವಿಂದು ಚುನಾವಣೆಯ ಸಂದರ್ಭದಲ್ಲಿ ಕವಲು ದಾರಿಯಲ್ಲಿದೆ. ನಮ್ಮ ಸಂವಿಧಾನವು ತನ್ನ ಪ್ರಜೆಗಳಿಗೆ ಸಮಾನ ಹಕ್ಕುಗಳನ್ನು, ತಿನ್ನುವ, ಆರಾಧಿಸುವ ಹಾಗೂ ಬಯಸಿದಂತೆ ಬದುಕುವ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನತೆಯ ಹಕ್ಕನ್ನು ಖಾತ್ರಿಗೊಳಿಸಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಜನರನ್ನು ಅವರ ಕೋಮು, ಜಾತಿ, ಲಿಂಗ, ಅಥವಾ ಪ್ರದೇಶದ ಆಧಾರದಲ್ಲಿ ಬಡಿದು ಕೊಲ್ಲುವ ಅಥವಾ ಹಲ್ಲೆ ಮಾಡುವ ಅಥವಾ ತಾರತಮ್ಯ ತೋರುವ ಸಂಗತಿಗಳನ್ನು ನೋಡುತ್ತಿದ್ದೇವೆ.”
“ದ್ವೇಷ ರಾಜಕೀಯವು ದೇಶವನ್ನು ಒಡೆಯುತ್ತಿದೆ; ಭೀತಿ ಹುಟ್ಟಿಸುತ್ತಿದೆ; ಮತ್ತು ಹೆಚ್ಚು ಹೆಚ್ಚು ಜನರನ್ನು ಪೂರ್ಣ ಪ್ರಜೆಗಳಾಗಿ ಬದುಕದಂತೆ ಮಾಡುತ್ತಿದೆ. ಬರಹಗಾರರು, ಕಲಾವಿದರು, ಸಂಗೀತಗಾರರು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಬೇಟೆಯಾಡಲಾಗುತ್ತಿದೆ, ಹೆದರಿಸಲಾಗುತ್ತಿದೆ ಮತ್ತು ಸೆನ್ಸಾರ್ ಗೆ ಒಳಪಡಿಸಲಾಗುತ್ತಿದೆ. ಆಳುವವರನ್ನು ಪ್ರಶ್ನಿಸುವವರಿಗೆ ಕಿರುಕುಳ ನೀಡಲಾಗುತ್ತಿದೆ ಅಥವಾ ಸುಳ್ಳು ಹಾಗೂ ಹಾಸ್ಯಾಸ್ಪದ ಆರೋಪ ಹೊರಿಸಿ ಬಂಧಿಸಲಾಗುತ್ತಿದೆ.”
“ಇದು ಬದಲಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ವಿಚಾರವಾದಿಗಳು, ಬರಹಗಾರರು ಮತ್ತು ಕಾರ್ಯಕರ್ತರನ್ನು ಬೇಟೆಯಾಡುವ ಅಥವಾ ಹತ್ಯೆಮಾಡುವುದನ್ನು ನಾವು ಬಯಸುವುದಿಲ್ಲ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಲ್ಪ ಸಂಖ್ಯಾತರ ಮೇಲೆ ಮಾತಿನ ಅಥವಾ ಕೃತ್ಯಗಳ ಮೂಲಕ ನಡೆಯುತ್ತಿರುವ ಹಿಂಸೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಬಯಸುತ್ತೇವೆ.
ಎಲ್ಲರಿಗೂ ಉದ್ಯೋಗ, ಶಿಕ್ಷಣ, ಸಂಶೋಧನೆ, ಆರೋಗ್ಯಸೇವೆ ಮತ್ತು ಸಮಾನ ಅವಕಾಶಗಳು ಸಿಗುವಂತೆ ಸಂಪನ್ಮೂಲ ಹಾಗೂ ಕ್ರಮ ಕೈಗೊಳ್ಳುವಂತಾಗಬೇಕೆಂದು ನಾವು ಬಯಸುತ್ತೇವೆ. ಜನರ ಐಕ್ಯತೆ ಒಡೆಯುವವರನ್ನು ಸೋಲಿಸಿ, ಅಸಮಾನತೆಯನ್ನು ಹೊಡೆದೋಡಿಸಿ, ಹಿಂಸೆ, ಭಯೋತ್ಪಾದನೆ ಮತ್ತು ಸೆನ್ಸಾರ್ ಮಾಡುವವರಿಗೆ ಮತ ಹಾಕಬೇಡಿ. ಈ ರೀತಿಯಲ್ಲಿ ನಮ್ಮ ಸಂವಿಧಾನದ ಆಶ್ವಾಸನೆಗಳನ್ನು ಮರುಸ್ಥಾಪಿಸುವ ಭಾರತವನ್ನು ನಾವು ಆಯ್ಕೆ ಮಾಡೋಣ. ಆದ್ದರಿಂದಲೇ ನಾವು ದೇಶದ ಎಲ್ಲಾ ಪ್ರಜೆಗಳಲ್ಲಿ ಮನವಿ ಮಾಡುತ್ತೇವೆ – ಬಹುತ್ವ ಮತ್ತು ಸಮಾನ ಭಾರತಕ್ಕಾಗಿ ಮತ ನೀಡಿ ಎಂದು.”
ಹಿಂದಿ, ಇಂಗ್ಲಿಷ್, ಪಂಜಾಬಿ, ಮರಾಠಿ, ಗುಜರಾತಿ, ಬಂಗಾಳಿ, ಮಲಯಾಳಂ, ಕನ್ನಡ, ತೆಲುಗು, ತಮಿಳು, ಉರ್ದು, ಕಾಶ್ಮೀರಿ ಮತ್ತು ಕೊಂಕಣಿ ಭಾಷೆಗಳಲ್ಲಿ ಬರೆಯುವ ಮತ್ತು ಕೆಲಸಮಾಡುವ ಎಲ್ಲರೂ ಸೇರಿ ಈ ಮನವಿಯನ್ನು ಮಾಡುತ್ತಿದ್ದೇವೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.thequint.com/news/india/vote-against-hate-politics-over-200-writers-appeal-to-indians
ಸುದ್ದಿದಿನ.ಕಾಂ|ವಾಟ್ಸಾಪ್|9986715401