ದಿನದ ಸುದ್ದಿ
ಸೋಲಿಗರ ಹಾಡಿಯಲ್ಲಿ ಜಿ.ಪಂ. ಸಿಇಒ ವಾಸ್ತವ್ಯ..!
ಸುದ್ದಿದಿನ ಡೆಸ್ಕ್ : ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಮುತ್ತುಗದ ಗದ್ದೆ ಪೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ಬುಧವಾರ ರಾತ್ರಿ ಆಗಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್‌ಕುಮಾರ್ ಅವರನ್ನು ಬುಡಕಟ್ಟು ಜನರು ಗೊರುಕನ ನೃತ್ಯ ಮತ್ತು ಹಾಡಿನೊಂದಿಗೆ ಬರಮಾಡಿಕೊಂಡರು.
ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿವಿಧ ಇಲಾಖೆಗ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಹಾಗೂ ಬುಡಕಟ್ಟು ಜನಾಂಗದವರೊಂದಿಗೆ ಸಮಾಲೋಚನೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ರಾತ್ರಿ 7ಗಂಟೆ ಸಮಯಕ್ಕೆ ಮುತ್ತುಗದ ಗದ್ದೆ ಪೋಡಿಗೆ (ಹಾಡಿಗೆ) ಜಿ.ಪಂ. ಸಿಇಒ ಹರೀಶ್‌ಕುಮಾರ್ ಆಗಮಿಸಿದರು. ಸೋಲಿಗ ಬುಡಕಟ್ಟು ಜನರು ಅವರನ್ನು ಕಾಡು ಹೂ ನೀಡಿ ಸ್ವಾಗತಿಸಿದರು. ನಂತರ ಗೊರುಕನ ನೃತ್ಯದ ಮೂಲಕ ಬರ ಮಾಡಿಕೊಂಡರು.
ಸಿಇಒ ಅವರ ಆಗಮನದ ಹಿನ್ನೆಲೆಯಲ್ಲಿ ಪೋಡನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಸ್ತೆಯಲ್ಲಿ ರಂಗೋಲಿ ಹಾಕಲಾಗಿತ್ತು.
ಸ್ವಾಗತ ಮುಗಿಯುತ್ತಿದ್ದಂತೆ ಪೋಡಿನ ಮುಖಂಡರು, ಕೆಲ ಅಹವಾಲುಗಳನ್ನು ಸಿಇಒ ಮುಂದೆ ಹೇಳಿಕೊಂಡರು. ತಮ್ಮ ಹಾಡಿಗೆ ಆನೆಗಳು ಬರಬಾರದಂತೆ ಅರಣ್ಯ ಇಲಾಖೆಯಿಂದ ಕಂದಕ ತೋಡಲಾಗಿದೆ. ಆದರೆ ಆ ಆನೆ ಕಂದಕ ಅಗಲ ಮತ್ತು ಆಳ ಇಲ್ಲ. ಹಾಗಾಗಿ ಆನೆಗಳು ಕಂದಕ ದಾಟಿ ತಮ್ಮ ಫಸಲುಗಳನ್ನು ನಾಶ ಪಡಿಸುತ್ತಿವೆ. ಅಲ್ಲದೇ ಹಾಡಿಗೂ ಬರುತ್ತಿವೆ. ಇದರಿಂದ ಭಯಭೀತರಾಗ್ದಿದೇವೆ. ಆನೆಕಂದಕವನ್ನು ಅಗಲ ಮತ್ತು ಆಳ ಮಾಡಬೇಕು ಎಂದು ಮನವಿ ಮಾಡಿದರು.
ಅಲ್ಲದೇ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನ ನಮಗೆ ದೊರಕುತ್ತಿಲ್ಲ. ನಮಗೆ ಕೂಲಿ ನೀಡುತ್ತಿಲ್ಲ. ಇದರಿಂದ ನಿರುದ್ಯೋಗಿಗಳಾಗಿದ್ದೇವೆ. ಕೆಲವರು ಬೇರೆ ರಾಜ್ಯಗಳಿಗೂ ವಲಸೆ ಹೋಗಿದ್ದಾರೆ. ಆದ್ದರಿಂದ ಉದ್ಯೋಗ ಕೊಡಿಸಬೇಕು ಎಂದು ಅಹವಾಲು ತೋಡಿಕೊಂಡರು. ಸಮರ್ಪಕವಾಗಿ ಪಡಿತರ ಚೀಟಿ ವಿತರಣೆ ಮಾಡಿಲ್ಲ. ಮಾಸಾಶನ, ವೃದ್ದಾಪ್ಯ ವೇತನ ಸರಿಯಾಗಿ ದೊರಕಿಲ್ಲ ಎಂದು ದೂರಿದರು.
ನಮ್ಮ ಹಾಡಿಗಳಿಗೆ ಸೋಲಾರ್ ದೀಪ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ವ್ಯವಸ್ಥೆ ಇದ್ದರೂ ಸಮರ್ಪಕವಾಗಿಲ್ಲ. ಹೀಗಾಗಿ ತೊಂದರೆಯಾಗಿದೆ. ಆದ್ದರಿಂದ ಸೋಲಾರ್ ಮೂಲಕ ವಿದ್ಯುದ್ದೀಪ ವ್ಯವಸ್ಥೆ ಕಲ್ಪಿಸಿ, ರಾತ್ರಿ ವೇಳೆ ಅರಣ್ಯ ಪ್ರಾಣಿಗಳಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನ, ಮತ್ತು ವಾಸಕ್ಕೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಯೋಗೇಶ್, ಮಾಜಿ ಆಧ್ಯಕ್ಷೆ ಕೇತಮ್ಮ, ಸೋಲಿಗ ಸಮುದಾಯದ ಮುಖಂಡ ಸಿ. ಮಾದೇಗೌಡ, ಬಿಳಿಗಿರಿರಂಗನ ಬೆಟ್ಟ ಗ್ರಾಪಂ ಅಧ್ಯಕ್ಷೆ ಸುಮಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಕೃಷ್ಣಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಗಿರಿಜನರು ಭಾಗವಹಿಸಿದ್ದರು.
ಹಾಡಿಯಲ್ಲಿ ಸಿಇಒ ವಾಸ್ತವ್ಯ ಮಾಡಿದರು. ಅಧಿಕಾರಿಗಳು ಜತೆಯಲ್ಲಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401